ಬಾರ್ ನಲ್ಲಿ 5 ಮಂದಿ ಸಜೀವ ದಹನ

fire accident in Bar and restaurant 5 died

08-01-2018

ಬೆಂಗಳೂರು: ಕಳಾಸಿಪಾಳ್ಯದ ಬಾರ್ ಅಂಡ್ ರೆಸ್ಟೋರೆಂಟ್‍ವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ನಿನ್ನೆ ಮಧ್ಯರಾತ್ರಿ ರಾತ್ರಿ ಕೆಲಸ ಮುಗಿಸಿ ನಿದ್ದೆಗೆ ಜಾರಿದ್ದ ಐವರು ಕಾರ್ಮಿಕರು ಬೆಂಕಿಯ ಕೆನ್ನಾಲಗೆಗೆ ಸಜೀವ ದಹನವಾಗಿದ್ದಾರೆ. ಕಲಾಸಿ ಪಾಳ್ಯದ ಕೆ.ಆರ್.ಪೇಟೆಯಲ್ಲಿರುವ ಕೈಲಾಶ್ ಬಾರ್ ನಲ್ಲಿ ಮುಂಜಾನೆ 3ರ ವೇಳೆ ಸಂಭವಿಸಿರುವ ಅಗ್ನಿ ದುರಂತದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಸ್ವಾಮಿ (23), ಪ್ರಸಾದ್ (20), ಮಹೇಶ್ (35), ಹಾಸನದ ಮಂಜುನಾಥ್ (45), ಮಂಡ್ಯದ ಕೀರ್ತಿ (24) ಮಲಗಿದ್ದ ಮಗ್ಗುಲಲ್ಲೇ ಮೃತಪಟ್ಟಿದ್ದಾರೆ.

ರಾತ್ರಿ 2.30ರ ವೇಳೆ ಮೊದಲಿಗೆ ಕಟ್ಟಡದ ಕೆಳಮಹಡಿಯಲ್ಲಿ ಸಾಕಷ್ಟು ವಿದ್ಯುತ್ ವೈರ್ ಗಳಿರುವ  ಜಂಕ್ಷನ್ ಬಾಕ್ಸ್ ನಲ್ಲಿ ಕಾಣಿಸಿಕೊಂಡ ಬೆಂಕಿ, ಕ್ರಮೇಣ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿದೆ. ಈ ವೇಳೆ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದವರು ಹೊಗೆ ಬರುತ್ತಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ  3 ಅಗ್ನಿಶಾಮಕ ವಾಹನಗಳು ಆಗಮಿಸಿ. 25 ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಟ್ಟಡಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಬಾರ್ ನಿಂದ ಹೊರಬರಲಾಗದಂತೆ ಬೆಂಕಿ ಆವರಿಸಿದ್ದರಿಂದ ತಪ್ಪಿಸಿಕೊಳ್ಳಲು ಹೋದ ಮೃತರಲ್ಲಿ ಮೂವರು ಶೌಚಾಲಯದ ಒಳಗೆ ಹೋಗಿದ್ದು, ಅಲ್ಲಿ ಅವರೆಲ್ಲರೂ ಉಸಿರುಗಟ್ಟಿ ಸಾವನ್ನಪ್ಪಿದರೆ ಉಳಿದಿಬ್ಬರು ಕ್ಯಾಶ್ ಕೌಂಟರ್ ಬಳಿ ಬಂದು ಅಲ್ಲಿ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಬಾರ್ ಕಟ್ಟಡ ಸುಮಾರು 20 ರಿಂದ 30 ವರ್ಷಗಳ ಹಳೆಯದಾಗಿದ್ದು ಬೆಂಕಿ ಕಾಣಿಸಿಕೊಂಡರೇ ಕೈಗೊಳ್ಳಬೇಕಾದ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಅಲ್ಲದೇ ಕಟ್ಟಡದಲ್ಲಿ ಯಾವುದೇ ಎಮರ್ಜಿನ್ಸಿ ಎಕ್ಸಿಟ್ ಇಲ್ಲದ ಕಾರಣ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಡಿಸಿಪಿ ಅನುಚೇತ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ ಮಾಹಿತಿ ಪಡೆದಿದ್ದಾರೆ. ಬಾರ್ ಮಾಲೀಕ ಆರ್.ವಿ.ದಯಾಶಂಕರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಕಳಾಸಿಪಾಳ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಬೆಂಕಿ ಅವಘಡದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಘೋಷಿಸಿದ್ದಾರೆ. ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೇಳಿಕೆ ಇಂಥ ಘಟನೆ ನಡೆಯಬಾರದು, ಪ್ರಾಥಮಕ ತನಿಖೆಯ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ ಎಂದರು. ಬೆಂಕಿ ಅವಘಡವನ್ನು ತನಿಖೆಗೆ ಆದೇಶಿಸಲಾಗಿದ್ದು ತನಿಖೆಯ ವರದಿ ಬಳಿಕ ಸಂಬಂಧ ಪಟ್ಟವರ ವಿರುದ್ದ ಕ್ರಮ ಕೈಗೋಳ್ಳಲಾಗುವುದು ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ