ಲಾರಿ ಅಡಿ ಕಾರು: ಇಬ್ಬರ ದುರ್ಮರಣ

03-01-2018 261
ಬೆಂಗಳೂರು: ಕೆಂಗೇರಿಯ ನೈಸ್ ರಸ್ತೆಯಲ್ಲಿ ಇಂದು ಮುಂಜಾನೆ ವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರು, ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಅದರಡಿ ನುಗ್ಗಿ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕಡಬಗೆರೆಯ ಅಕ್ಷಯ್ ಕುಮಾರ್ (25), ಯಶವಂತಪುರದ ಪ್ರಶಾಂತ್ (27) ಮೃತಪಟ್ಟವರು. ಮುಂಜಾನೆ ದಟ್ಟವಾದ ಮಂಜು ಕವಿದಿದ್ದರಿಂದ ಮುಂದೆ ಹೋಗುತ್ತಿದ್ದ ಲಾರಿ ಸ್ಪಷ್ಟವಾಗಿ ಕಾಣಿಸದಿರುವುದೇ ಈ ಅಪಘಾತಕ್ಕೆ ಕಾರಣವಾಗಿದೆ.
ಬನ್ನೇರುಘಟ್ಟ ರಸ್ತೆಯ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ಗಳಾಗಿದ್ದ ಇವರಿಬ್ಬರು ರಾತ್ರಿ ಪಾಳಯದಲ್ಲಿ ಕೆಲಸ ಮುಗಿಸಿಕೊಂಡು ಮುಂಜಾನೆ 6ರ ವೇಳೆ ಸೈಸ್ ರಸ್ತೆಯಲ್ಲಿ ಇಂಡಿಕಾ ಕಾರಿನಲ್ಲಿ ವೇಗವಾಗಿ ಹೋಗುತ್ತಿದ್ದರು. ಮಾರ್ಗಮಧ್ಯೆ ನೈಸ್ ರಸ್ತೆಯ ವೃಷಭಾವತಿ ರಾಜಕಾಲುವೆಯ ಬಳಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿ ಅಡಿಗೆ ನುಗ್ಗಿದ್ದು, ಪ್ರಶಾಂತ್ ಹಾಗೂ ಅಕ್ಷಯ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಅಡಿ ಸಿಲುಕಿದ್ದ ಕಾರನ್ನು ಕ್ರೈನ್ ಕರೆಸಿ ತೆರೆವುಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ