ಕಾಂಗ್ರೆಸ್ ಕಾರ್ಯಕರ್ತನ ಭೀಕರ ಕೊಲೆ

Horrific Murder in electronic city bangalore

05-01-2018

ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ಸತೀಶ್ ರೆಡ್ಡಿ ಅಲಿಯಾಸ್ ಕಲ್ಕೆರೆ ಸತೀಶ್ ರೆಡ್ಡಿಯನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ದುರ್ಘಟನೆ  ಎಲೆಕ್ಟ್ರಾನಿಕ್ಸ್ ಸಿಟಿಯ ಬಿಂಗೀಪುರದ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಕಲ್ಕೆರೆ ಸತೀಶ್ ರೆಡ್ಡಿ (28) ಅವರು ಕಾರುಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು. ಬೆಳಿಗ್ಗೆ 8ರ ವೇಳೆ ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ತನ್ನ ಪತ್ನಿಯನ್ನು ಬಿಟ್ಟು ಸತೀಶ್ ಅವರು ಬೈಕ್‍ನಲ್ಲಿ ವಾಪಾಸ್ಸಾಗುತ್ತಿದ್ದರು.

ಈ ವೇಳೆ ಎರಡು ಬೈಕ್ ಗಳಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಬಂಗೀಪುರದ ಹುಲುವಳ್ಳಿಯ ಬಳಿಯ ರಸ್ತೆಯಲ್ಲಿ ಸತೀಶ್ ಅವರನ್ನು ಅಡ್ಡಗಟ್ಟಿ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಹಲ್ಲೆಗೊಳಗಾದ ಸತೀಶ್ ಅವರು ಕೆಲ ದೂರ ಓಡಿ ಖಾಲಿ ಜಾಗದಲ್ಲಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸತೀಶ್ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಸತೀಶ್ ಗಂಭೀರ ಗಾಯಗೊಂಡಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆಯಾದ ಸತೀಶ್ ರೆಡ್ಡಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿ ವಾಪಸ್ಸಾಗಿದ್ದು, ಈತನನ್ನು ಬನ್ನೇರುಘಟ್ಟ ಪೊಲೀಸ್ ಠಾಣೆಯ ರೌಡಿ ಶೀಟರ್ ಪಟ್ಟಿಗೆ ಸೇರಿಸುವ ತಯಾರಿ ನಡೆಯುತ್ತಿತ್ತು ಎನ್ನಲಾಗಿದೆ. ಅಷ್ಟರಲ್ಲಿ ಸತೀಶ್ ರೆಡ್ಡಿ ಕೊಲೆಯಾಗಿ ಹೋಗಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಪರಿಚಯಸ್ಥರೇ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

Murder Silicon city ದುಷ್ಕರ್ಮಿ ಕ್ರಿಮಿನಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ