2 ತಿಂಗಳಲ್ಲಿ 309 ಆರೋಪಿಗಳು ಅರೆಸ್ಟ್

309 accused arrested in 2 months

28-12-2017

ಬೆಂಗಳೂರು: ಕಳೆದ ಎರಡೂವರೆ ತಿಂಗಳ ಅವಧಿಯಲ್ಲಿ ಪಶ್ಚಿಮ ವಲಯದ ಪೊಲೀಸರು ಕಳ್ಳತನ, ಸುಲಿಗೆ, ಮನೆಗಳವು, ವಾಹನ ಕಳವು ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 309 ಮಂದಿ ಆರೋಪಿಗಳನ್ನು ಬಂಧಿಸಿ 7 ಕೋಟಿ 46 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ವಲಯದ ಕೇಂದ್ರ ಉತ್ತರ ಪಶ್ಚಿಮ ಹಾಗೂ ದಕ್ಷಿಣ ವಲಯದ ಬಂಧಿತ ಆರೋಪಿಗಳಿಂದ 18 ಕೆಜಿ 36 ಗ್ರಾಂ ಚಿನ್ನ, 14 ಕೆಜಿ 30 ಗ್ರಾಂ ಬೆಳ್ಳಿ, 236 ವಾಹನಗಳು ಸೇರಿ 7 ಕೋಟಿ 46 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು 559 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ಕಳವು ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕವಾಯತಿನಲ್ಲಿ ಪಾಲ್ಗೊಂಡಿದ್ದ  ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಅವರು ಈ ಮಾಹಿತಿ ನೀಡಿದರು. ಕೇಂದ್ರ ವಿಭಾಗದ ಪೊಲೀಸರು 110 ಮಂದಿ ಆರೋಪಿಗಳನ್ನು ಬಂಧಿಸಿ 2 ಕೆಜಿ 35 ಗ್ರಾಂ ಚಿನ್ನ, 2 ಕೆಜಿ 90 ಗ್ರಾಂ ಬೆಳ್ಳಿ, 63 ವಾಹನಗಳು ಸೇರಿ 1 ಕೋಟಿ 58ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು 99 ಅಪರಾಧ ಪತ್ತೆಹಚ್ಚಿದ್ದಾರೆ. ಉತ್ತರ ವಿಭಾಗದ ಪೊಲೀಸರು 61 ಮಂದಿ ಆರೋಪಿಗಳನ್ನು ಬಂಧಿಸಿ 3 ಕೆಜಿ 25 ಗ್ರಾಂ ಚಿನ್ನ, 3 ಕೆಜಿ 90 ಗ್ರಾಂ ಬೆಳ್ಳಿ, 63 ವಾಹನ ಸೇರಿ 1 ಕೋಟಿ 61 ಲಕ್ಷದ ಮಾಲುಗಳನ್ನು ವಶಪಡಿಸಿಕೊಂಡು 133 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.

ಪಶ್ಚಿಮ ವಿಭಾಗದ ಪೊಲೀಸರು 213 ಪ್ರಕರಣಗಳನ್ನು ಪತ್ತೆ ಹಚ್ಚಿ, 79 ಮಂದಿ ಆರೋಪಿಗಳನ್ನು ಬಂಧಿಸಿ 7 ಕೆಜಿ 88 ಗ್ರಾಂ ಚಿನ್ನ, 5 ಕೆಜಿ 90 ಗ್ರಾಂ ಬೆಳ್ಳಿ, 69 ವಾಹನಗಳು ಸೇರಿ 2 ಕೋಟಿ 57 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ದಕ್ಷಿಣ ವಿಭಾಗದ ಪೊಲೀಸರು 111 ಪ್ರಕರಣಗಳನ್ನು ಪತ್ತೆ ಹಚ್ಚಿ 59 ಮಂದಿ ಆರೋಪಿಗಳನ್ನು ಬಂಧಿಸಿ 4 ಕೆಜಿ 88 ಗ್ರಾಂ ಚಿನ್ನ, 1 ಕೆಜಿ 60 ಗ್ರಾಂ ಬೆಳ್ಳಿ, 41 ವಾಹನಗಳು ಸೇರಿ 1 ಕೋಟಿ 70 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವಿವರಿಸಿದರು. ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ಡಿಸಿಪಿಗಳಾದ ಚಂದ್ರಗುಪ್ತ, ಚೇತನ್ ಸಿಂಗ್, ಶರಣಪ್ಪ, ಅನುಚೇತ್ ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

Crime arrest ಆರೋಪಿ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ