ಎಟಿಎಂಗಳಲ್ಲಿ ಹಣವಿಲ್ಲದೆ ಖಾಲಿ ಖಾಲಿ

Kannada News

17-04-2017

ಬೆಂಗಳೂರು :- ಗರಿಷ್ಠ ಮುಖಬೆಲೆಯ ನೋಟು ಅಮಾನ್ಯ ಮಾಡಿದ ಸಂದರ್ಭದಲ್ಲಿ ಎದುರಾದ ಎಟಿಎಂಗಳಲ್ಲಿ ಹಣವಿಲ್ಲದೆ ಗ್ರಾಹಕರು ಪರದಾಡಿದ ಪರಿಸ್ಥಿತಿ ಮತ್ತೆ ಪುನರಾವರ್ತಿತವಾಗಿದೆ. ಇದರಿಂದ ಹಣ ಹಿಂಪಡೆಯಲು ಎಂಟಿಎಂಗಳಿಗೆ ಹೋದ ಮಂದಿಗೆ ’ನೋ ಕ್ಯಾಶ್’ ಹಾಗು ’ಔಟ್ ಆಫ್ ಸರ್ವೀಸ್’ ನಾಮಫಲಕ ಸ್ವಾಗತಿಸುತ್ತಿವೆ.

ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ಎಟಿಎಂಗಳಲ್ಲಿ ಹಣವಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿವೆ. ಇದರಿಂದಾಗಿ ಹಣ ಹಿಂಪಡೆಯಲು ಸಾಧ್ಯವಾಗದೆ ಜನರು ನಿರಾಸೆಯಿಂದ ಹಿಂದಿರುಗುವಂತಹ ಸ್ಥಿತಿ ಬಹುತೇಕ ಎಟಿಎಂಗಳಲ್ಲಿ ನಿರ್ಮಾಣವಾಗಿದೆ.

ಅಗತ್ಯ ಮತ್ತು ತುರ್ತು ಕೆಲಸಗಳಿಗೆ ಹಣ ಹಿಂಪಡೆಯಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ನಗರದ ೯೦ ಕ್ಕೂ ಹೆಚ್ಚು ಎಟಿಎಂಗಳು ಹಾಗು ರಾಜ್ಯದ ವಿವಿಧ ಭಾಗಗಲ್ಲಿನ ಎಟಿಎಂಗಳಲ್ಲಿ ’ನೋ ಕ್ಯಾಶ್’ ಹಾಗು ’ಔಟ್ ಆಫ್ ಸರ್ವೀಸ್’ ನಾಮಫಲಕವಿರುವುದು ಜನರನ್ನು ಕಂಗಾಲಾಗುವಂತೆ ಮಾಡಿದೆ.

ಕಳೆದ ಒಂದು ತಿಂಗಳಿನಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದು ಜನರ ಪಾಡು ಹೇಳತೀರದಾಗಿದೆ. ಅದರಲ್ಲಿಯೂ ಅಗತ್ಯ ಖರ್ಚುಗಳಿಗೆ ಹಾಗು ವಾರಾಂತ್ಯದ ಖರ್ಚುಗಳಿಗೆ ಹಣವಿಲ್ಲದೆ ಬಸವಳಿಯುವಂತಾಗಿದೆ.

ನೋಟು ಅಮಾನ್ಯದ ಬಳಿಕ ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಲು ಎಟಿಎಂಗಳಿಗೆ ಕಡಿಮೆ ಹಣ ತುಂಬಿಸಲಾಗುತ್ತಿತ್ತು.ಇದೀಗ ಅಂತಹದುದೇ ಪರಿಸ್ಥಿತಿ ಎದುರಾಗಿದೆ. ಆರ್‌ಬಿಐ ನಿಂದ ಬ್ಯಾಂಕ್‌ಗಳಿಗೆ ಪೂರೈಕೆ ಮಾಡಿರುವ ಹಣ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ತಮ್ಮ ಎಟಿಎಂಗಳಿಗೆ ಹಣ ತುಂಬಿಸುವ ಪ್ರಮಾಣ ಕಡಿಮೆ ಮಾಡಿವೆ. ಇದರಿಂದಾಗಿ ಎಟಿಎಂಗಳಲ್ಲಿ ಹಣವಿಲ್ಲದೆ ಪರದಾಡುವಂತಹ ವಾತಾವರಣ ನಿರ್ಮಾಣವಾಗಿದೆ.

 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ