ಕುಖ್ಯಾತ ಕಳ್ಳ ಎಸ್ಕೇಪ್ ಕಾರ್ತಿಕ್‍ ಅರೆಸ್ಟ್

Notorious Thief Escape Karthik Arrested

06-01-2018

ಬೆಂಗಳೂರು: ಮನೆಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕನ್ನಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್‍ನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿ, 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಇನ್ನಿತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಲ್ಯಾಣ ನಗರದ ಪ್ರಕೃತಿ ಲೇಔಟ್‍ನ ಎಸ್ಕೇಪ್ ಕಾರ್ತಿಕ್ (28) ಕೊತ್ತನೂರು, ಹಾಸನ, ಮೈಸೂರು, ಇನ್ನಿತರ ಕಡೆಗಳಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ. ಬಂಧಿತ ಕಾರ್ತಿಕ್‍ನಿಂದ 30 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. ಚಿನ್ನಾಭರಣಗಳು, ಹವಳ, ರೂಬಿ ಒಡವೆಗಳು, ಮೂರು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಹೆಣ್ಣೂರಿನ ಕುಮಾರ್ ಹಾಗೂ ಜಗನ್ ಜೊತೆ ಸೇರಿ ಕನ್ನಗಳವು ಮಾಡುತ್ತಿದ್ದ ಎಂದರು.

ಆರೋಪಿಯ ಬಂಧನದಿಂದ ಕೊತ್ತನೂರಿನ 5, ಹಾಸನದ 2, ಮೈಸೂರಿನ 1 ಸೇರಿದಂತೆ, 8 ಪ್ರಕರಣಗಳು ಪತ್ತೆಯಾಗಿವೆ. ಈತನಿಂದ ಕಳವು ಮಾಲುಗಳನ್ನು ಸ್ವೀಕರಿಸಿರುವ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್‍ನ ಮಾಲೀಕ ಬೊಮ್ಮನಹಳ್ಳಿ ಬಾಬು, ನಿರ್ದೇಶಕಿ ಊರ್ಮಿಳಾ ಸತ್ಯನಾರಾಯಣ್ ಹಾಗೂ ಕ್ವೀನ್ಸ್ ರಸ್ತೆಯ ಶಾಖೆಯ ಮ್ಯಾನೇಜರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊತ್ತನೂರಿನಲ್ಲಿ ನಡೆದ ಕನ್ನಗಳವು ಪ್ರಕರಣದ ಜಾಡು ಹಿಡಿದ ಕೊತ್ತನೂರು ಪೊಲೀಸ್ ಇನ್ಸ್ ಪೆಕ್ಟರ್ ಹರಿಯಪ್ಪ ಹಾಗೂ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇವಲ 6ನೇ ತರಗತಿಗೆ ಶಾಲೆಯನ್ನು ಬಿಟ್ಟು 16ನೇ ವಯಸ್ಸಿನಲ್ಲಿಯೇ ಕಳ್ಳತನಕ್ಕೆ ಇಳಿದಿದ್ದ ಎಸ್ಕೇಪ್ ಕಾರ್ತಿಕ್ ಹೆಣ್ಣೂರಿನ ಮನೆಯೊಂದರಲ್ಲಿ 10 ಲಕ್ಷ ರೂ. ಗಳನ್ನು ಕಿಟಕಿಯ ಮೂಲಕ ಒಳಗೆ ನುಗ್ಗಿ ಕಳವು ಮಾಡಿದ್ದ. ಅಷ್ಟೊಂದು ಪ್ರಮಾಣದ ಹಣ ಸಿಕ್ಕಿದ್ದರಿಂದ ಅಲ್ಲಿಂದ ಇಲ್ಲಿಯವರೆಗೆ ಕಳ್ಳತನವನ್ನು ವೃತ್ತಿ ಮಾಡಿಕೊಂಡಿದ್ದನು. ಸಂಜೆ ವೇಳೆಯಲ್ಲಿ ತನ್ನ ಸಹಚರರ ಜೊತೆ ನಗರದ ವಿವಿಧೆಡೆ ಸಂಚರಿಸುತ್ತ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಕನ್ನಗಳವು ಮಾಡಿ, ಅಟ್ಟಿಕಾ ಗೋಲ್ಡ್, ಮುತ್ತೋಟ್ ಫೈನಾನ್ಸ್, ಇನ್ನಿತರ ಗಿರವಿ ಅಂಗಡಿಗಳಲ್ಲಿ ಅಡಮಾನ ಇಡುವುದು, ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ.

ಸಿಸಿಬಿ ಪೊಲೀಸರು 2007 ರಲ್ಲಿ ಕಾರ್ತಿಕ್‍ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಕೈದಿಗಳಿಗೆ ಊಟ ಸರಬರಾಜು ಮಾಡಲು ಬಂದಿದ್ದ ಇಸ್ಕಾನ್ ಸಂಸ್ಥೆಯ ಊಟದ ವಾಹನದ ಕೆಳಗಿನ ಚಾರ್ಸಿ ಬಳಿ ಅವಿತು ಕುಳಿತು ಪರಾರಿಯಾಗಿದ್ದ.  ಅದಾದ 45 ದಿನಗಳ ನಂತರ ಆರೋಪಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿಂದ ಈತ ಎಸ್ಕೇಟ್ ಕಾರ್ತಿಕ್ ಎಂದು ಹೆಸರು ಪಡೆದಿದ್ದ. ಆರೋಪಿಯ ವಿರುದ್ಧ ಇಲ್ಲಿಯವರೆಗೆ ನಗರ ಹಾಗೂ ಇತರ 25 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಾಣಸವಾಡಿಯಲ್ಲಿ 18 ಕನ್ನಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಾರ್ತಿಕ್, ಜೀವನ್ ಭೀಮಾ ನಗರದಲ್ಲಿ 9, ಕೊತ್ತನೂರಿನಲ್ಲಿ 6, ಕೆ.ಜಿ. ಹಳ್ಳಿ 4, ಹೆಣ್ಣೂರು - ಇಂದಿರಾನಗರದಲ್ಲಿ ತಲಾ 3 ಸೇರಿದಂತೆ, 70 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ವಿವರಿಸಿದರು. ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ನಗದು ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರಿದ್ದರು.


ಸಂಬಂಧಿತ ಟ್ಯಾಗ್ಗಳು

arrest escape ಕನ್ನಗಳ್ಳ ನಿರ್ದೇಶಕಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ