'ತಮ್ಮ ಪಕ್ಷದವರಿಗೆ ಪತ್ರ ಬರೆದಿರುವುದು ಸರಿಯಲ್ಲ’

HD devegowda Reaction on Mahadayi issue

28-12-2017

ಬೆಂಗಳೂರು: ಜಲ ವಿವಾದದ ವಿಷಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದರೆ ಜೆಡಿಎಸ್ ಮಾತ್ರ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು ಯಾವ ಕಾರಣಕ್ಕೂ ಈ ವಿಷಯದಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಟೀಕಿಸದಂತೆ ಪಕ್ಷದ ನಾಯಕರಿಗೆ ಫರ್ಮಾನು ಹೊರಡಿಸಿದೆ.

ಸಧ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಟೀಕಿಸಬೇಡಿ. ಯಾಕೆಂದರೆ ನಾವು ಕೂಡಾ ಟೀಕಿಸಿದರೆ ಮಹದಾಯಿ ವಿವಾದದ ಪರಿಹಾರದ ಬಾಗಿಲು ಮುಚ್ಚಿ ಹೋಗಬಹುದು. ಅದಕ್ಕೆ ಆಸ್ಪದ ನೀಡುವುದು ಬೇಡ. ಸಾಧ್ಯವಾದರೆ ನಾನೇ ಪ್ರಧಾನಿಯವರ ಜತೆ ಮಾತಾಡುತ್ತೇನೆ ಎಂದು ಪಕ್ಷದ ನಾಯಕರಿಗೆ ದೇವೇಗೌಡ ಸೂಚನೆ ನೀಡಿದ್ದಾರೆ.

ಇಂದು ಸುದ್ದಿಗೋಷ್ಟಿ ನಡೆಸಿದ ಸಂದರ್ಭದಲ್ಲಿ ಶಾಸಕ ಕೋನರೆಡ್ಡಿ ಬಾಯಿ ತಪ್ಪಿ, ಪಕ್ಷದ ವರಿಷ್ಟರು ನೀಡಿದ ಈ ಸೂಚನೆಯ ವಿವರವನ್ನು ಬಹಿರಂಗಪಡಿಸಿ ಬಿಟ್ಟಿದ್ದಾರೆ. ಮಹದಾಯಿ ನದಿ ನೀರಿನ ವಿಷಯದಲ್ಲಿ ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಗೋವಾ ಪರವಾಗಿ ವಾದಿಸಿದ್ದಾರೆ ಎಂದು ಆರೋಪಿಸುತ್ತಿದ್ದ ಕೋನರೆಡ್ಡಿ, ಇದರ ಹಿಂದೆ ಕೇಂದ್ರ ಸರ್ಕಾರ ಇದೆಯೆಂದು ನಿಮಗನ್ನಿಸುವುದಿಲ್ಲವೇ?ಎಂದು ವರದಿಗಾರರು ಕೇಳಿದಾಗ ಆಯಾಚಿತವಾಗಿ ಈ ವಿಷಯವನ್ನು ಬಾಯಿಬಿಟ್ಟರು. ವಿರೋಧದ ವಿಷಯದಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ. ಆದರೆ ಯಾವ ಕಾರಣಕ್ಕೂ ಪ್ರಧಾನಿ ನರೇಂದ್ರಮೋದಿ ಅವರನ್ನು ಟೀಕಿಸಬೇಡಿ. ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಯತ್ನಿಸುತ್ತೇನೆ ಎಂದು ಪಕ್ಷದ ವರಿಷ್ಟರಾದ ದೇವೇಗೌಡರು ಹೇಳಿದ್ದಾರೆ.

ನೀರಾವರಿಯ ವಿಷಯದಲ್ಲಿ ಅವರಷ್ಟು ತಿಳಿದವರು ಯಾರೂ ಇಲ್ಲ. ಹೀಗಾಗಿ ಅವರು ಹೇಳಿದಂತೆ ನಾವು ಕೇಳಬೇಕಿದೆ. ಸಧ್ಯದ ಸ್ಥಿತಿಯಲ್ಲಿ ಪ್ರಧಾನಿಯವರು ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂಬುದಷ್ಟೇ ನಮ್ಮ ಬೇಡಿಕೆ. ಮುಖ್ಯಮಂತ್ರಿಗಳು ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಪ್ರಧಾನಿಯವರನ್ನು ಭೇಟಿ ಮಾಡಬೇಕು ಎಂಬುದು ನಮ್ಮ ಆಗ್ರಹ ಎಂದರು. ಮಹದಾಯಿ ನದಿ ನೀರಿನ ವಿಷಯದಲ್ಲಿ ಗೋವಾದ ಮುಖ್ಯಮಂತ್ರಿಗಳು ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವುದು. ಅವರು ಸಿಹಿ ಸುದ್ದಿ ನೀಡುವುದಾಗಿ ಘೋಷಿಸುವುದು ನಡೆಯಿತು. ಇದರಿಂದಾಗಿ ಉತ್ತರ ಕರ್ನಾಟಕದ ಜನ ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ ಅದು ಹುಸಿಯಾಯಿತು ಎಂದರು.

ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಬದಲು ಗೋವಾದ ಮುಖ್ಯಮಂತ್ರಿಗಳು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಬೇಕಿತ್ತು ಎಂದ ಅವರು, ಗೋವಾ ಮುಖ್ಯಮಂತ್ರಿಗಳು ತಮ್ಮ ಪಕ್ಷದವರಿಗೆ ಪತ್ರ ಬರೆಯುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು. ಮಹದಾಯಿ ನದಿ ನೀರಿನ ವಿವಾದವನ್ನು ಪರಿಹರಿಸುವ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳು ಎಡವಿವೆ. ಆದರೆ ಮಹದಾಯಿ ನದಿ ನೀರಿನ ವಿಷಯದಲ್ಲಿ ನಾವು ನಿರಂತರವಾಗಿ ಹೋರಾಟ ನಡೆಸಿದ್ದೇವೆ. ಸಮಸ್ಯೆ ಪರಿಹಾರವಾಗದಿದ್ದರೆ, ಅಲ್ಲಿನ ಜನರ ನಿರೀಕ್ಷೆಗೆ ಪೂರಕವಾಗಿ ಕುಡಿಯುವ ನೀರು ಸಿಗದಿದ್ದರೆ ಹೋರಾಟ ಮುಂದುವರಿಯಲಿದೆ ಎಂದರು.

ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ಬಿಡುವುದಿಲ್ಲ. ಟ್ರಿಬ್ಯೂನಲ್ ತೀರ್ಪು ಕೂಡಾ ಗೋವಾದ ಪರವಾಗಿ ಬರುತ್ತದೆ ಎಂದು ಹೇಳಿರುವ ಕೇಂದ್ರದ ಸಾಲಿಸಿಟರ್ ಜನರಲ್ ಅವರನ್ನು ತಕ್ಷಣವೇ ಆ ಜಾಗದಿಂದ ಕಿತ್ತು ಹಾಕುವಂತೆ ಅವರು ಆಗ್ರಹಿಸಿದರು. ಗೋವಾದ ಜನರು ಮಹದಾಯಿ ನದಿ ನೀರನ್ನು ಉತ್ತರ ಕರ್ನಾಟಕ ಮೂರು ಜಿಲ್ಲೆಗಳಿಗೆ ಕುಡಿಯುವ ಸಲುವಾಗಿ ಬಿಡಬೇಕು ಎಂದು ಹೇಳುತ್ತಾರೆ. ಆದರೆ ರಾಷ್ಟ್ರೀಯ ಪಕ್ಷಗಳ ಲಾಭದಾಸೆಯಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.


ಸಂಬಂಧಿತ ಟ್ಯಾಗ್ಗಳು

H.D.Deve Gowda Narendra Modi ರಾಷ್ಟ್ರೀಯ ಪಕ್ಷ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ