ರಾಜಕೀಯ ಮುಖಂಡರ ಸೈಬರ್ ವಾರ್

Cyber War of Political Leaders

01-01-2018

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಸೈಬರ್ ವಾರ್ ಹೆಚ್ಚುತ್ತಿದೆ. ಬಿಜೆಪಿ ನಾಯಕರು ಸರ್ಕಾರ ಮತ್ತು ಕಾಂಗ್ರೆಸ್ ನಾಯಕರನ್ನು ಕೆಣಕುತ್ತಿದ್ದರೆ, ಕಾಂಗ್ರೆಸ್‍ನ ಯುವ ನಾಯಕರ ತಂಡ ಅದಕ್ಕೆ ತಿರುಗೇಟು ನೀಡುವ ಮೂಲಕ ಕೌಂಟರ್ ಅಟ್ಯಾಕ್ ಮಾಡುತ್ತಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಟ್ವೀಟರ್‍ನಲ್ಲಿ ನಾನೊಬ್ಬ ಹಿಂದುವಾಗಿ ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಆದರೆ, ಹಿಂದುಗಳನ್ನು ಅನೈತಿಕವಾಗಿ ಮತಾಂತರ ಮಾಡಿದ  ಮತ್ತು ಅಂತಹ ರಾಷ್ಟ್ರ ದ್ರೋಹಿ ಶಕ್ತಿಗಳನ್ನು ಬೆಂಬಲಿಸಿದವರನ್ನು ಸಹಿಸುವುದಿಲ್ಲ. ಸತ್ಯಾಂಶ ಅರಿಯದ ಉಪದೇಶಗಳು ಅತ್ಯಂತ ಅಪಾಯಕಾರಿ. ಅದು ಭವಿಷ್ಯದಲ್ಲಿ ಭಾರತಕ್ಕೆ ಆತಂಕವನ್ನು ಉಂಟು ಮಾಡಬಹುದು ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಅವರು, ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರ ಎಂದು ಗೊತ್ತಿಲ್ಲ. ಈ ಶತಮಾನದಲ್ಲಿ ಬೌದ್ಧ, ಜೈನ, ಮೊಗಲರ ಆಡಳಿತ, ಬ್ರಿಟಿಷರ ಆಡಳಿತ ನಡೆದಿದೆ. ಆದರೂ ಶೇ.80ರಷ್ಟು ಹಿಂದುಗಳು ಉಳಿದಿದ್ದಾರೆ. ಉತ್ಪ್ರೇಕ್ಷಿತ ಹೇಳಿಕೆಗಳನ್ನು ನೀಡಿ ಸುಳ್ಳನ್ನು ವೈಭವೀಕರಿಸುವ ದ್ವೇಷಿಯ ಭಾವನೆಗಳನ್ನು ಕೈಬಿಡಿ, ಅದು ಹಿಂದು ಧರ್ಮದ ಶ್ರೇಷ್ಠತೆ ಆಗಿದೆ ಎಂದು ತಿರುಗೇಟು ನೀಡಿದ್ದಾರೆ.

ಇನ್ನೊಂದೆಡೆ ಟಿಪ್ಪು ಜಯಂತಿ ವಿಷಯವಾಗಿ ಕಾಂಗ್ರೆಸ್ ನಾಯಕರನ್ನು ಕೆಣಕಿದ ರಾಜ್ಯ ಬಿಜೆಪಿಯ ಟ್ವೀಟರ್ ಖಾತೆಗೆ ಸಚಿವ ಪ್ರಿಯಾಂಕ್‍ಖರ್ಗೆ ತೀಕ್ಷ್ಮಣವಾಗಿ ಉತ್ತರಿಸಿ ನೇರವಾಗಿ ತಿರುಗೇಟು ನೀಡಿದ್ದಾರೆ. ಚುನಾವಣೆ ವೇಳೆ ವಾಕ್ಸಮರ, ಟೀಕೆಗಳು, ಆರೋಪಗಳು ಸಾಮಾನ್ಯ. ಅವು ಈಗ ಮತ್ತೊಂದು ಸ್ವರೂಪ ಪಡೆದಿದ್ದು, ಬಹಿರಂಗ ಹೇಳಿಕೆ, ಟೀಕೆಗಳ ಜೊತೆ ಸಾಮಾಜಿಕ ಜಾಲತಾಣದಲ್ಲೂ ಸೈಬರ್ ವಾರ್ ಶುರುವಾಗಿದೆ. ಅತಿ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಯುವಸಮುದಾಯ ರಾಜಕೀಯ ನಾಯಕರ ಸೈಬರ್ ವಾರ್‍ ನಲ್ಲಿ ತಾವು ಕೂಡ ಭಾಗವಹಿಸಿ ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

cyber war Politics ಕೆಪಿಸಿಸಿ ಭವಿಷ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ