ಮೇಲ್ಸೇತುವೆ ಮೇಲೆ ಎಂಜಿನಿಯರ್ ಸಾವು

Engineer Died in accident on flyover

29-12-2017 287

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಮೇಲ್ಸೇತುವೆ ರಸ್ತೆ ಹಾಗೂ ಪರಪ್ಪನ ಅಗ್ರಹಾರ ರಸ್ತೆಯಲ್ಲಿ  ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಸೇರಿ ಇಬ್ಬರು ಮೃತಪಟ್ಟು, ಓರ್ವ ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ತಾವರೆಕೆರೆಯ ವಿಕಾಸ್ ಕುಮಾರ್ ಗೌತಮ್ (28), ಪರಪ್ಪನ ಅಗ್ರಹಾರದ ದಸ್ತಗೀರ್ (32) ಗಾಯಗೊಂಡಿರುವ ಜೀವನ್‍ಕುಮಾರ್ (25), ಫ್ಲಾಜಂ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ತಾವರೆಕೆರೆಯ ಎಲಿವೇಟೆಡ್ ಮೇಲ್ಸೇತುವೆ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಗಾಯಗೊಂಡಿದ್ದ ಸಾಫ್ಟ್ ವೇರ್ ಎಂಜಿನಿಯರ್ ಗೌತಮ್ ಮೇಲೆ ವೇಗವಾಗಿ ಬಂದ ಮತ್ತೊಂದು ಕಾರು ಹರಿದು ಮೃತಪಟ್ಟಿದ್ದಾರೆ.

ಎಚ್‍ಸಿಎಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಗೌತಮ್, ರಾತ್ರಿ 7.30ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‍ನಲ್ಲಿ ಬರುತ್ತಿದ್ದರು. ಮಾರ್ಗ ಮಧ್ಯೆ ಎಲಿವೇಟೆಡ್ ಮೇಲ್ಸೇತುವೆ ರಸ್ತೆಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ನಿರ್ಲಕ್ಷ್ಯದಿಂದ ನಿಲ್ಲಿಸಿದ್ದ ಆಮ್ನಿ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಇದೇ ಮಾರ್ಗವಾಗಿ ಬಂದ ಮತ್ತೊಂದು ಕಾರು ಅವರ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡ ಗೌತಮ್ ಅವರನ್ನು ವೆಂಕಟೇಶಪುರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇನ್ನೊಂದೆಡೆ ಪರಪ್ಪನ ಅಗ್ರಹಾರ ರಸ್ತೆಯಲ್ಲಿ, ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ವಿಪ್ರೋ ಕಂಪನಿಯ ಉದ್ಯೋಗಿ ಕಿನಾಲ್ ಕಿಶೋರ್ ಪಂಕ್ಚರ್ ಅಂಗಡಿ ಮುಂದೆ ನಿಂತಿದ್ದ ದಸ್ತಗೀರ್ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ ಬೈಕ್‍ಗೆ ಗುದ್ದಿದ್ದು, ಗಾಯಗೊಂಡ ದಸ್ತಗೀರ್, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಸಂಜೀವ್ ಕುಮಾರ್ ಕೆಳಗೆ ಬಿದ್ದು, ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ರಸ್ತೆ ಬದಿ ನಿಂತಿದ್ದ 2 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಆರೋಪಿ ಕಿನಾಲ್ ಕಿಶೋರ್ ನನ್ನು ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಎಸಿಪಿ ಚೌಡಪ್ಪ ಅವರು ತಿಳಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

Fly over accident ಎಲೆಕ್ಟ್ರಾನಿಕ್ ಸಂಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ