ಮಗುವಿಗಾಗಿ ಪ್ರಾಣ ಬಿಟ್ಟ ತಂದೆ

A Man suicide for his son

29-12-2017

ಬೆಂಗಳೂರು: ಶ್ರೀರಾಂಪುರದ ದಯಾನಂದ ನಗರದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇರೆಯಾದ ಪತ್ನಿ, ಮಗುವನ್ನು ಜಗಳ ಮಾಡಿ ಕರೆದುಕೊಂಡು  ಹೋಗಿದ್ದಕ್ಕೆ ನೊಂದ ಪತಿ ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ದಯಾನಂದ ನಗರದ 4ನೇ ಕ್ರಾಸ್‍ನ ಭರತ್ (25)ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಭರತ್,  3 ವರ್ಷಗಳ ಹಿಂದೆ ಪ್ರಕಾಶ್ ನಗರದ ಮಂಜೇಶ್ವರಿಯನ್ನು ವಿವಾಹವಾಗಿದ್ದರು. ದಂಪತಿಗೆ 1 ವರ್ಷದ ಗಂಡು ಮಗುವಿದೆ. ಕೌಟುಂಬಿಕ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದ ಪತ್ನಿ, ಪೊಲೀಸರಿಗೆ ದೂರು ನೀಡಿ ಮಗುವನ್ನು ಕರೆದುಕೊಂಡು ತವರಿಗೆ ಹೋಗಿದ್ದರು.

ಮಗನನ್ನು ಬಹಳಷ್ಟು ಹಚ್ಚಿಕೊಂಡಿದ್ದ ಭರತ್, ತನ್ನ ಬಳಿಯೇ ಮಗುವನ್ನು ಇಟ್ಟುಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟು ವಿಫಲನಾಗಿದ್ದ. ಮಗುವನ್ನು ಕರೆದುಕೊಂಡು ತನ್ನ ಜೊತೆಯಲ್ಲಿಟ್ಟುಕೊಂಡರೂ ಮಂಜೇಶ್ವರಿ ಮತ್ತೆ ಠಾಣೆಗೆ ಹೋಗಿ ದೂರು ನೀಡುತ್ತಿದ್ದರು. ಪೊಲೀಸರು ಇಬ್ಬರನ್ನು ರಾಜಿ ಮಾಡಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ.

ಅದರಿಂದಾಗಿ ತಾಯಿಯ ಜೊತೆ ಮಗುವನ್ನು ಕಳುಹಿಸಲು ಭರತ್‍ಗೆ ಹೇಳಿದ್ದರು. ಆದರೂ ಮಗುವನ್ನು ಬಿಟ್ಟಿರದ ಭರತ್, ನಿನ್ನೆ ಸಂಜೆ ಚಿಕ್ಕಮ್ಮನ ಮೂಲಕ 2 ಗಂಟೆಗಳ ಕಾಲ ಮಗುವನ್ನು ಮನೆಗೆ ಕೆರೆದುಕೊಂಡು ಬರಲಾಗಿತ್ತು. 1 ಗಂಟೆಗಳ ಕಾಲ ಮಗುವಿನ ಜೊತೆ ಭರತ್ ಆಟವಾಡಿದ್ದರು. ಮಗುವನ್ನು ಕಳುಹಿಸದಿದ್ದರೆ ಮತ್ತೆ ಮಂಜೇಶ್ವರಿ ಪೊಲೀಸರಿಗೆ ದೂರು ನೀಡಬಹುದು ಎಂದು ಆತನ ಚಿಕ್ಕಮ್ಮ ಮಗುವನ್ನು ಕರೆದುಕೊಂಡು ಹೋಗಿ ತಾಯಿ ಜೊತೆ ಬಿಟ್ಟಿದ್ದರು. ಇದರಿಂದ ತೀವ್ರವಾಗಿ ನೊಂದ ಭರತ್, ರಾತ್ರಿ ನೇಣಿಗೆ ಶರಣಾಗಿದ್ದಾರೆ.

ಭರತ್ ತಂದೆ ಬಾಬು ತನ್ನ ಮಗನ ಸಾವಿಗೆ ಪತ್ನಿ ಮಂಜೇಶ್ವರಿ, ಆತನ ತಂದೆ-ತಾಯಿ, ಮಾವ ಹಾಗೂ ಭಾವ ಕಾರಣರಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಶ್ರೀರಾಂಪುರ ಪೊಲೀಸ್ ಇನ್ಸ್ ಪೆಕ್ಟರ್ ಗೌತಮ್ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide srirampura ಇನ್ಸ್ ಪೆಕ್ಟರ್ ಪೊಲೀಸರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ