'ಡಿಕೆ ಬ್ರದರ್ಸ್ ನನ್ನ ರಾಜಕೀಯ ವೈರಿಗಳು'04-01-2018

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಬಂದು ಗೆದ್ದ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮತ್ತವರ ಸಹೋದರರು ಏನೇ ತಿಪ್ಪರಲಾಗ ಹಾಕಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಬದಲಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಬಿಜೆಪಿಯಿಂದ ಹೊಡೆತ ಬೀಳುವುದು ನಿಶ್ಚಿತ ಎಂದು, ಚನ್ನಪಟ್ಟಣದ ಶಾಸಕ ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಶಾಸಕ ಯೋಗೇಶ್ವರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಡಿಕೆ ಶಿವಕುಮಾರ್ ನಡೆಸಿದ ವಾಗ್ದಾಳಿಗೆ ಯೋಗೇಶ್ವರ್ ಟಾಂಗ್ ನೀಡಿದ್ದಾರೆ.

ನಗರದಲ್ಲಿಂದು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. ಕೆ. ಬ್ರದರ್ಸ್ ತಮ್ಮ ದ್ವೇಷವನ್ನು ಬಹಿರಂಗವಾಗಿ ಸಾರಿದ್ದಾರೆ. ನನ್ನನ್ನು ಕೇವಲ ಚನ್ನಪಟ್ಟಣಕ್ಕೆ ಸೀಮಿತವಾಗುವಂತೆ ಷಡ್ಯಂತ್ರ ನಡೆಸುತ್ತಿರುವ ಡಿ.ಕೆ.ಬ್ರದರ್ಸ್ ನನ್ನ ರಾಜಕೀಯ ವೈರಿಗಳು ಎಂದು ಕಿಡಿಕಾರಿದ್ದಾರೆ.  ಚನ್ನಪಟ್ಟಣವನ್ನು ರಾಜಕೀಯವಾಗಿ ಮದುವೆಯಾಗಿದ್ದೇನೆ ಎಂಬ ಡಿಕೆಶಿ ಹೇಳಿಕೆ ತೀವ್ರ ಗೊಂದಲ ಮೂಡಿಸಿದ್ದು, ಯಾವುದೋ ಹೆಣ್ಣನ್ನು ಮದುವೆಯಾಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿದೆ. ಅದಕ್ಕೆ, ಅವರೇ ಸ್ಪಷ್ಟೀಕರಣ ನೀಡಬೇಕು, ಇಲ್ಲವಾದಲ್ಲಿ ಬೇರೆ ಅರ್ಥ ಕಲ್ಪಿಸಲಾಗುವುದು ಎಂದು ಕುಟುಕಿದರು.

ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರ ಸವಾಲಿಗೆ ಡಿಕೆಶಿ ಅವರೇ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಯೋಗೇಶ್ವರ್ ಬಹಿರಂಗ ಸವಾಲು ಹಾಕಿದ್ದಾರೆ. ನಾನು ಕಾಂಗ್ರೆಸ್ ನಿಂದ 10 ವರ್ಷಗಳಿಂದ ಸ್ಪರ್ಧೆ ಮಾಡಿಲ್ಲ. ಮುಖ್ಯಮಂತ್ರಿ ಅವರು ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ ನಲ್ಲಿ ಸಿಎಂ ಆಗಿದ್ದು, ಅವರು ತೆರಿಗೆ ಹಣದಲ್ಲಿ ಪಕ್ಷದ ಕಾರ್ಯಕ್ರಮ ಮಾಡಿ ಹಣ ಪೋಲು ಮಾಡುತ್ತಿದ್ದಾರೆ. 40 ಕೋಟಿ ರೂ. ನೀರಾವರಿ ಅಭಿವೃದ್ಧಿಗೆ ನೀಡಿರುವುದನ್ನು ಬಿಟ್ಟರೆ ಈ ಸರ್ಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ. ಸುಳ್ಳು ಅಂಕಿ-ಅಂಶ ನೀಡಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದೆ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ರನ್ನು ಗೆಲ್ಲಿಸಲು ನಮ್ಮ ಬೆಂಬಲ ಪಡೆದಿದ್ದರು. ಈ ಸಾಧನಾ ಸಮಾವೇಶದ ಕಾರ್ಯಕ್ರಮಕ್ಕೆ ಹಣ ನೀಡಿ ಜನರನ್ನು ಕರೆತರಲಾಗಿದೆ. ನನ್ನ ಕ್ಷೇತ್ರದಲ್ಲಿ ನಾನು ಸಮಾವೇಶ ಮಾಡಿ ತೋರಿಸುತ್ತಿದ್ದೇನೆ. ಡಿ.ಕೆ.ಶಿವಕುಮಾರ್ ಗೆ  ಶಕ್ತಿಯಿದ್ದರೆ ಕಾಂಗ್ರೆಸ್ ಪಕ್ಷದ ಸಮಾವೇಶ ಮಾಡಿ ತೋರಿಸಲಿ ಎಂದರು.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ವಿಸ್ತರಿಸಲಾಗುವುದು. ಇದರಿಂದ, ಜೆಡಿಎಸ್, ಕಾಂಗ್ರೆಸ್‍ಗೆ ಹೊಡೆತ ಬೀಳಲಿದೆ. ಇದೇ ರೀತಿ ಹದ್ದು ಮೀರಿ ಮುಂದುವರಿದರೆ ನಮ್ಮ ಕ್ಷೇತ್ರದ ಓರ್ವ ಹೆಣ್ಣು ಮಗಳ ಕೈಯಿಂದ ಡಿಕೆಶಿಗೆ ಪೊರಕೆಯಲ್ಲಿ ಹೊಡೆಸಲಾಗುವುದು, ಅವರು ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಯೋಗೇಶ್ವರ್ ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಏನೇ ದರ್ಪ, ದೌರ್ಜನ್ಯ ಇದ್ದರೂ ಅದು ಕನಕಪುರದಲ್ಲಿ ಮಾತ್ರ. ಅದನ್ನು ಬಿಟ್ಟು ನಮ್ಮ ಕ್ಷೇತ್ರಕ್ಕೆ ಬಂದರೆ ಕ್ಷೇತ್ರದ ಜನತೆಯಿಂದ ತಕ್ಕ ಪಾಠ ಕಲಿಸುತ್ತೇವೆ. ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ. ಸುರೇಶ್ ಅವರು ಎರಡು ಕಲ್ಲು ಗಣಿಗಾರಿಕೆಯ ಒಡೆಯರಾಗಿದ್ದು, ಓರ್ವ ಮಹಿಳಾ ಅಧಿಕಾರಿಗೆ ಬಡ್ತಿ ನೀಡಿ ಅದೇ ಜಿಲ್ಲೆಗೆ ನೇಮಕ ಮಾಡಿಕೊಳ್ಳುತ್ತಾರೆ ಎಂದು ಯೋಗೇಶ್ವರ್ ದೂರಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ