ರಾಜ್ಯ ಬಿಜೆಪಿ ನಾಯಕರೊಂದಿಗೆ ಷಾ ಸಭೆ

Amit Shah meeting with state BJP leaders

28-12-2017 532

ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೊಸ ವರ್ಷದ ಸಂದರ್ಭದಲ್ಲಿ ರಾಜ್ಯಕ್ಕೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕಮಲ ಪಾಳೆಯದ ಬಹುತೇಕ ನಾಯಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿದೆ. ಇದೇ 31 ರಂದು ನಗರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಹೊಸ ವರ್ಷದ ಆಚರಣೆಗೆ ಅಡ್ಡಿಯಾಗಿದೆ. ಅಮಿತ್ ಷಾ ಭಾನುವಾರದಂದು ಪಕ್ಷದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯಪದಾಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಅಮಿತ್ ಷಾ, ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಕುರಿತು ಈ ಹಿಂದೆ ತಾವು ನೀಡಿದ್ದ ಹೋಮ್‍ ವರ್ಕ್‍ನ ವಿವರ ಪಡೆಯಲಿದ್ದಾರೆ.

ಪಕ್ಷದ ಶಾಸಕರು ತಾವು ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರಗಳ ಜೊತೆ ಇನ್ನೊಂದು ಕ್ಷೇತ್ರವನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಅಮಿತ್ ಷಾ ನೀಡಿ ಹೋಗಿದ್ದು ಇದೇ ರೀತಿ ಸಂಸದರು, ವಿಧಾನಪರಿಷತ್ ಸದಸ್ಯರು, ರಾಜ್ಯಪದಾಧಿಕಾರಿಗಳಿಗೂ ಒಂದೊಂದು ವಿಧಾನಸಭಾ ಕ್ಷೇತ್ರದ ಹೊಣೆಗಾರಿಕೆಯನ್ನು ವಹಿಸಿಕೊಟ್ಟಿದ್ದಾರೆ. ಅಂದ ಹಾಗೆ ಈ ರೀತಿ ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ನಿರ್ದಿಷ್ಟ ವಿಧಾನಸಭಾ ಕ್ಷೇತ್ರಗಳ ಪರಿಸ್ಥಿತಿ, ಪಕ್ಷದ ಪರವಾಗಿರುವ, ವಿರುದ್ಧವಾಗಿರುವ ಅಂಶಗಳು, ವಿರುದ್ಧವಾಗಿರುವ ಅಂಶವನ್ನು ಸರಿಪಡಿಸಿಕೊಳ್ಳಲು ಏನು ಮಾಡಬಹುದು? ಅನ್ನುವುದು ಸೇರಿದಂತೆ ಹಲವು ಸಂಗತಿಗಳಿಗೆ ಹೋಮ್‍ವರ್ಕ್ ಅನ್ನು ಅಮಿತ್ ಷಾ ಹಿಂದೆಯೇ ನೀಡಿದ್ದರು.

ಈಗ ಡಿಸೆಂಬರ್ 31 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ತಮಗೆ ನೀಡಿರುವ ಟಾಸ್ಕ್ ಅನ್ನು ಹೇಗೆ ಪೂರೈಸಿದ್ದೇವೆ ಎಂಬುದನ್ನು ಜವಾಬ್ದಾರಿ ಹೊತ್ತ ಪ್ರತಿಯೊಬ್ಬರು ಲಿಖಿತವಾಗಿ ಸಲ್ಲಿಸಬೇಕಿದೆ. ಈ ಪೈಕಿ ಆಯ್ದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳ ಪೈಕಿ ಕೆಲವರು ಡಿಸೆಂಬರ್ 31 ರಂದು ನಡೆಯುವ ಸಭೆಯಲ್ಲಿ ಅಮಿತ್ ಷಾ ಅವರಿಗೆ ತಮ್ಮ ಹೋಮ್‍ವರ್ಕ್‍ನ ವಿವರ ಸಲ್ಲಿಸಬೇಕಿದೆ.

ಅಂದ ಹಾಗೆ ಆಯಾ ಕ್ಷೇತ್ರಗಳ ಕುರಿತು  ತಮ್ಮದೇ ಪ್ರತ್ಯೇಕ ತಂಡದಿಂದ ಮಾಹಿತಿ ಪಡೆದಿರುವ ಅಮಿತ್ ಷಾ ಅದರೊಂದಿಗೆ ನಿರ್ದಿಷ್ಟ ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ವಹಿಸಿರುವ ಶಾಸಕರು, ಸಂಸದರು ಮತ್ತಿತರರು ನೀಡಿದ ವರದಿಯನ್ನು ಹೋಲಿಸಿ ನೋಡಲಿದ್ದಾರೆ. ಒಂದು ವೇಳೆ ಎರಡೂ ವರದಿಗಳು ತಾಳೆಯಾಗದಿದ್ದರೆ ಅಮಿತ್ ಷಾ ಕ್ಲಾಸ್ ತೆಗೆದುಕೊಳ್ಳುವುದು ನಿಶ್ಚಿತ ಎಂಬುದನ್ನು ಅರ್ಥ ಮಾಡಿಕೊಂಡಿರುವ ಬಹುತೇಕ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಮತ್ತಿತರರು ತಮಗೆ ವಹಿಸಿಕೊಟ್ಟ ವಿಧಾನಸಭಾ ಕ್ಷೇತ್ರಗಳಲ್ಲಿ ತಿರುಗಾಡಿದ್ದು, ತಾವು ಸಂಗ್ರಹಿಸಿದ ಅಂಶಗಳ ಕುರಿತು ವಿವರ ನೀಡಲಿದ್ದಾರೆ.

ಅದೇ ದಿನ ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಅಮಿತ್ ಷಾ ಅವರು ಭಾಗವಹಿಸಲಿದ್ದು ಪ್ರಮುಖ ನಾಯಕರಿಗೆ ನಿರ್ದಿಷ್ಟ ಕಾರ್ಯಸೂಚಿಯನ್ನು ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಪರಿವರ್ತನಾ ರ‍್ಯಾಲಿಯ ವಿಷಯದಲ್ಲಿ ಅಮಿತ್ ಷಾ ಈಗಾಗಲೇ ಸಮಾಧಾನ ವ್ಯಕ್ತಪಡಿಸಿದ್ದು ಉಳಿದಂತೆ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂಬುದು ಸೇರಿದಂತೆ ಹಲವು ದೂರುಗಳ ಕುರಿತು ಕೋರ್ ಕಮಿಟಿಯಲ್ಲಿ ನೇರವಾಗಿ ಪ್ರಸ್ತಾಪ ಮಾಡಲಿದ್ದಾರೆ. ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳಿಗೆ ತೇಪೆ ಹಚ್ಚಿದ್ದರೂ, ಭಿನ್ನಮತೀಯ ಚಟುವಟಿಕೆ ನಡೆಸುತ್ತಿದ್ದ ಹಲವು ನಾಯಕರಿಗೆ ನೇರ ಎಚ್ಚರಿಕೆ ನೀಡಿದ್ದರೂ ಆಳದಲ್ಲಿ ಸಮಸ್ಯೆ ಬಗೆಹರಿದಿಲ್ಲ ಎಂಬುದು ಅಮಿತ್ ಷಾ ಅವರಿಗೆ ಗೊತ್ತಿದೆ. ಬಹಿರಂಗವಾಗಿ ಯಡಿಯೂರಪ್ಪ ಅವರ ವಿರುದ್ಧ ಯಾರೂ ನಿಲ್ಲದೇ ಹೋದರೂ ಆಳದಲ್ಲಿ ನಿರೀಕ್ಷಿತ ಪ್ರಮಾಣದ ಸಹಕಾರವನ್ನೂ ನೀಡುತ್ತಿಲ್ಲ ಎಂಬುದು ಅಮಿತ್ ಷಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಹೀಗಾಗಿ ಈ ಎಲ್ಲ ವಿಷಯಗಳ ಕುರಿತು ಅಮಿತ್ ಷಾ ಅವರು ನೇರವಾಗಿ ಪ್ರಸ್ತಾಪಿಸಲಿದ್ದು ಯಾವ್ಯಾವ ನಾಯಕರ ವಿಷಯದಲ್ಲಿ ತಮಗಿರುವ ವಿವರವೇನು? ವಾಸ್ತವದಲ್ಲಿ ಅವರೇನು ಮಾಡಬೇಕಿತ್ತು? ಆದರೆ ಅವರೇನು ಮಾಡುತ್ತಿದ್ದಾರೆ? ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ಕುರಿತು ಅಮಿತ್ ಷಾ ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಮಾಡಲಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ