ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲ್

Priyank Kharge tong to BJP

01-01-2018

ಬೆಂಗಳೂರು: ಐಟಿ-ಬಿಟಿಯಿಂದ ಹಿಡಿದು ಕೃಷಿ ಸಂಸ್ಕರಣೆಯವರೆಗೆ ಹಲವು ಕ್ಷೇತ್ರಗಳಲ್ಲಿ ನೂತನ ಅವಿಷ್ಕಾರಗಳನ್ನು ನಡೆಸುವುದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದಿರುವ ಮಾಹಿತಿ, ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಸುಳ್ಳು ಹೇಳುವುದನ್ನು ಬಿಟ್ಟು ಈ ಕುರಿತು ಅಧ್ಯಯನ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿ ತನ್ನ ಟ್ವೀಟರ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ವೇಳೆ, ಟಿಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಿರುವ ಫೋಟೋ ಹಾಕಿ ಕಾಂಗ್ರೆಸ್ ನಾಯಕರು ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದು ಹೇಳಿದ್ದು, ಅದರ ಪಕ್ಕದಲ್ಲಿ ನಿರ್ಮಲಾ ಸೀತಾರಾಮ್ ಅವರು ಸಿಇಒಎಲ್ ಕೇಂದ್ರ ಉದ್ಘಾಟಿಸುತ್ತಿರುವ ಫೋಟೋ ಹಾಕಿ ಬಿಜೆಪಿ ನಾಯಕರು ನವೋದ್ಯಮಗಳಿಗಾಗಿ ನವ ಆವಿಷ್ಕಾರ ಕೇಂದ್ರಗಳನ್ನು ಆರಂಭಿಸುತ್ತಿದ್ದಾರೆ ಎಂದು ಪ್ರತಿಬಿಂಬಿಸಲಾಗಿತ್ತು.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್‍ಖರ್ಗೆ, ನಾವು ಟಿಪ್ಪು ಜಯಂತಿಯನ್ನೂ ಆಚರಿಸುತ್ತೇವೆ, ಅದರ ಜೊತೆಗೆ ಕರ್ನಾಟಕವನ್ನು ಆಧುನಿಕತೆಯತ್ತ ಕೊಂಡೊಯ್ಯುವ ಕೆಲಸವನ್ನೂ ಮಾಡುತ್ತೇವೆ ಎಂದರು. ಈಗಾಗಲೇ ಏರೋಸ್ಪೇಸ್ ಕ್ಷೇತ್ರ, ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ಎಐ, ಬಿಗ್ ಡಾಟಾ, ಮಿಷನ್ ಲರ್ನಿಂಗ್, ಬಿ.ಸಿ, ಸೈಬರ್ ಸೆಕ್ಯೂರಿಟಿ, ಕೃಷಿ ತಂತ್ರಜ್ಞಾನ, ಆನಿಮೇಷನ್, ಗೇಮಿಂಗ್ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ನವ ಆವಿಷ್ಕಾರ ಕೇಂದ್ರಗಳನ್ನು ಆರಂಭಿಸಿದ್ದೇವೆ. ಹೊಸದಾಗಿ ಆರಂಭಿಸುವುದು ಇನ್ನೇನಾದರೂ ಉಳಿದಿದ್ದರೆ ಸಲಹೆ ನೀಡಿ ಎಂದು ಅವರು ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ.

ಒಮ್ಮೆ ಬಿಜೆಪಿ ನಾಯಕರು ನಮ್ಮ ಕೇಂದ್ರಗಳಿಗೆ ಭೇಟಿ ನೀಡಲಿ. ನಿಮಗೆ ರಾಜ್ಯಸರ್ಕಾರದ ಸಾಧನೆಗಳನ್ನು ನೋಡಿ ಆಶ್ಚರ್ಯವಾಗುವುದು ನಿಶ್ಚಿತ. ಬಹುಶಃ ನೀವು ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಸುಳ್ಳು ಪ್ರಚಾರ ಮಾಡದೆ ಇರಲು ಸಹಾಯವಾಗಬಹುದು ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Priyank Kharge techonology ತೀಕ್ಷ್ಣ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ