ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆ ಪ್ರಾದೇಶಿಕ ಆಯುಕ್ತರ ಜೊತೆ ವೀಡಿಯೋ ಸಂವಾದ

Kannada News

18-04-2017 249

ಬೆಂಗಳೂರು : ಹಿಂದೆಂದೂ ಕಾಣದಂತಹ ಭೀಕರ ಬರಗಾಲ ರಾಜ್ಯವನ್ನು ಆವರಿಸಿದೆ. ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವ ಅಗತ್ಯವಿದ್ದು, ಇದು ಸವಾಲಿನ ಕೆಲಸವೂ ಆಗಿದೆ. ಹೀಗಾಗಿ ಜೂನ್ ತಿಂಗಳ ವರೆಗೆ ಜನರಿಗೆ ಕುಡಿಯುವ ನೀರು, ಉದ್ಯೋಗ, ಜಾನುವಾರುಗಳ ಮೇವಿಗೆ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳಿ...
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರಿಗೆ ನೀಡಿದ ಆದೇಶ.
ಕುಡಿಯುವ ನೀರು ಪೂರೈಸುವ, ಕೂಲಿ ಕಾರ್ಮಿಕರಿಗೆ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವುದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜವಾಬ್ದಾರಿ ಎಂದು ಸಿಎಂ ಕುಟ್ಟುನಿಟ್ಟಾಗಿ ಹೇಳಿದರು. 
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಮತ್ತು ಕೈಗೊಂಡಿರುವ ಪರಿಹಾರ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಯವರು ವೀಡಿಯೋ ಸಂವಾದ ನಡೆಸುತ್ತಿದ್ದಾರೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕೃಷಿ ಸಚಿವ ಬೈರೇಗೌಡ, ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಸಚಿವ ಎಚ್.ಕೆ. ಪಾಟೀಲ್ ಮತ್ತು ಪಶು ಸಂಗೋಪನಾ ಸಚಿವ ಎ. ಮಂಜು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಯಾ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ವೀಡಿಯೋ ಸಂವಾದದಲ್ಲಿ ಮುಖ್ಯಮಂತ್ರಿಯವರ ಜೊತೆ ಭಾಗಿಯಾಗಿದ್ದಾರೆ. 
ವೀಡಿಯೋ ಸಂವಾದದ ವೇಳೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಹೇಳಿದ್ದು :
ಸರ್ಕಾರ ಬಿಡುಗಡೆ ಮಾಡುವ ಇನ್‍ಪುಟ್ ಸಬ್ಸಿಡಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಬೇಕು. ಈ ತಿಂಗಳ ಅಂತ್ಯದ ವೇಳೆಗೆ ಎಲ್ಲ ರೈತರಿಗೂ ಹಣ ಸೇರಬೇಕು. 
ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಇರುವುದು ಕಂಡು ಬಂತು. ಜನರು ನೀರಿಗಾಗಿ ಬಿಂದಿಗೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದ ದೃಶ್ಯ ಗಮನಿಸಿದ್ದೇನೆ. ಈ ರೀತಿ ಎಲ್ಲಿಯೂ ಆಗಬಾರದು. ಸಮಸ್ಯೆ ಕಂಡು ಬಂದ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು. 
ಕುಡಿಯುವ ನೀರು ಪೂರೈಸಲು ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ತೆಗೆದುಕೊಳ್ಳಿ. ಆದರೆ ಕೊಳವೆ ಬಾವಿಗಳ ಮಾಲೀಕರನ್ನು ಹೆದರಿಸಬೇಡಿ. ಸರ್ಕಾರ ನಿಗಧಿ ಮಾಡಿರುವ ಹಣ ಕೊಟ್ಟು ವಶಪಡಿಸಿಕೊಳ್ಳಿ. ಒಟ್ಟಿನಲ್ಲಿ ಕುಡಿಯುವ ನೀರಿಗೆ ಅಗತ್ಯ ಅನುದಾನ ಒದಗಿಸಲು ಸರ್ಕಾರ ಬದ್ಧವಾಗಿದೆ. ಹಣಕಾಸು ತೊಂದರೆ ಎದುರಾಗುವ ಪ್ರಶ್ನೆಯೇ ಇಲ್ಲ. 
ಕುಡಿಯುವ ನೀರಿನ ಸಮಸ್ಯೆ ಕುರಿತು ಸಹಾಯವಾಣಿ, ಜನಪ್ರತಿನಿಧಿಗಳು ಅಥವಾ ಮಾಧ್ಯಮಗಳ ಮೂಲಕ ದೂರ ಬಂದ ತಕ್ಷಣ ಕ್ರಮ ಕೈಗೊಳ್ಳಬೇಕು. 
ಮುಂದಿನ ಹತ್ತು ವಾರಗಳಿಗೆ ಆಗುವಷ್ಟು ಮೇವನ್ನು ಈಗಲೇ ಸಂಗ್ರಹ ಮಾಡಿಕೊಳ್ಳಿ. ಅಗತ್ಯ ಇರುವ ಕಡೆಗಳಲ್ಲಿ ಗೋಶಾಲೆಗಳನ್ನು ತೆರೆಯಿರಿ. ಗೋಶಾಲೆ ಎಂದರೆ ಯಾವುದೋ ತೋಪಿನಲ್ಲಿ ಜಾನುವಾರುಗಳಿಗೆ ಜಾಗ ನೀಡುವುದಲ್ಲ. ರಾಸುಗಳಿಗೆ ನೀರು, ನೆರಳು ಒದಗಿಸಬೇಕು. ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಜಾನುವಾರುಗಳ ಜೊತೆ ಬಂದವರಿಗೆ ತಂಗಲು ಮತ್ತು ಊಟದ ವ್ಯವಸ್ಥೆ ಮಾಡಬೇಕು. 
ಜಾನುವಾರುಗಳಿಗೆ ನೀರು ಒದಗಿಸಲು ಪ್ರತಿ ಹಳ್ಳಿಗಳಲ್ಲೂ ತೊಟ್ಟಿಗಳನ್ನು ನಿರ್ಮಿಸಿ. ಕಾಮಗಾರಿಯನ್ನು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೈಗೊಳ್ಳಿ. 
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ತಪ್ಪದೇ ಉದ್ಯೋಗ ನೀಡಬೇಕು. ಅವರ ವೇತವನ್ನು 15 ದಿನಗಳ ಒಳಗೆ ವಿತರಿಸುವಂತೆ ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತರಿ ಯೋಜನೆ ಸಂಬಂಧ 2017-18ನೇ ಸಾಲಿನ ಕ್ರಿಯಾ ಯೋಜನೆ ಕೂಡಲೇ ಸಿದ್ಧವಾಗಬೇಕು ಎಂದು ಮುಖ್ಯಮಂತ್ರಿಯವರು ಹೇಳಿದರು. 
ವೀಡಿಯೋ ಸಂವಾದದ ಮೂಲಕ ಮುಖ್ಯಮಂತ್ರಿಗಳು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆಯಾ ಜಿಲ್ಲೆಯ ಬರ ಪರಿಹಾರ ಕಾಮಗಾರಿಗಳ ಕುರಿತು ಅಂಕಿ-ಅಂಶ ಸಮೇತ ಮಾಹಿತಿ ಪಡೆಯುತ್ತಿದ್ದಾರೆ. 
ಸಬ್ಸಿಡಿ ಬಿಡುಗಡೆ :
ವೀಡಿಯೋ ಸಂವಾದ ಆರಂಭಕ್ಕೂ ಮುನ್ನ ಮುಖ್ಯಮಂತ್ರಿಗಳು ಇನ್‍ಪುಟ್ ಸಬ್ಸಿಡಿಯಾಗಿ 265 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರು. 
ಸಬ್ಸಿಡಿ ಹಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವ ಆನ್‍ಲೈನ್ ಪ್ರಕ್ರಿಯೆಗೂ ಚಾಲನೆ ನೀಡಿದರು. 4.47 ಲಕ್ಷ ರೈತರ ಬ್ಯಾಂಕ್ ಖಾತೆಗೆ ಈ ಹಣ ಜಮೆಯಾಗಲಿದೆ. ಈ ಹಿಂದೆ 12.03 ಲಕ್ಷ ರೈತರಿಗೆ 671 ಕೋಟಿ ರೂ.ಗಳ ಇನ್‍ಪುಟ್ ಸಬ್ಸಿಡಿ ಬಿಡುಗಡೆಯಾಗಿತ್ತು. ಈ ವರೆಗೆ 16 ಲಕ್ಷಕ್ಕೂ ಹೆಚ್ಚು ರೈತರಿಗೆ 936 ಕೋಟಿ ರೂ.ಗಳ ಸಬ್ಸಿಡಿ ತಲುಪಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ