ಅಕ್ರಮ ಸಂಬಂಧಕ್ಕೆ ಬೇಡವಾದ ಹೆತ್ತ ಮಗು

Mother killed his own child

28-12-2017

ಬೆಂಗಳೂರು: ಅಕ್ರಮ ಸಂಬಂಧಕ್ಕಾಗಿ ತಾಯಿಯೇ ಎರಡೂವರೆ ವರ್ಷದ ಹೆಣ್ಣುಮಗಳನ್ನು ತನ್ನ ಪ್ರಿಯಕರನ ಜೊತೆ ಸೇರಿ ವೇಲ್‍ನಿಂದ ಕುತ್ತಿಗೆ ಬಿಗಿದು ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ಆನೇಕಲ್‍ನಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡುವರೆ ವರ್ಷದ ಹೆಣ್ಣುಮಗು ಅನ್ನಪೂರ್ಣಳನ್ನು ಕೊಲೆಗೈದ ತಾಯಿ ಆನೇಕಲ್‍ನ ಆವಡದೇನಹಳ್ಳಿಯ ನಿವೇದಿತಾ ಮತ್ತು ಆಕೆಯ ಪ್ರಿಯಕರ ಸತೀಶ್‍ನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಸೋದರ ಮಾವ ಚಂದ್ರಶೇಖರ್ ನನ್ನು 5 ವರ್ಷಗಳ ಹಿಂದೆ ವಿವಾಹವಾಗಿದ್ದ ನಿವೇದಿತಾಗೆ ಎರಡೂವರೆ ವರ್ಷದ ಅನ್ನಪೂರ್ಣ ಎಂಬ ಮಗಳಿದ್ದು, ಮಗುವಿಗೆ ಅನಾರೋಗ್ಯದಿಂದ ಸ್ಥಳೀಯ ಗಂಗಾ ಆಸ್ಪತ್ರೆಯಲ್ಲಿ ಕಳೆದ ಡಿಸೆಂಬರ್ 23 ರಂದು ಸೇರಿಸಲಾಗಿತ್ತು, ಅಂದು ರಾತ್ರಿ ತಾಯಿ ನಿವೇದಿತ ಮಗಳನ್ನು ನೋಡಿಕೊಂಡು ಆಸ್ಪತ್ರೆಯಲ್ಲಿ ಇದ್ದಳು. ಮರುದಿನ ಆಸ್ಪತ್ರೆಯಿಂದ ಕರೆ ಮಾಡಿ ನಿಮ್ಮ ಹೆಂಡತಿ ಮತ್ತು ಮಗು ಕಾಣಿಸುತ್ತಿಲ್ಲ ಎಂದು, ಆಸ್ಪತ್ರೆಯವರು ಚಂದ್ರಶೇಖರ್ ಗೆ ಕರೆ ಮಾಡಿದ್ದರು.

ಆಸ್ಪತ್ರೆಯಲ್ಲಿ ಹುಡುಕಾಟ ನಡೆಸಿ ಸಿಸಿಟಿವಿ ಕ್ಯಾಮಾರ ಪರಿಶೀಲಿಸಿದಾಗ ಆರೋಪಿಯೊಬ್ಬ ನನ್ನ ಹೆಂಡತಿ ಮತ್ತು ಮಗಳನ್ನು ಬೈಕಿನಲ್ಲಿ ಕುಳ್ಳಿರಿಸಿ ಕೊಂಡು ಅಪಹರಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಚಂದ್ರಶೇಖರ್ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕೆಲವೇ ಗಂಟೆಗಳಲ್ಲಿ ಆರೋಪಿ ಸತೀಶ ಹಾಗೂ ನಿವೇದಿತಳನ್ನು ಅತ್ತಿಬೆಲೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಮಗು ಕೊಲೆ ಮಾಡಿರುವುದನ್ನು ಬಾಯ್ದಿಟ್ಟಿದ್ದಾರೆ.

ನಿವೇದಿತ ಆರೋಪಿ ಸತೀಶನ ಅತ್ತೆ ಮಗಳಾಗಿದ್ದು, ಒಂದು ವರ್ಷದಿಂದ ಇಬ್ಬರೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಪತಿಯನ್ನು ಬಿಟ್ಟು ಬೇರೆ ಕಡೆ ಓಡಿ ಹೋಗಿ ಇಬ್ಬರೂ ಸಂಸಾರ ಮಾಡುವ ನಿರ್ಧಾರ ಮಾಡಿ ಮಗುವಿನ ಸಮೇತ ಆಸ್ಪತ್ರೆಯಿಂದ ಹೋಗಿದ್ದು, ನಮ್ಮ ಸಂಸಾರಕ್ಕೆ ಮಗು ಅಡ್ಡವಾಗಬಹುದು ಎಂದು ತಿಳಿದು, ಅತ್ತಿಬೆಲೆಯ ಎಜಿ ಬಡಾವಣೆಯಲ್ಲಿ ಮಗುವನ್ನು ತನ್ನದೇ ವೇಲ್ ನಿಂದ ಕುತ್ತಿಗೆ ಬಿಗಿದು ಉಸಿರು ಗಟ್ಟಿಸಿ ಸಾಯಿಸಿ ಗಿಡಗಳ ಪೊದೆಯಲ್ಲಿ ಹಾಕಿರುವುದಾಗಿ ಹೇಳಿಕೆ ನೀಡಿದ್ದಾರೆ. ಆರೋಪಿಗಳಿಬ್ಬರೂ ತೋರಿಸಿದ ಮಗು ಅನ್ನಪೂರ್ಣಳ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

Murder investigation ಅಕ್ರಮ ಸಂಬಂಧ ಸಿಸಿಟಿವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ