ಉಚಿತ ವಿದ್ಯುತ್ ಜೊತೆಗೆ ದುಡ್ಡು!05-01-2018

ದೇವರಾಣೆಗೂ ನಾವೀಗ ಹೇಳೋಕ್ಕೆ ಹೊರಟಿರೋ ವಿಚಾರವನ್ನು ನೀವು ಯಾರೂ ಇಲ್ಲಿಯವರೆಗೂ ಕೇಳಿರೋದಿಲ್ಲ ಬಿಡಿ. ಏಕೆ ಅಂದ್ರೆ ಭಾರತದಲ್ಲಿ ಅಂಥ ಪರಿಸ್ಥಿತಿಯನ್ನು ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಜರ್ಮನಿಯಲ್ಲಿ ವಿದ್ಯುತ್ ಶಕ್ತಿ ಬಳಕೆ ದರ, ಸೊನ್ನೆಗಿಂತ ಕಡಿಮೆ ಮಟ್ಟಕ್ಕೆ ಕುಸಿದುಹೋಗಿದೆಯಂತೆ. ಸ್ವಲ್ಪನೂ ಅರ್ಥ ಆಗಲಿಲ್ಲ ತಾನೆ? ಹೀಗಿದೆ ನೋಡಿ ವಿವರಣೆ. ಯಾವುದನ್ನಾದರೂ ಸೊನ್ನೆ ದರಕ್ಕೆ ಕೊಡೋದು ಅಂದ್ರೆ ಫ್ರೀಯಾಗಿ, ಹೂಂ ಪುಗಸಟ್ಟೆಯಾಗಿ ಕೊಡೋದು ಅಂತ ಅರ್ಥ. ಸೊನ್ನೆಗಿಂತ ಕಡಿಮೆ ದರ ಅಂದರೆ, ನೆಗೆಟಿವ್ ದರಕ್ಕೆ ಕೊಡೋದು ಅಂತ.

ಸರ್ಕಾರದವರು ಕೊಡೋ ವಿದ್ಯುತ್‌ ಅನ್ನು, ನೀವು ಬಳಸಬೇಕು, ಹಾಗೆ ಮಾಡಿದರೆ, ನೀವು ಬಳಸುವ ಒಂದು ಯೂನಿಟ್‌ಗೆ ಇಷ್ಟು ದುಡ್ಡು ಅಂತ ಸರ್ಕಾರದವರೇ ಹಣ ಕೊಡ್ತಾರಂತೆ. ಈ ಹಣ, ನಿಮ್ಮ ಖಾತೆಯಲ್ಲೇ ಇರುತ್ತೆ, ಮತ್ತೊಂದು ದಿನ, ವಿದ್ಯುತ್ ದರ ನೆಗೆಟಿವ್‌ನಿಂದ ಸೊನ್ನೆಗೆ ಬಂದು, ಸೊನ್ನೆಯಿಂದ ಮೇಲಕ್ಕೆ ಏರಿದಾಗ, ಮುಂದೆ ನೀವು ಕಟ್ಟಬೇಕಾದ ಬಿಲ್‌ಗೆ ಅಡ್ಜಸ್ಟ್ ಮಾಡಿಕೊಳ್ಳುತ್ತಾರಂತೆ.

ನಿಜವಾಗಲೂ ಇಂಥದ್ದನ್ನೆಲ್ಲ ನಂಬೋಕ್ಕೆ ಕಷ್ಟ ಬಿಡಿ. ಆದರೂ, ಜರ್ಮನಿ ಸೇರಿದಂತೆ ಯೂರೋಪ್ ಖಂಡದ ಬಹುತೇಕ ದೇಶಗಳಲ್ಲಿ ಈ ಪರಿಸ್ಥಿತಿ ಇದೆ. ಇಂಥ ಸನ್ನಿವೇಶ ಹೇಗೆ ಉಂಟಾಗುತ್ತೆ ಅಂತ ನೋಡೋಣ. ಜರ್ಮನಿಯಲ್ಲಿ ನವೀಕರಿಸಬಹುದಾದ ಇಂಧನ ಅಂದರೆ, ಸೋಲಾರ್ ಮತ್ತು ಪವನ(ಗಾಳಿ) ಶಕ್ತಿಯನ್ನು ಆಧರಿಸಿದ ವಿದ್ಯುತ್ ಉತ್ಪಾದನೆ ಹೆಚ್ಚು. ಅಲ್ಲಿ ಬಿಸಿಲು ಮತ್ತು ವಿಪರೀತ ಗಾಳಿ ಇರುವ ಸಮಯದಲ್ಲಿ ಸಿಕ್ಕಾಪಟ್ಟೆ ವಿದ್ಯುತ್ ಉತ್ಪಾದನೆ ಆಗಿಬಿಡುತ್ತೆ. ಆದರೆ, ಈ ವಿದ್ಯುತ್ ಅನ್ನು ಎಲ್ಲೂ ಸ್ಟೋರ್ ಮಾಡಿ ಇಡೋಕ್ಕಾಗಲ್ಲ, ಹೀಗಾಗಿ, ಆ ದೇಶದ ಪವರ್ ಗ್ರಿಡ್‌ ಗಳು, ಅಂದರೆ ವಿದ್ಯುತ್ ಶಕ್ತಿ ವಿತರಣಾ ಕೇಂದ್ರಗಳು ಓವರ್ ಲೋಡ್ ಆಗಿಬಿಡುತ್ತವೆ. ಹೀಗಾಗಿ, ಇಂಥ ಸಂದರ್ಭಗಳಲ್ಲಿ ಜನರಿಗೆ ಉಚಿತವಾಗಿ ಮತ್ತು ಮೇಲೆ ಹೇಳಿದ ಹಾಗೆ, ನೆಗೆಟಿವ್ ದರದಲ್ಲಿ  ವಿದ್ಯುತ್ ಪೂರೈಕೆ ಮಾಡುತ್ತಾರಂತೆ. ಗ್ರಾಹಕರು ದುಡ್ಡು ಕೊಟ್ಟು ವಿದ್ಯುತ್ ಬಳಸೋದು, ಪುಕ್ಕಟ್ಟೆಯಾಗಿ ಬಳಸೋದು ಮತ್ತು ಬಳಸಲಿಕ್ಕಾಗಿ ಗ್ರಾಹಕರಿಗೆ ಹಣ ನೀಡುವ ಈ ಪ್ರಕ್ರಿಯೆ, ವಿದ್ಯುತ್ ಉತ್ಪಾದನೆಯ ಮಟ್ಟವನ್ನು ಅವಲಂಬಿಸಿ ಪದೇ ಪದೇ ಬದಲಾಗುತ್ತಲೇ ಇರುತ್ತದಂತೆ.

ಒಟ್ಟಿನಲ್ಲಿ ಇದು, ನಾವುಗಳು ಎಂದೂ ಕೇಳಿರದ ಮತ್ತು ಊಹಿಸಲಾಗದ ವಿಚಾರ. ಕಡಿಮೆ ಬಿಸಿಲು ಮತ್ತು ಭಾರಿ ಚಳಿ ಇರುವ ಜರ್ಮನಿಯವರೇ ಕ್ಲೀನ್ ಎನರ್ಜಿಯಾಗಿರುವ ಸೌರಶಕ್ತಿಯನ್ನು ಇಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ವರ್ಷವಿಡೀ ಬಿಸಿಲು ಬೀಳುವ ಭಾರತದಲ್ಲಿ, ಸೌರಶಕ್ತಿಯನ್ನು ಹೆಚ್ಚಿನ ಮಟ್ಟದಲ್ಲಿ ಬಳಸಿಕೊಂಡು, ವಿದ್ಯುತ್ ಕೊರತೆ ನೀಗಿಸಿಕೊಳ್ಳುವಂಥ ಪರಿಪೂರ್ಣ ವ್ಯವಸ್ಥೆ ಇನ್ನೂ ಬಂದಿಲ್ಲದಿರುವುದು ವಿಪರ್ಯಾಸ ಮತ್ತು ದೇಶದ ವೈಫಲ್ಯವಲ್ಲದೆ ಮತ್ತೇನೂ ಅಲ್ಲ. ಆದರೆ, ದೇಶದ ಎಲ್ಲ ಸರ್ಕಾರಗಳೂ ಜನರ ಅಂದರೆ ನಮ್ಮ ಸರ್ಕಾರಗಳೇ ತಾನೇ? ನಾವೆಲ್ಲರೂ ಸೇರಿ ಸರ್ಕಾರಗಳಿಗೆ ಹೇಳೋಣ. ಯಾವುದೇ ರೀತಿಯ ಮಾಲಿನ್ಯವಿಲ್ಲದ ಶುದ್ಧ ಶಕ್ತಿಯ ಕೇಂದ್ರವಾಗಿರುವ ಸೂರ್ಯನಿಗೊಂದು ಪ್ಲಗ್ ಹಾಕಿಸಿ! ಮಿತಿಯಿಲ್ಲದಷ್ಟು ವಿದ್ಯುತ್ ಸೆಳೆದುಕೊಳ್ಳೋಣ. ಆಗ, ಭಾರತದಲ್ಲೂ ವಿದ್ಯುತ್ ಬಳಸಿ, ದುಡ್ಡುಗಳಿಸಿ ಸ್ಕೀಮ್ ಜಾರಿಗೆ ತರಬಹುದು ಅಲ್ಲವೇ?


ಸಂಬಂಧಿತ ಟ್ಯಾಗ್ಗಳು

Clean energy solar energey ನೆಗೆಟಿವ್ ಯೂನಿಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ