‘ಶಾಂತಿಗೆ ಭಂಗ ತಂದರೆ ಕಠಿಣ ಕ್ರಮ’

Cm siddaramaiah waring

05-01-2018

ಚಿಕ್ಕಮಗಳೂರು: ಮಂಗಳೂರಿನ ಯುವಕ ದೀಪಕ್ ರಾವ್ ಕೊಲೆ ಆಗಬಾರದಿತ್ತು. ಅವರ ಕುಟುಂಬದವರಿಗೆ ಸರ್ಕಾರ ಸಾಂತ್ವನ ಹೇಳಿ ಪರಿಹಾರ ನೀಡಿದೆ. ಆದರೆ ಬಿಜೆಪಿಯವರು ಹಿಂದೂ ಕೊಲೆಯಾಗಿದೆ ಎಂದು ಹೇಳಿ ಅಲ್ಲಿಗೆ ಹೋಗಿ ಗಲಾಟೆ ಮಾಡುತ್ತಿದ್ದಾರೆ. ಹಿಂದುತ್ವವನ್ನು ಅವರು ಗುತ್ತಿಗೆ ಪಡೆದಿದ್ದಾರೆಯೇ ? ನಾವು ಹಿಂದೂಗಳಲ್ಲವೇ? ಎಂದು ಸಿಎಂ ಆಕ್ರೋಶಗೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ ಸಿಎಂದ ಸಿದ್ದರಾಮಯ್ಯ, ಪಿಎಫ್ಐ, ಭಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ಕೋಮುವಾದಿ ಸಂಘಟನೆಗಳು ಯಾವುದೇ ಆದರೂ ಜಾತಿ, ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸುವ ಪ್ರಯತ್ನ ಮಾಡಿದರೆ, ಶಾಂತಿಗೆ ಭಂಗ ತಂದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಮಹದಾಯಿ ವಿಚಾರದಲ್ಲಿ ಮಾತುಕತೆ ನಡೆಸಲು ಸಭೆ ಕರೆಯುವಂತೆ ಗೋವಾ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ಕೊಡದೆ ಅವರು ಏನೇನೋ ಹೇಳುತ್ತಿದ್ದಾರೆ. ಅಂತರರಾಜ್ಯ ಜಲ ವಿವಾದಗಳಲ್ಲಿ ನದಿ ನೀರು ಹಂಚಿಕೆ ಅನಿವಾರ್ಯ ಎಂದು ಗೋವಾ ಮುಖ್ಯಮಂತ್ರಿಯವರು ಹೇಳಿದ್ದಾರೆ. ಆದರೆ, 7.56 ಟಿಎಂಸಿ ನೀರು ಬಿಡಬೇಕೆಂಬ ನಮ್ಮ ಮನವಿ ಕುರಿತು ಪ್ರಸ್ತಾಪ ಮಾಡಿಲ್ಲ. ನಮ್ಮ ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂದು ಅವರು ಹೇಳುತ್ತಾರೆ. ಇದು ಸುತ್ತಿ ಬಳಸಿ ಆಡುವ ನಾಟಕ ಎಂದು ದೂರಿದ್ದಾರೆ.

ತಮ್ಮ ರಾಜ್ಯ ಪ್ರವಾಸದಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ಮಾತ್ರ ನೆರವೇರಿಸುತ್ತಿಲ್ಲ. ಪೂರ್ಣಗೊಂಡ ಯೋಜನೆಗಳ ಉದ್ಘಾಟನೆಯೂ ಆಗುತ್ತಿದೆ. ಆಡಳಿತಾತ್ಮಕ ಅನುಮೋದನೆ ದೊರೆತ, ಟೆಂಡರ್ ಕರೆದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯುತ್ತಿದೆ. ಇದರಲ್ಲಿ ಏನು ತಪ್ಪು ? ಎಂದರು.

ಅಧಿಕಾರಕ್ಕೆ ಬಂದರೆ ದಕ್ಷ, ಪ್ರಾಮಾಣಿಕ ಆಡಳಿತ ನೀಡುತ್ತೇನೆ, ಬೇಕಾದರೆ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಹೋದ ಕಡೆಯೆಲ್ಲ ಯಡಿಯೂರಪ್ಪ ಅವರು ಹೇಳುತ್ತಾರೆ. ಎಷ್ಟು ರಕ್ತವಿದೆ ಅವರ ಬಳಿ, ಅಧಿಕಾರದಲ್ಲಿ ಇದ್ದಾಗ ಜೈಲಿಗೆ ಹೋಗಿ ಬಂದಿದ್ದರ ಬಗ್ಗೆ ಅವರು ಏನು ಹೇಳುತ್ತಾರೆ.  ಅಧಿಕಾರಕ್ಕೆ ಬಂದಾಗ ಏನು‌ ಮಾಡುತ್ತೇವೆ ಎಂಬುದು ಜನರಿಗೆ ಮುಖ್ಯವಲ್ಲ. ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂಬುದನ್ನು ಅವರು ನೋಡುತ್ತಾರೆ. ಸುಳ್ಳು ಹೇಳಿದರೆ ಜನ ನಂಬುವುದಿಲ್ಲ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕೆಲಸ ಮಾಡಲಿಲ್ಲ. ಜೈಲಿಗೆ ಹೋದರು ಎಂಬುದು ಜನರಿಗೆ ಗೊತ್ತು, ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದರೆ ಯಾರೂ ನಂಬುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.

ರಾಜ್ಯ ಪ್ರವಾಸದಲ್ಲಿ ಸರ್ಕಾರದ ಬಗ್ಗೆ, ಸರ್ಕಾರದ ಬಗ್ಗೆ ನಿರೀಕ್ಷೆಗೂ ಮೀರಿ ಜನರ ಒಲವು ವ್ಯಕ್ತವಾಗುತ್ತಿದೆ. ಜನರ ನಿರೀಕ್ಷೆಗೆ ತಕ್ಕಂತೆ ನಮ್ಮ ಸರ್ಕಾರ ನಡೆದುಕೊಂಡಿದೆ, ಆಡಳಿತ ಕೊಟ್ಟಿದೆ. ನುಡಿದಂತೆ ನಾವು ನಡೆದುಕೊಂಡಿರುವುದರಿಂದ ಜನರ ಒಲವು ನಮ್ಮ ಕಡೆಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah yeddyurappa ಮುಖ್ಯಮಂತ್ರಿ ಮಹದಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ