ಥಿಯೇಟರ್‌ನಲ್ಲಿ ಹೊರಗಿನ ತಿಂಡಿಗೇಕೆ ನಿಷೇಧ?

Why should film viewers buy food from theatres: HC to Maha govt

05-01-2018

ನೀವು ಓರಿಯನ್ ಮಾಲ್, ಮಂತ್ರಿ ಮಾಲ್, ಗರುಡ ಮಾಲ್ ಇತ್ಯಾದಿ ಮಾಲ್‌ಗಳಲ್ಲಿರುವ ಮಲ್ಟಿಪ್ಲೆಕ್ಸ್ ಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿರುವ ಎಲ್ಲ ಸಿನೆಮಾ ಥಿಯೇಟರ್‌ಗಳಿಗೆ ಹೋಗಿದ್ದರೆ ಇಂಥ ಒಂದು ಅನುಭವ ಆಗಿಯೇ ಇರುತ್ತದೆ. ಮಲ್ಟಿಪ್ಲೆಕ್ಸ್ ಅಥವ ಸಿನೆಮ ಹಾಲ್ ಪ್ರವೇಶಿಸುವ ಮುನ್ನವೇ ನಿಮ್ಮ ಬ್ಯಾಗ್ ಚೆಕ್ ಮಾಡುತ್ತಾರೆ. ನೀವೇನಾದರೂ ತಿಂಡಿ, ತೀರ್ಥ ವಗೈರೆ ತಂದಿದ್ದರೆ ಅದನ್ನು ಹೊರಗೇ ಬಿಟ್ಟು ಒಳಗೆ ಹೋಗಬೇಕು. ಆನಂತರ ನಿಮಗಾಗಲಿ, ಮಕ್ಕಳು, ವಯಸ್ಸಾದವರು, ಯಾರಿಗೆ ಆಗಲಿ ಏನಾದರೂ ತಿನ್ನಬೇಕು ಅನ್ನಿಸಿದರೆ, ಥಿಯೇಟರ್‌ ನವರೇ ವ್ಯವಸ್ಥೆ ಮಾಡಿರುವ ವಿವಿಧ ಬಗೆಯ ಅಂಗಡಿಗಳಲ್ಲಿ ಮಾರುವ ಬಹುತೇಕ ಜಂಕ್ ಫುಡ್ ಅನ್ನಬಹುದಾದದ್ದನ್ನು ತಿನ್ನಬೇಕು, ಅದಕ್ಕೂ ಕೂಡ ಒಂದಕ್ಕೆರಡು ದುಬಾರಿ ಬೆಲೆ ಕೊಡಬೇಕು.

ಸಾಕಷ್ಟು ಬಾರಿ ಇದನ್ನೆಲ್ಲ ಅನುಭವಿಸಿದ್ದರೂ ನಾವುಗಳು ಇದನ್ನು ಪ್ರಶ್ನಿಸದೆ, ಅದು ಯಾವುದೋ ಸಂವಿಧಾನದಲ್ಲಿರುವ ನಿಯಮವೇನೋ ಎಂಬಂತೆ ಸುಮ್ಮನಾಗಿದ್ದೇವೆ. ಆದರೆ ಈ ಬಗ್ಗೆ ಒಬ್ಬರು, ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್ ಅಂದರೆ, ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಅರ್ಥಾತ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದಾರೆ. ಥಿಯೇಟರ್‌ಗಳ ಆವರಣಕ್ಕೆ ಹೊರಗಿನಿಂದ ತಂದ ತಿಂಡಿ ತಿನಿಸು ಕೊಂಡೊಯ್ಯುವುದನ್ನು ನಿರ್ಬಂಧಿಸುವ ಯಾವುದೇ ಕಾನೂನು ಜಾರಿಯಲ್ಲಿ ಇಲ್ಲ, ಹೀಗಿದ್ದರೂ ಇಂಥ ಕ್ರಮ ಏಕೆ ಎಂದು ಪ್ರಶ್ನಿಸಿರುವ ಹೈಕೋರ್ಟ್, ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಹೊರಗಿನ ತಿಂಡಿ ಬಳಕೆ ನಿಷೇಧಿಸುವುದರಿಂದ ಹಿರಿಯ ನಾಗರಿಕರು ಮತ್ತು ಆನಾರೋಗ್ಯ ಪೀಡಿತರು ಕಡ್ಡಾಯವಾಗಿ ಜಂಕ್ ಫುಡ್ ತಿನ್ನುವಂತಾಗುತ್ತದೆ. ಹೀಗಾಗಿ, ಯಾರಾದರೂ ಸಿನೆಮಾ ಹಾಲ್‌ಗಳ ಒಳಕ್ಕೆ ಆಯುಧ ಅಥವ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ತಡೆಯಬೇಕಷ್ಟೇ ಹೊರತು, ತಿಂಡಿ ತಿನಿಸುಗಳನ್ನು ವಶಪಡಿಸಿಕೊಳ್ಳುವುದು ಏಕೆ ಎಂದು ಕೋರ್ಟ್ ಪ್ರಶ್ನಿಸಿದೆ.

ಒಟ್ಟಿನಲ್ಲಿ, ಮಹಾರಾಷ್ಟ್ರದಲ್ಲೇನಾದರೂ ಥಿಯೇಟರ್‌ಗಳ ಇಂಥ ಕ್ರಮ ಅನೂರ್ಜಿತವಾದರೆ, ಕರ್ನಾಟಕದಲ್ಲೂ ಅದೇ ಆಗಬಹುದು. ಆಗ, ಹೊರಗಿನ ತಿಂಡಿಯನ್ನೂ ಒಳಗೆ ತೆಗೆದುಕೊಂಡು ಹೋಗಲು ನಮಗೂ ಆವಕಾಶ ಸಿಗಬಹುದು. ಆದರೆ, ಇಲ್ಲಿ ಒಂದು ಪ್ರಾಬ್ಲಮ್ ಕೂಡ ಇದೆ, ಎಲ್ಲವನ್ನೂ ಒಳಗೆ ತೆಗೆದುಕೊಂಡು ಹೋಗಲು ಬಿಟ್ಟರೆ, ಒಂದು ಶೋ ಮುಗಿಯುವಷ್ಟರಲ್ಲಿ ಸಿನೆಮಾ ಥಿಯೇಟರ್ ಅನ್ನುವುದು, ಬಿಬಿಎಂಪಿಯವರ ಕಸದ ಡಂಪಿಂಗ್ ಯಾರ್ಡ್ ಆಗಿಬಿಡಬಹುದು. ಹೀಗಾಗಿ, ಯಾವುದನ್ನು ಒಯ್ಯಬಹುದು, ಯಾವುದು ಬೇಡ ಅನ್ನುವುದು ಮತ್ತು ಸಿನೆಮಾ ಹಾಲ್‌ನಿಂದ ಹೊರಗಿರುವ ಆವರಣದಲ್ಲಷ್ಟೇ ಆಹಾರ ಪದಾರ್ಥ ಸೇವನೆಗೆ ಅವಕಾಶ ಕೊಡುವುದು ಸೂಕ್ತ.


ಸಂಬಂಧಿತ ಟ್ಯಾಗ್ಗಳು

Junk food PIL ಸಿನೆಮಾ ಹಾಲ್‌ ಪ್ರಾಬ್ಲಮ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ