E-ಕಾರಿಗೆ ಹಸಿರು ನಂಬರ್ ಪ್ಲೇಟ್

Electric cars may soon sport green number plates

04-01-2018

ಇನ್ನು ಮುಂದೆ ನೀವು ಹಸಿರು ನಂಬರ್ ಪ್ಲೇಟ್ ಹೊಂದಿರುವ ಕಾರುಗಳನ್ನು ನೋಡಲಿದ್ದೀರಿ. ದೇಶದ ಎಲ್ಲ ಎಲೆಕ್ಟ್ರಿಕ್ ವಾಹನಗಳಿಗೆ ಹಸಿರು ನಂಬರ್ ಪ್ಲೇಟ್ ಅಳವಡಿಸುವ ಬಗ್ಗೆ ಕೇಂದ್ರ ನೀತಿ ಆಯೋಗ ಚಿಂತಿಸುತ್ತಿದೆ. ಸದ್ಯಕ್ಕೆ ದೇಶದಲ್ಲಿ ಸಂಚರಿಸುವ ಖಾಸಗಿ ವಾಹನಗಳಿಗೆ ಕಪ್ಪು ಸಂಖ್ಯೆ ಇರುವ ಬಿಳಿಯ ನಂಬರ್ ಪ್ಲೇಟ್, ವಾಣಿಜ್ಯ ವಾಹನಗಳಿಗೆ ಕಪ್ಪು ಸಂಖ್ಯೆ ಇರುವ ಹಳದಿ ನಂಬರ್ ಪ್ಲೇಟ್ ಮತ್ತು ರಾಯಭಾರ ಕಚೇರಿಯ ವಾಹನಗಳಿಗೆ ನೀಲಿ ನಂಬರ್ ಪ್ಲೇಟ್‌ ಇವೆ.

ಆದರೆ, ದೇಶದಲ್ಲಿ ಪರಿಸರ ಮಾಲಿನ್ಯ ಕಡಿಮೆ ಮಾಡುವುದಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು, ಕೇಂದ್ರ ಸರ್ಕಾರ ಹಲವಾರು ಹೊಸ ಬಗೆಯ ಚಿಂತನೆಗಳನ್ನು ನಡೆಸುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ, ಮೊದಲ ಮೂರು ವರ್ಷ ಎಲ್ಲ ಕಡೆ ಉಚಿತ ಪಾರ್ಕಿಂಗ್ ಮತ್ತು ಎಲ್ಲ ರಸ್ತೆಗಳಲ್ಲೂ ಟೋಲ್ ಫ್ರೀ ಸೌಲಭ್ಯ ನೀಡುವ ಬಗ್ಗೆ ಯೋಚಿಸಲಾಗುತ್ತಿದೆ.

2030ರ ವೇಳೆಗೆ ದೇಶದಲ್ಲಿ ಕೇವಲ ಎಲೆಕ್ಟ್ರಿಕ್ ಕಾರುಗಳು ಮಾತ್ರ ಮಾರಾಟವಾಗುವಂತೆ ಮಾಡಬೇಕು ಎಂಬ ಗುರಿ ಕೇಂದ್ರ ಸರ್ಕಾರದ್ದು. ಹೀಗಾಗಿ, ಹಂತ ಹಂತವಾಗಿ ಹೊಸ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ರಿಜಿಸ್ಟ್ರೇಷನ್‌ಗೆ ನಿರ್ಬಂಧ ಹೇರುತ್ತಾ ಹೋಗಿ, 2030ರ ವೇಳೆ ಸಂಪೂರ್ಣವಾಗಿ ನೋಂದಣಿ ನಿಲ್ಲಿಸುವ ಬಗ್ಗೆ ಚಿಂತಿಸಲಾಗುತ್ತಿದೆ.

ಇದರ ಜೊತೆಗೆ, ಎಲ್ಲ ನಗರಗಳ ಬಹುಮಹಡಿ ಅಪಾರ್ಟ್‌ಮೆಂಟ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡುವುದನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ಮತ್ತು ಅಂಥ ವಾಹನಗಳ ಮಾಲೀಕರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡುವ ಬಗ್ಗೆಯೂ ಯೋಚಿಸಲಾಗಿದೆ.  

ಒಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ, ಜಾಗತಿಕ ಗುಣಮಟ್ಟದ ಎಲೆಕ್ಟ್ರಿಕ್ ವಾಹನಗಳ ತಯಾರಿ ಹಾಗೂ ರಫ್ತು, ಮತ್ತು ಪೆಟ್ರೋಲಿಯಮ್ ತೈಲದ  ಆಮದು ಕಡಿಮೆಗೊಳಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಆದರೆ, ಇದೆಲ್ಲವೂ ಅಷ್ಟು ಸುಲಭವಾಗಿ ಆಗುವ ಮಾತಲ್ಲ ಅನ್ನುವುದು ಬೇರೆ ಪ್ರಶ್ನೆ. ಹೀಗಿದ್ದರೂ ಕೂ಼ಡ, ದೇಶದ ಆಟೊಮೊಬೈಲ್ ವಲಯದಲ್ಲಿ ಮತ್ತು ಜನರಲ್ಲಿ ಭವಿಷ್ಯದ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ದೊಡ್ಡ ರೀತಿಯ ಚರ್ಚೆಗಳು ಆರಂಭವಾಗಿರುವುದಂತೂ ನಿಜ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ