ಬೆಳ್ಳಂಬೆಳಗ್ಗೆ ಕೆಲ ಜಿಲ್ಲೆಗಳಲ್ಲಿ ಭೂಕಂಪನ

Kannada News

18-04-2017

ಬೆಂಗಳೂರು, ತುಮಕೂರು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿ ಇಂದು ಬೆಳಿಗ್ಗೆ ಲಘು ಭೂಕಂಪನ ಸಂಭವಿಸಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಬಂದ ಘಟನೆ ನಡೆದಿದೆ.

ಬೆಳ್ಳಂಬೆಳಿಗ್ಗೆಯೇ ಭೂಮಿ ಅಲುಗಾಡಿದಾಗ ಜನರು ಆತಂಕಗೊಂಡಿದ್ದಾರೆ. ಮನೆಯಲ್ಲಿದ್ದ ಪಾತ್ರೆಗಳು, ಟಿವಿ, ಫ್ರಿಡ್ಜ್ ಸೇರಿದಂತೆ, ವಿವಿಧ ವಸ್ತುಗಳು ಅಲುಗಾಡಿದ್ದರಿಂದ ಜನರನ್ನು ಭಯಭೀತರನ್ನಾಗಿಸುವಂತೆ ಮಾಡಿತ್ತು. ಲಘು ಭೂಕಂಪನದಿಂದ ಯಾವುದೇ ಹಾನಿಯಾಗದಿದ್ದರೂ, ಜನರಲ್ಲಿ ಭಯದ ವಾತಾವರಣ ಮನೆಮಾಡಿದೆ.

ಬೆಂಗಳೂರಿನ ಕೆಂಗೇರಿ, ಕಾಮಾಕ್ಷಿಪಾಳ್ಯ, ಗಿರಿನಗರ ಸೇರಿದಂತೆ, ವಿವಿಧ ಭಾಗಗಳಲ್ಲಿ ಬೆಳಿಗ್ಗೆ 7.30ರ ಸುಮಾರಿನಲ್ಲಿ ಒಂದು ನಿಮಿಷಗಳ ಕಾಲ ಭೂಮಿ ಕಂಪಿಸಿದ್ದರಿಂದ ಜನರು ಭಯಭೀತಗೊಂಡಿದ್ದು, ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. 

ತುಮಕೂರು ಜಿಲ್ಲೆಯ ವಿವಿಧ ಗ್ರಾಮಗಳು ಹಾಗೂ ರಾಮನಗರ, ಮಾಗಡಿ, ಕನಕಪುರ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಬೆಳಿಗ್ಗೆ 7.45ರ ವೇಳೆ ಭೂಮಿ ಕಂಪಿಸಿದ್ದು, ಜನರನ್ನು ಆತಂಕಕ್ಕೊಳಗಾಗುವಂತೆ ಮಾಡಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಬೆಳಗಿನ ಜಾವ ಭೂಕಂಪನ ಸಂಭವಿಸಿದ್ದು, ಮನೆಯಲ್ಲಿದ್ದ ಪಾತ್ರೆ ಪಗಡೆಗಳೆಲ್ಲಾ ಕೆಳಗೆ ಬಿದ್ದಿದ್ದರಿಂದ ಗ್ರಾಮದ ಜನ ಮನೆಯಿಂದ ಭಯಭೀತರಾಗಿ ಓಡಿಬಂದಿದ್ದಾರೆ.

ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲ. ಅಲ್ಲದೆ ಇದರಿಂದ ಯಾವುದೇ ಹಾನಿಯಾಗದೆ ಇದ್ದರೂ, ಜನರು ಮಾತ್ರ ಭಯಭೀತರಾಗಿದ್ದಾರೆ.

Links :



ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ