‘ಆದಿತ್ಯನಾಥ್ ಭಾಷಣ ಸಂವಿಧಾನ ವಿರೋಧ’09-01-2018

ಮಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆಯೇ ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಅನ್ನಭಾಗ್ಯ ಯೋಜನೆಯನ್ನು ಟೀಕೆ ಮಾಡುತಿದ್ದ ಬಿಜೆಪಿ, ಇದೀಗ ಅದು ನಮ್ಮ ಯೋಜನೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಿಲ್ಲ ಕೇಂದ್ರದಲ್ಲಿಯೂ ಉತ್ತಮ ಕೆಲಸ ಮಾಡದೇ ಪುಕ್ಕಟೆ ಪ್ರಚಾರ ಪಡೆಯುವ ಪ್ರಯತ್ನ ಮಾಡುತ್ತಿದೆ ಎಂದು, ರಾಜ್ಯ ಮತ್ತು ಕೇಂದ್ರ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ವಲಸೆ ಕಾರ್ಮಿಕಗಾರಿಗೆ ಯಾವುದೇ ಯೋಜನೆ ಕೇಂದ್ರ ಸರ್ಕಾರದಿಂದ ಇಲ್ಲ. ಈ ಕುರಿತಂತೆ ವಲಸೆ ಕಾರ್ಮಿಕರಿಗೆ ಸೌಲಭ್ಯ ನೀಡಲು ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಬಶೀರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗ ಆಗಲಿದೆ ಎಂದರು.

ಬೈಂದೂರ್ ನಲ್ಲಿ ನಡೆದ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮ, ಅಲ್ಲಿಗೆ ಬಂದವರು ಬಡವರು. ಕೊಲ್ಲೂರು ಮೂಕಾಂಬಿಕಾ ದೇವಾಲದಿಂದ ಊಟ ಪೂರೈಕೆ ಮಾಡಿರುವುದುಕ್ಕೆ ಟೀಕೆ ಮಾಡುವುದು ಸರಿಯಲ್ಲ ಎಂದರು. ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನೈಜ ವಿಷಯ ಪೊಲೀಸ್ ತನಿಖೆಯಿಂದ ತಿಳಿದು ಬರಲಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶದಿಂದ ಬಂದು, ನಮ್ಮ ರಾಜ್ಯದ ಬಗ್ಗೆ ಮಾತನಾಡೋದು ಸಂವಿಧಾನ ವಿರೋಧ, ನಮ್ಮ ಆಡಳಿತದ ಬಗ್ಗೆ ಮಾತನಾಡೋದು ಪ್ರಜಾ ಪ್ರಭುತ್ವಕ್ಕೆ ವಿರೋಧ ಎಂದು ಹೇಳಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಅಪರಾಧ ಸಂಖ್ಯೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿವೆ, ಗೋರಖ್ ಪುರದಲ್ಲಿ ಮಕ್ಕಳ ಸರಣಿ ಸಾವು ನಡೆದಿದೆ, ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸುಟ್ಟು ಹಾಕಿದ್ದಾರೆ, ಪರಿಸ್ಥಿತಿ ಹೀಗಿರುವಾಗ ಅಲ್ಲಿನ ಸಿಎಂ ಬಂದು ನಮ್ಮ ರಾಜ್ಯದ ಆಡಳಿತದ ಬಗ್ಗೆ ಮಾತನಾಡುತ್ತಾರೆ ಎಂದು ಯೋಗಿ ವಿರುದ್ಧ ಸಿಡಿಮಿಡಿಗೊಂಡರು.

ಕರ್ನಾಟಕದಲ್ಲಿ ಹಣಕಾಸಿನ ವ್ಯವಸ್ಥೆ ಉತ್ತಮವಾಗಿದೆ,  ಜನರನ್ನು ಕೋಮುವಾದಕ್ಕೆ ತಳ್ಳುವಂತೆ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ. ನಮ್ಮ ಅಧ್ಯಕ್ಷರು ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋದರೆ ಸಾಫ್ಟ್ ಹಿಂದುತ್ವ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಇನ್ ಕ್ಲೂಸಿವ್ ಹಿಂದುತ್ವ, ಎಲ್ಲರನ್ನೂ ಜೊತೆಯಾಗಿ ತೆಗದುಕೊಂಡು ಹೋಗುವುದು ನಮ್ಮ ಹಿಂದುತ್ವ. ಬಿಜೆಪಿಯವರಿಗೆ ಹಿಂದುತ್ವವನ್ನು ಯಾರಾದರೂ ಗುತ್ತಿಗೆ ಕೊಟ್ಟಿದ್ದಾರಾ.? ಎಂದು ಪ್ರಶ್ನಿಸಿದ ಅವರು ಇದರ ಬಗ್ಗೆ ಮೊದಲು ಬಿಜೆಪಿ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

parameshwar Yogi Adityanath ಹಿಂದುತ್ವ ಅಧ್ಯಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ