ರಾಜ್ಯದಲ್ಲಿ ಮಹಿಳೆಯರಿಗಿಲ್ಲ ರಕ್ಷಣೆ...!

02-01-2018 299
ರಾಜ್ಯದಲ್ಲಿ ಮಹಿಳೆಯರಿಗಿಲ್ಲ ರಕ್ಷಣೆ ಎಂಬ ವಿಚಾರಕ್ಕೆ ಪುಷ್ಠಿ ನೀಡುವಂತೆ ಇಂದು ಮಹಿಳಾ ಆಯೋಗ ಆತಂಕಕಾರಿ ವಿಚಾರವನ್ನು ಬಿಚ್ಚಿಟ್ಟಿದೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಒಂದೇ ವರ್ಷದಲ್ಲಿ ಬರೋಬ್ಬರಿ 3107 ಪ್ರಕರಣಗಳು ಮಹಿಳಾ ಆಯೋಗದ ಬಾಗಿಲು ತಟ್ಟಿವೆ. ಸರಾಸರಿ 230 ಪ್ರಕರಣಗಳು ತಿಂಗಳಿಗೆ ದಾಖಲಾಗಿವೆ ಎನ್ನಲಾಗುತ್ತಿದೆ. ನಾಗಲಕ್ಷ್ಮೀಬಾಯಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆಯಾಗಿ ಒಂದು ವರ್ಷ ಒಂದು ತಿಂಗಳಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದು, ಈ ವೇಳೆ ಮಹಿಳಾ ಆಯೋಗದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ದೌರ್ಜನ್ಯ, ಕಿರುಕುಳಕ್ಕೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯೂ ಕ್ಯಾಲೆಂಡರ್ ನಲ್ಲಿ ಮುದ್ರಿಸಲಾಗಿದೆ ಎಂದ ಅವರು, ಸುಮಾರು 15 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಸ್.ಪಿ. ಜೊತೆ ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಾಲೋಚಿಸಿದ ಕುರಿತು ನಾಗಲಕ್ಷ್ಮಿಬಾಯಿ ಅವರ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ವಿಚಾರವಾಗಿ ಮಾತನಾಡಿದ ಅವರು “ಪ್ರತಿಯೊಂದು ಜಿಲ್ಲೆಗಳಲ್ಲೂ ಪ್ರಕರಣಗಳು ಭಿನ್ನವಾಗಿವೆ. ರಾಮನಗರದಲ್ಲಿ ಬಹುಪತ್ನಿತ್ವ, ಹಾವೇರಿಯಲ್ಲಿ ಗರ್ಭಕೋಶಕ್ಕೆ ಕತ್ತರಿ, ಚಿಕ್ಕಮಗಳೂರಿನಲ್ಲಿ ವಲಸಿಗರ ಮೇಲೆ ಅತ್ಯಾಚಾರ, ಮೈಸೂರಿನಲ್ಲಿ ಪ್ರೇಮವಿವಾಹಗಳು ಅಧಿಕ, ಹಾಸನದಲ್ಲಿ ದೌರ್ಜನ್ಯ ಪ್ರಕರಣಗಳು, ಮಂಗಳೂರಿನಲ್ಲಿ ಅಪಾಯಕಾರಿಯಾಗಿ ಹೆಚ್ಚಿದ ವೇಶ್ಯಾವಾಟಿಕೆ ಜಾಲ, ಕೊಪ್ಪಳದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿದೆ, ಬೆಳಗಾವಿಯಲ್ಲಿ ಗುಜ್ಜರ್ ಕಿ ಶಾದಿ ಪ್ರಕರಣಗಳು, ತುಮಕೂರು ಪ್ರೇಮವಿವಾಹ ಮತ್ತು ನಾಪತ್ತೆ ಪ್ರಕರಣ, ಮಂಡ್ಯದಲ್ಲಿ ಅತ್ಯಾಚಾರ ಪ್ರಕರಣಗಳು, ಕಲಬುರಗಿಯಲ್ಲಿ ಮಕ್ಕಳ ಮಾರಿದ್ದ ಲಂಬಾಣಿ ಹೆಂಗಸರು ಗರ್ಭಕೋಶವನ್ನು ತೆಗೆಸಿಕೊಂಡಿದ್ದರು. ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿನ ವೈದ್ಯನೇ 3000ಕ್ಕೂ ಹೆಚ್ಚು ಮಹಿಳೆಯರ ಗರ್ಭಕೋಶ ಕತ್ತರಿಸಿದ್ದ, ಡಾ. ಶಾಂತ್ ಎಂಬ ವೈದ್ಯನನ್ನು ಸದ್ಯ ಅಮಾನತ್ತಿನಲ್ಲಿಟ್ಟಿದ್ದಾರೆ. ಆದರೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ಪತ್ರ ಬರೆದು ಇಂತಹವರನ್ನು ಪರ್ಮನೆಂಟ್ ಆಗಿ ಕಿತ್ತು ಹಾಕಬೇಕು” ಎಂದು ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.
ಅದಲ್ಲದೇ ಬೆಂಗಳೂರಿನಲ್ಲಿ ಕಳೆದ ವರ್ಷದ ಸಂಭ್ರಮಾಚರಣೆಯ ವೇಳೆ ನಡೆದ ದುರಂತ ಪ್ರಕರಣ ಹಿನ್ನೆಲೆ, ತಿಂಗಳ ಹಿಂದೆ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ನಾಲ್ಕು ತಿಂಗಳ ಹಿಂದೆ ಮೆಟ್ರೋದಲ್ಲೂ ಮಹಿಳಾ ಪ್ರತ್ಯೇಕ ಬೋಗಿಗಾಗಿ ಪತ್ರ ಬರೆದಿದ್ದೇನೆ, ಈ ಕುರಿತು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ನವೆಂಬರ್ 2016 ರಿಂದ ಆಗಸ್ಟ್ 2017 ಅವಧಿಯೊಳಗೆ 2473 ದೌರ್ಜನ್ಯ ಪ್ರಕರಣಗಳು ಮಹಿಳಾ ಆಯೋಗದಲ್ಲಿ ದಾಖಲಾಗಿವೆ. ಅತ್ಯಾಚಾರಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಒಂದು ಕಮೆಂಟನ್ನು ಹಾಕಿ