ಬೆಂಗಳೂರಿನಲ್ಲಿ ಗಾಂಜಾ ಹಾವಳಿ...!

Bengaluru is becoming Ganja city..!

01-01-2018

ಆಧುನಿಕ ಜೀವನ ಶೈಲಿಗೆ ಜೋತುಬಿದ್ದು, ಈಗಾಗಲೇ ಮೊಬೈಲ್ ಫೋನು, ಫೇಸ್‌ ಬುಕ್, ಸಿನೆಮಾ, ಸಿಗರೇಟು, ಮದ್ಯ ಮುಂತಾದ ಚಟಗಳಿಗೆ ದಾಸರಾಗಿ ಬಹುತೇಕ ದಿಕ್ಕುತಪ್ಪಿರುವ ಬೆಂಗಳೂರಿನ ಯುವ ಜನತೆ, ಈಗ ಒಂದು ಹೊಸ ಅನಿಷ್ಟವನ್ನು ತಮ್ಮ ತಲೆಗೇರಿಸಿಕೊಂಡಂತಿದೆ- ಅದೇ ಗಾಂಜಾ ಸೇವನೆ ಚಟ. ಐಟಿ ಕಂಪನಿಗಳ ಉದ್ಯೋಗಿಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳು, ಹೊರ ರಾಜ್ಯ ಮತ್ತು ಹೊರ ದೇಶಗಳ ವಿದ್ಯಾರ್ಥಿಗಳು ಹಾಗೂ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಉದ್ಯಮಿಗಳು ಗಾಂಜಾ ಚಟದ ದಾಸರಾಗಿರುವುದು ಕಂಡುಬರುತ್ತಿದೆ.

ಬೆಂಗಳೂರು ನಗರದಲ್ಲಿ ಅತ್ಯಂತ ಸುಲಭವಾಗಿ ಗಾಂಜಾ ದೊರೆಯುವುದು ಮಾತ್ರವಲ್ಲದೆ, ಗಾಂಜಾ ಮಾರಾಟಗಾರರು ಕೇಳಿದಷ್ಟು ಹಣವನ್ನು ನೀಡುವ ಸಾಮರ್ಥ್ಯವನ್ನು ಈ ಗಾಂಜಾ ದಾಸರು ಹೊಂದಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಹೊಸ ವರ್ಷಾಚರಣೆ ಸಂದರ್ಭದಲ್ಲಿ, ಬೆಂಗಳೂರಿನಲ್ಲೇ ಸುಮಾರು 2 ಸಾವಿರ ಕೆಜಿಗೂ ಹೆಚ್ಚು ಗಾಂಜಾ ಮಾರಾಟವಾಗಿರಬಹುದೆಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ಈ ನಗರಕ್ಕೆ ಹೇಗೆ ಬರುತ್ತಿದೆ, ಎಲ್ಲಿಂದ ಬರುತ್ತಿದೆ, ಈ ಮಾರಾಟ ಜಾಲದ ಹಿಂದಿರುವ ಕುಳಗಳು ಯಾರು ಎನ್ನುವುದು, ಭಾರತದಲ್ಲೇ ಅತ್ಯುತ್ತಮ ಪೊಲೀಸರು ಎನ್ನಿಸಿಕೊಂಡಿರುವ ಬೆಂಗಳೂರು ಪೊಲೀಸರಿಗೆ ಗೊತ್ತಾಗದಿರುವುದು ಆಶ್ಚರ್ಯವೇ. 

ಕೆಲವೊಂದು ಕಾಲೇಜುಗಳ ಆಸುಪಾಸಿನಲ್ಲಿ, ಬಹಿರಂಗವಾಗಿಯೇ ಗಾಂಜಾ ವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಸೂಪರ್ ಸುದ್ದಿಗೆ ಬಂದಿದೆ. ಮದ್ಯದೊಂದಿಗೆ ಗಾಂಜಾ ಅಮಲನ್ನೂ ತಲೆಗೇರಿಸಿಕೊಂಡು ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಈ ಯುವ ಪೀಳಿಗೆ, ದೇಶದ ಸ್ವಾಸ್ಥ್ಯಕ್ಕೆ ಎಷ್ಟು ಮಾರಕವಾಗಿ ಪರಿಣಮಿಸಬಹುದು ಎನ್ನುವುದು, ಮುಂಬರುವ ದಿನಗಳಲ್ಲಿ ಸ್ವಷ್ಟವಾಗುತ್ತದೆ. ಜಾತಿ ಮತ್ತು ಧರ್ಮಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ರಾಜಕಾರಣಿಗಳು ಮತ್ತು ಸರ್ಕಾರ, ಈ ಪಿಡುಗನ್ನು ನಿಯಂತ್ರಿಸುವ ಬಗ್ಗೆ ಗಮನಹರಿಸದೆ, ಈ ಅನಿಷ್ಟಕ್ಕೆ ಪರೋಕ್ಷವಾಗಿ ಪೋಷಕರಾಗಿಬಿಟ್ಟಿರುವುದು ನಮ್ಮ ಸಮಾಜದ ದುರಂತವೇ ಸರಿ.

 


ಸಂಬಂಧಿತ ಟ್ಯಾಗ್ಗಳು

Ganja Police ಯುವ ಪೀಳಿಗೆ ಅತ್ಯುತ್ತಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ