‘ಕದ್ದ ವಾಹನ ಕೊಂಡರೆ ಕಠಿಣ ಶಿಕ್ಷೆ'28-12-2017

ಬೆಂಗಳೂರು: ಕಳವು ವಾಹನಗಳನ್ನು ಖರೀದಿಸುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಅಗತ್ಯ ಬಿದ್ದರೆ ಕಾನೂನಿಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿಂದು ಪಶ್ಚಿಮ ವಿಭಾಗದ ಪೊಲೀಸರು ವಶಪಡಿಸಿಕೊಂಡ ಕಳವು ಮಾಲುಗಳನ್ನು ವಾರಸುದಾರರಿಗೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳವು ಮಾಲುಗಳನ್ನು ಖರೀದಿಸುವವರನ್ನು ಬಂಧಿಸಿ ಶಿಕ್ಷೆಗೊಳಪಡಿಸಿದರೆ ಕಳ್ಳತನ ಪ್ರಕರಣ ಕಡಿಮೆಯಾಗಲಿದ್ದು ಈ ಸಂಬಂಧ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಲಿದೆ ಎಂದರು. ಕಳವು ಮಾಲುಗಳನ್ನು ಖರೀದಿಸುವವರನ್ನು ಬಂಧಿಸಿ, ಕ್ರಮ ಕೈಗೊಳ್ಳಲು ಅಗತ್ಯ ಬಿದ್ದರೆ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಸಿದ್ಧವಿದೆ. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.

ನಗರದಲ್ಲಿ 5 ಸಾವಿರ ಹಾಗೂ ರಾಜ್ಯದಲ್ಲಿ ಸುಮಾರು 10 ಸಾವಿರ ವಾಹನಗಳ ಕಳ್ಳತನ ನಡೆದಿದ್ದು, ಅದರಲ್ಲಿ ಶೇ. 50 ರಷ್ಟು ಪತ್ತೆಯಾಗಿದೆ. ಕಾರು ಇನ್ನಿತರ ನಾಲ್ಕು ಚಕ್ರದ ವಾಹನಗಳ ಪತ್ತೆ ಕಾರ್ಯ ಸುಲಭವಾದರೂ ದ್ವಿಚಕ್ರ ವಾಹನಗಳ ಪತ್ತೆ ಕಾರ್ಯ ಕಷ್ಟವಾಗುವುದರಿಂದ ಕಳವು ವಾಹನಗಳನ್ನು ಖರೀದಿಸುವವರ ಮೇಲೆ ನಿಗಾವಹಿಸುವಂತೆ ಸಲಹೆ ನೀಡಿದರು.

ನಗರದಲ್ಲಿ ಸರ ಅಪಹರಣ ಪ್ರಕರಣ ಶೇ.90 ರಷ್ಟು ಪತ್ತೆಯಾಗಿದೆ. ಅಪರಾಧ ಪ್ರಕರಣಗಳ ಪತ್ತೆಯಲ್ಲೂ ರಾಜ್ಯ ಪೊಲೀಸರು ಉತ್ತಮ ಕಾರ್ಯನಿರ್ವಹಿಸಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕರು ಕೂಡ ವಾಹನಗಳು ಕಳವಾಗದಂತೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಮನೆಗಳಿಗೆ ಬೀಗ ಹಾಕಿ ಕುಟುಂಬ ಸಮೇತ ಹೊರ ಹೋಗುವಾಗ ಹೆಚ್ಚಿನ ರಕ್ಷಣಾ ಕ್ರಮಗಳು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ