ಪೊಲೀಸ್ ಹುದ್ದೆಗಳನ್ನು ಖಾಲಿ ಉಳಿಸಿಕೊಂಡಿರುವ ಮೊದಲ ರಾಜ್ಯ ಕರ್ನಾಟಕ

Kannada News

17-04-2017

ಬೆಂಗಳೂರು,ಏ,15-ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಲಕಾಲಕ್ಕೆ ಪೊಲೀಸ್ ಇಲಾಖೆಗೆ ಸಿಬ್ಬಂದಿಯನ್ನು ನೇಮಕಾತಿ ಮಾಡದಿರುವುದರಿಂದ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಪೊಲೀಸ್ ಹುದ್ದೆಗಳನ್ನು ಖಾಲಿ ಉಳಿಸಿಕೊಂಡಿರುವ ಮೊದಲ ರಾಜ್ಯ ಕರ್ನಾಟಕ ವಾಗಿದೆ.
ದೇಶಾದ್ಯಂತ ಶೇ.24ರಷ್ಟು ಹುದ್ದೆಗಳು ಖಾಲಿ ಇದ್ದು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶೇ.36ರಷ್ಟು ಪೊಲೀಸ್ ಹುದ್ದೆಗಳು ಖಾಲಿಯಿದ್ದರೆ. ಅತಿ ದೊಡ್ಡ ರಾಜ್ಯವೆನಿಸಿದ ಉತ್ತರ ಪ್ರದೇಶದಲ್ಲಿ ಶೇ.50ರಷ್ಟು ಪಶ್ಚಿಮ ಬಂಗಾಳ ಶೇ.33, ಜಾರ್ಖಂಡ್ ಶೇ.27, ತೆಲಂಗಾಣ ಶೇ.26 ರಷ್ಟು ಹುದ್ದೆಗಳು ಖಾಲಿಯಿವೆ.
ರಾಜ್ಯದಲ್ಲಿ ಒಟ್ಟು 1,10,000 ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಆದರೆ ಈವರೆಗೂ 7934 ಹುದ್ದೆಗಳನ್ನು ಮಾತ್ರ ತುಂಬಲಾಗಿದೆ. ಸರಿಸುಮಾರು 30ಸಾವಿರಕ್ಕೂ ಅಧಿಕ ಪೊಲೀಸ್ ಹುದ್ದೆಗಳು ಖಾಲಿ ಇವೆ.
ರಾಜ್ಯ ಸರ್ಕಾರ ಇತ್ತೀಚೆಗೆ ಕೆಲ ಹುದ್ದೆಗಳನ್ನು ಭರ್ತಿ ಮಾಡಿತ್ತಾದರೂ, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಈ ವರ್ಷದ ಅಂತ್ಯಕ್ಕೆ 20 ಸಾವಿರ ಹುದ್ದೆಗಳನ್ನು ತುಂಬಲಾಗುವುದು ಎಂದು ಸರ್ಕಾರ ಹೇಳುತ್ತಿದೆಯಾದರೂ ಅದು ಕೇವಲ ಕಾಗದದ ಮೇಲಷ್ಟೇ ಉಳಿದಿದೆ.
ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಹುದ್ದೆಗಳನ್ನು ತುಂಬಲು ಅದೇಕೋ ಮೀನಾಮೇಷ ಎಣಿಸುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಕೇರಳದಲ್ಲಿ  ಶೇ.10ರಿಂದ 15ರಷ್ಟು ಹುದ್ದೆಗಳು ಖಾಲಿ ಇವೆ.
ನಿವೃತ್ತಿ ಹೊಂದಿದ ಬಳಿಕ ಕಾಲ ಮಿತಿಯೊಳಗೆ ಭರ್ತಿ ಮಾಡಿದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ಸರ್ಕಾರ ಪೊಲೀಸ್ ಹುದ್ದೆಗಳನ್ನು ವರ್ಷಕ್ಕೆ ಒಂದು ಬಾರಿ ಭರ್ತಿ ಮಾಡಿದರೆ, ಉಳಿದಂತೆ ಎಸ್‍ಐ ಹುದ್ದೆಗಳನ್ನು 2-3 ವರ್ಷ ಹಾಗೂ ಇದಕ್ಕಿಂತ ಮೇಲ್ಪಟ್ಟ ಹುದ್ದೆಗಳನ್ನು 3-4 ವರ್ಷಕ್ಕೊಮ್ಮೆ ನೇಮಕಾತಿಗೆ ಮುಂದಾಗುತ್ತಿರುವುದೇ ಇದಕ್ಕೆ ಮೂಲ ಕಾರಣವಾಗಿದೆ
ಕರ್ನಾಟಕದಲ್ಲಿ ಕಾಲಕಾಲಕ್ಕೆ ಸರ್ಕಾರಗಳು ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಂಡಿದ್ದರೂ ಇಲಾಖೆ ಮುಂದಿಟ್ಟಷ್ಟು ಹುದ್ದೆಗಳನ್ನು ಭರ್ತಿ ಮಾಡದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಖಾಲಿ ಉಳಿದ ಪೊಲೀಸ್ ಸಿಬ್ಬಂದಿಯ ನೇಮಕಾತಿಗೆ ಕಾಲಕಾಲಕ್ಕೆ ನಡೆಯದಿದ್ದರಿಂದ ಸಾಕಷ್ಟು ಹುದ್ದೆಗಳು ಖಾಲಿ ಉಳಿದು ಕಾನೂನು ಸುವ್ಯವಸ್ಥೆ ಪಾಲನೆ ಜೊತೆಗೆ ಪೊಲೀಸರು ಹೆಚ್ಚಿನ ಒತ್ತಡ ಎದುರಿಸಬೇಕಾಗಿತ್ತು.
ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಕಳೆದ ವರ್ಷ ರಾಜ್ಯ ಅನೇಕ ಕಹಿ ಘಟನೆಗಳಿಗೆ ಸಾಕ್ಷಿಯಾಗಬೇಕಾಯಿತು. ಕಾವೇರಿ ಗಲಭೆ, ಮಹದಾಯಿ ರೈತರ ಹೋರಾಟ, ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ, ಇತ್ತೀಚೆಗಷ್ಟೆ  ಅಂಗನವಾಡಿ ಕಾರ್ಯಕರ್ತರ ಅಹೋರಾತ್ರಿ ಧರಣಿ ಸೇರಿ ಹಲವು ಘಟನೆಗಳು ನಡೆದಿದ್ದವು.
ಕರ್ನಾಟಕಕ್ಕೆ ಬುಲಾವ್ :-
ದೇಶದಲ್ಲಿ ಅತಿ ಹೆಚ್ಚು ಪೊಲೀಸ್ ಸಿಬ್ಬಂದಿಯ ಕೊರತೆ ಎದುರಿಸುತ್ತಿರುವ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ ಬುಲಾವ್ ನೀಡಿದೆ.
ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇರುವ ಖಾಲಿ ಹುದ್ದೆಗಳ ಬಗ್ಗೆ ಗರಂ ಆಗಿರುವ ಕೇಂದ್ರ ಗೃಹ ಕಾರ್ಯದರ್ಶಿ. ಶೀಘ್ರವೇ ಖಾಲಿಯಿರುವ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಯಾ ರಾಜ್ಯದ ಗೃಹ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾ. ಜೆ ಎಸ್ ಖೇಹರ್ ಅವರನ್ನೊಳಗೊಂಡ ಪೀಠ ಈ ಕುರಿತು ಕಳವಳ ವ್ಯಕ್ತಪಡಿಸಿ, ಶೀಘ್ರ ಖಾಲಿ ಹುದ್ದೆಗಳ ಭರ್ತಿಗೆ ಕೇಂದ್ರಕ್ಕೆ ಶುಕ್ರವಾರ ಸೂಚನೆ ನೀಡಿತ್ತು. ನ್ಯಾ. ಡಿವೈ ಚಂದ್ರಚೂಡ್ ಮತ್ತು ನ್ಯಾ. ಎಸ್ ಕೆ ಕೌಲ್ 2013 ರಿಂದ ಹುದ್ದೆಗಳ ಭರ್ತಿ ಖಾಲಿ ಇವೆ, ಶೀಘ್ರದಲ್ಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದು ಸೂಚಿಸಿದ್ದರು.
ಬಿಹಾರ ಮತ್ತು ಉತ್ತರ ಪ್ರದೇಶದಲ್ಲೇ 40,000 ಹಾಗೂ 1.5 ಲಕ್ಷ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿಗೆ ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡಬೇಕೆಂದು ಮನೀಶ್ ಕುಮಾರ್ ಎಂಬುವವರು ಅರ್ಜಿ ಸಲ್ಲಿಸಿದ್ದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ