ರಜನಿ ಬಿಜೆಪಿ ಪರ ಪ್ರಚಾರ ಮಾಡ್ತಾರಾ..?

Will Rajinikanth campaign for state BJP

01-01-2018 2662

ಬೆಂಗಳೂರು: ರಾಜಕೀಯಕ್ಕೆ ಅಡಿ ಇಡಲು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ನಿರ್ಧರಿಸಿರುವ ಬೆನ್ನಲ್ಲೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ತಾರಾ ಪ್ರಚಾರಕರನ್ನಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ರಜನಿಕಾಂತ್ ಅವರಿಂದ ಸ್ಥಾಪನೆಯಾಗಲಿರುವ ಹೊಸ ಪಕ್ಷದೊಂದಿಗೆ ಬಿಜೆಪಿ ತಮಿಳುನಾಡಿನಲ್ಲಿ  ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಜೊತೆ ಈಗಲೂ ರಜನಿ ಉತ್ತಮವಾದ ಸಂಬಂಧವನ್ನು ಹೊಂದಿರುವುದು ರಹಸ್ಯವಾಗಿ ಉಳಿದಿಲ್ಲ.

ಇಬ್ಬರು ನಾಯಕರ ಸ್ನೇಹವನ್ನೇ ಪಕ್ಷದ ಪರ ಪ್ರಚಾರಕ್ಕೆ ಬಳಸಿಕೊಳ್ಳಲು ರಾಜ್ಯ ಬಿಜೆಪಿ ಘಟಕ ತೀರ್ಮಾನಿಸಿದೆ. ಆದರೆ ರಜನೀಕಾಂತ್ ಅವರು ಬಿಜೆಪಿ ಅಭ್ಯರ್ಥಿಗಳ ಪರ ರಾಜ್ಯಕ್ಕೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ತಮಿಳುನಾಡಿಗೆ ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭದಲ್ಲೆಲ್ಲ ರಜನಿಕಾಂತ್ ಅವರನ್ನು ಭೇಟಿ ಮಾಡಿ ಬರುತ್ತಿದ್ದರು. ಹಿಂದೊಮ್ಮೆ ಅವರನ್ನು ಕಮಲದ ತೆಕ್ಕೆಗೆ ಸೆಳೆಯಲು ಖುದ್ದು ಮೋದಿ ಮತ್ತು ಅಮಿತ್ ಶಾ ಜೋಡಿ ಮುಂದಾಗಿತ್ತು. ಆದರೆ ರಜನಿ ಇದನ್ನು ಅಷ್ಟೇ ನಯವಾಗಿ ತಿರಸ್ಕರಿಸಿದ್ದರು. ಆದರೂ ಈಗಲೂ ಮೋದಿ ಎಂದರೆ ಅವರಿಗೆ ಅಚ್ಚುಮೆಚ್ಚು ಎಂದು ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ. ತಮಿಳುನಾಡಿನಲ್ಲಿ ಸ್ಥಾಪನೆಯಾಗಲಿರುವ ಹೊಸ ಪಕ್ಷದೊಂದಿಗೆ ಅಲ್ಲಿನ ಸ್ಥಳೀಯ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ.

ಈ ಮೈತ್ರಿ ಯಶಸ್ವಿಯಾದರೆ ರಜನಿಯನ್ನು ಕರ್ನಾಟಕದಲ್ಲಿ ಪ್ರಚಾರಕ್ಕೆ ಕರೆತರುವ ಮೂಲಕ ಹೆಚ್ಚಿನ ಕ್ಷೇತ್ರ ಗೆಲ್ಲುವುದು ಬಿಜೆಪಿ ಲೆಕ್ಕಾಚಾರ.ಪ್ರತ್ಯೇಕವಾಗಿಯೂ ಬಾರದಿದ್ದರೆ ಕೊನೆ ಪಕ್ಷ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿ ಎಂಬ ಆಸೆ ಬಿಜೆಪಿ ನಾಯಕರದ್ದು.

ಅಂದ ಹಾಗೆ ರಾಜ್ಯದಲ್ಲಿ ರಜನಿಕಾಂತ್ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸಿದರೆ ಪಕ್ಷಕ್ಕೆ ಆನೆ ಬಲ ಬರುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ರಜನಿ ಹುಟ್ಟಿದ್ದು , ಬೆಂಗಳೂರು. ಈಗಲೂ ಅವರಿಗೆ ರಾಜ್ಯಾದ್ಯಂತ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪಕ್ಷ ಸ್ಥಾಪನೆ ಮಾಡುವ ಮುನ್ನ ಕರ್ನಾಟಕ, ಕನ್ನಡ, ಇಲ್ಲಿ ಹುಟ್ಟಿ ಬೆಳೆದದ್ದು, ವರನಟ ಡಾ.ರಾಜ್‍ಕುಮಾರ್ ಅವರ ವ್ಯಕ್ತಿತ್ವವನ್ನು ಗುಣಗಾನ ಮಾಡಿದ್ದರು. ಈಗಲೂ ಅವರ ಹೊಸ ಚಿತ್ರಗಳನ್ನು ಬಿಡುಗಡೆಯಾದ ದಿನವೇ ಸಾವಿರಾರು  ಅಭಿಮಾನಿಗಳು ನೋಡುವುದುಂಟು. ಕರ್ನಾಟಕಕ್ಕೂ ರಜನಿಕಾಂತ್‍ಗೂ ಬಿಡಿಸಲಾರದ ನಂಟಿದೆ. ಇದೆಲ್ಲವನ್ನು ಲೆಕ್ಕಾಚಾರ ಹಾಕಿರುವ ಬಿಜೆಪಿ ಸಾಧ್ಯವಾದಷ್ಟು ಅವರನ್ನು ಪ್ರಚಾರಕ್ಕೆ ಬಳಸಿಕೊಂಡರೆ ಹೆಚ್ಚಿನ ಲಾಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.ಸಂಬಂಧಿತ ಟ್ಯಾಗ್ಗಳು

Rajani Kanth Tamilnadu ಅಮಿತ್ ಶಾ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ