ಕೋಲಾರ ಜಿಲ್ಲೆಯ ಸಮಗ್ರ ಚಿತ್ರಣ

Kannada News

15-04-2017 906

ಕೋಲಾರ ಜಿಲ್ಲೆ : ತನ್ನೊಡಲ ಬಗೆಸಿಕೊಂಡು  ಇಡೀ ಜಗತ್ತಿಗೆ ಬಂಗಾರ ಕೊಟ್ಟ ಸ್ವರ್ಣಭೂಮಿ ಕೋಲಾರ ಇದೀಗ ಅಕ್ಷರಶ: ಬೆಂಗಾಡು. ಭೌಗೋಳಿಕ ವೈವಿದ್ಯತೆಯ ಈ ನೆಲದೊಡಲಲ್ಲಿ ಹಲವು ಗಿರಿ ಶಿಖರಗಳು, ನದಿಗಳು, ಸಾವಿರಾರು ಕೆರೆ-ಕುಂಟೆಗಳು, ಕಟ್ಟೆ ಕಾಲುವೆಗಳು, ನೂರಾರು ಜಾತಿಯ ಮರಗಿಡಗಳಿವೆ .ಆದರೆ ಯಾವುದೇ ಸರ್ವ ಋತು ನದಿಗಳು ಇಲ್ಲ.

ಕೈವಾರದ ಗೌತಮಿ ಗುಡ್ಡದಲ್ಲಿ ಉಗಮಿಸುವ ಪಾಲಾರ್ (ಪಾಲಾಕ್) ಕೋಲಾರದ ದೊಡ್ಡ ನದಿ ಉಗಮ ಸ್ಥಾನದಿಂದ ಬಂಗಾರ ಪೇಟೆ ಮೂಲಕ ಆಂಧ್ರದತ್ತ ಸಾಗುವ ಈ ನದಿ ಜಿಲ್ಲೆಯಲ್ಲಿ 108 ಕಿ. ಮಿ. ಹರಿಯುತ್ತದೆ. ಚನ್ನಕೇಶವ ಬೆಟ್ಟದಲ್ಲಿ ಹುಟ್ಟಿ, ಕೊಲಾರ ಜಿಲ್ಲೆಯಲ್ಲಿ ಸುಮಾರು 55 ಕಿ ಮೀ ಸಾಗಿ ನಂತರ ಚಿಕ್ಕಬಳ್ಳಾಪುರದ ಮೂಲಕ ಆಂಧ್ರ ಪ್ರದೇಶ ಸೇರುವ ಉತ್ತರ ಪಿನಾಕಿನಿ ಮತ್ತೊಂದು ದೊಡ್ಡ ನದಿ. ಆದರೆ ಇವೆರಡು ಹರಿಯುವುದು ಮಳೆಗಾಲದಲ್ಲಿ ಮಾತ್ರ. ಉಳಿದಂತೆ ದಕ್ಷಿಣ ಪಿನಾಕಿನಿ, ಪಾಪಾಗ್ನಿ ನಂಗ್ಲಿ ಹೊಳೆ, ಚಿತ್ರಾವತಿ, ಕುಮದ್ರಾತಿ ಎಂಬ ನದಿಗಳಿದ್ದವು. ಇವುಗಳು ಹೆಸರಿಗಷ್ಟೇ ನದಿಗಳು. ಹಳ್ಳದ ಸ್ವರೂಪದಲ್ಲಿರುವ ಇವುಗಳು ಯಾವಾಗಲೋ ಒಮ್ಮೆ ಜೋರಾಗಿ ಬೀಳುವ ಮಳೆಗೆ ಬರ್ರೆಂದು ಹರಿದು ಮತ್ತೆ ಸದ್ದಿಲ್ಲದೇ  ಸುಮ್ಮನಾಗುತ್ತದೆ. ಪೆನ್ನಾರ್ ಮತ್ತು ಉತ್ತರ ಪಿನಾಕಿನಿ ನದಿಗಳು ಮೈದುಂಬಿ ಹರಿದು ಹಲವು ದಶಕಗಳೇ ಕಳೆದು ಹೋಗಿವೆ. ನದಿಯ ಪಾತ್ರಗಳಲ್ಲಿ ಎಗ್ಗಿಲ್ಲದೆ ನಡೆದ ಮರಳು ಗಣಿಗಾರಿಕೆ ಇಡೀ ಕೋಲಾರಕ್ಕೆ ದೊಡ್ಡ ಶಾಪವಾಗಿ ಅಪ್ಪಳಿಸಿದೆ. ಕೊಲ್ಹಾರಕ್ಕೆ  ಅನತಿ ದೂರದಲ್ಲಿರುವ ರಾಜಧಾನಿ ಬೆಂಗಳೂರನ್ನು ಕಾಂಕ್ರೀಟ್ ಕಾಡಾಗಿ ಪರಿವರ್ತಿಸುವಲ್ಲಿ ಕೋಲಾರದ ಪೆನ್ನಾರ್ ಮತ್ತು ಪಿನಾಕಿನಿ ನದಿಗಳ ಮರಳಿನ ಪಾತ್ರ ಬಹಳ ದೊಡ್ಡದು.

ಉದ್ಯಾನ ನಗರಿ ಬೆಂಗಳೂರು ಕಾಂಕ್ರೀಟ್ ನಗರವಾಗಿ ಪರಿವರ್ತನೆ ಹೊಂದುವ ಸಮಯದಲ್ಲಿ ಕೋಲಾರದ ಜನರಿಗೆ ಭರಪೂರ ಉದ್ಯೋಗ ಇಲ್ಲಿನ ನದಿ, ಹಳ್ಳ, ತೊರೆ, ಕಟ್ಟೆಗಲ್ಲಿನ ಮರಳು ತುಂಬಲು ಬರುವ ಲಾರಿಗಳು. ಮರಳು ತುಂಬುವ ಜನರು ಕೇಳಿದಷ್ಟು ಕೂಲಿ ಕೊಟ್ಟರು, ಜೇಬಿನ ತುಂಬಾ ದುಡ್ಡು ಸೇರುವ ಹೊತ್ತಿನಲ್ಲಿ ತಮ್ಮೊರಿನ ಜೀವಸೆಲೆಯು ಬತ್ತಿಹೋಗುತ್ತಿದೆ ಎಂದು ಈ ಜನರ ಅರಿವಿಗೆ ಬರಲೇ ಇಲ್ಲ.

ಕೆರೆ, ಹಳ್ಳ ತೊರೆ ಕಟ್ಟೀಗಲ್ಲಿನ ಮರಳು ಬರಿದಾಗುತ್ತಿತ್ತು. ಇಡೀ ಪ್ರದೇಶ ಪಾಳು  ಬಿದ್ದ ಗುಂಡಿಗಳಾಗುತ್ತಿದ್ದಂತೆ ಅಕ್ಕ ಪಕ್ಕದಲ್ಲಿನ ತೆಂಗು, ಕಂಗು, ಮಾವು, ಹುಣಸೆ, ಬೇವು ಮೊದಲಾದ ಮರಗಳು ಒಣಗ ತೊಡಗಿದವು. ಮಳೆ ಇಲ್ಲದ ಪರಿಣಾಮ ಇಂತಹ ಸ್ಥಿತಿ ಉಂಟಾಗಿದೆ ಎಂದು ಭಾವಿಸಿದ ಜನ ಮಳೆ ಬರಲಿ ಎಲ್ಲವೂ ಸರಿಯಾಗಲಿವೆ ಎಂದು ತಮ್ಮ ಮರಳು ತುಂಬುವ ಕಾಯಕ ಮುಂದುವರಿಸಿದರು.

ಮತ್ತೊಂದೆಡೆ ಕೋಲಾರದ ಹಸಿರು ಸಂಪತ್ತು ಒಣಗುತ್ತಿದೆ ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆಗಳಿದ ಅರಣ್ಯ ಇಲಾಖೆ ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಯೋಜನೆ ರೂಪಿಸಿತು. ಅವರಿಗೆ ಕಂಡಿದ್ದು ನೀಲಗಿರಿ ಇನ್ನು ಮರಳು ತುಂಬುವ ಕಾಯಕದಲ್ಲಿ ತೊಡಗಿಸಿಕೊಂಡ ಜನ ವರ್ಷ ವಿಡೀ ದುಡಿದು ಮಳೆ ನಂಬಿ ಫಸಲು ತೆಗೆಯುವ ಬದಲಿಗೆ ಒಮ್ಮೆ ನೆಟ್ಟರಾಯಿತು ಐದಾರು ವರ್ಷದಲ್ಲಿ ಆಳೆತ್ತರ ಬೆಳೆದು ಜೇಬು ತುಂಬುವ ನೀಲಗಿರಿ ಉತ್ತಮ ಬೆಳೆಯೆಂದು ಭಾವಿಸಿ ತಮ್ಮ ಹೊಲಗಳಲ್ಲಿ ಮನಸೋ ಇಚ್ಛೆ ನೀಲಗಿರಿ ನೆಟ್ಟರು. ಸಾಲದಕ್ಕೆ ಅರಣ್ಯ ಇಲಾಖೆ ಉಚಿತ ಸಸಿಗಳನ್ನು ವಿತರಿಸಿತು.

ರೈತರ ಹೊಲಗಳಲ್ಲಿ ನೀಲಗಿರಿ ಸೊಂಪಾಗಿ ಬೆಳೆಯುತ್ತಾ ಸಾಗಿದರೆ, ಮರಳಿನ ಬೆಟ್ಟಗಳು ಇಲ್ಲವಾದವು. ಮತ್ತೊಂದೆಡೆ ಕಲ್ಲು ಬಂಡೆಗಳನ್ನು ಸಿಡಿಸುವ ಕಾರ್ಯ ಆರಂಭವೂ ಆಯಿತು. ಕಾಂಕ್ರೀಟ್ ಕಾಡು ಸೃಷ್ಟಿಸಲು ಬೇಕಾದ ಜಲ್ಲಿಗಾಗಿ ಕೋಲಾರ ಸಮೀಪದಲ್ಲಿನ ನರಸಾಪುರದ ದೊಡ್ಡ ದೊಡ್ಡ ಬೆಟ್ಟಗಳು ಕರಗಿ ಹೋದವು. ರಕ್ಕಸ ಗಾತ್ರದ ಬಂಡೆಗಳಿದ್ದ ಬೆಟ್ಟ ಸಣ್ಣ ಸಣ್ಣ ಜೆಲ್ಲಿಯಾಗಿ ಬೆಂಗಳೂರನ್ನು ಸೇರಿದರೆ, ಒಣಗಲಾರಂಭಿಸಿದ ದೊಡ್ಡ ದೊಡ್ಡ ಮರಗಳು ಮತ್ತೆ ಚಿಗುರಲೇ ಇಲ್ಲ.

ಇದಾದ ಪರಿಣಾಮ ಮಳೆ ಮರೀಚಿಕೆ ಆಯಿತು. ಅಂತರ್ಜಲ ಕುಸಿಯಯತೊಡಗಿತು. ಜೀವ ಜಲಕ್ಕಾಗಿ ಹುಡುಕಾಟ ನಡೆಸಿದ ಜನತೆ ಇನ್ನಿಲ್ಲದಂತೆ ಬೋರ್ ವೆಲ್ ಗಳನ್ನೂ ಕೊರೆಸಿದರು. ಮೊದಲಿಗೆ ಇನ್ನೂರು ಮುನ್ನೂರು ಅಡಿಗಳಲ್ಲಿ ಸಮೃದ್ಧ ನೀರು ಚೆಲ್ಲುತ್ತಿದೆ ಬೋರ್ ವೆಲ್ಗಳು ಕ್ರಮೇಣ ಬತ್ತ ತೊಡಗಿದವು. ಜಿಲ್ಲೆಯ ಹಲವಾರು ಕೆರೆಗಳು ನೀರಿಲ್ಲದೆ ಬರಡಾದವು. ನೀರಿಗಾಗಿ ಹುಡುಕಿದವರು ಮತ್ತಷ್ಟು ಆಳಕ್ಕೆ ಬೋರ್ ವೆಲ್ ಕೊರೆದರು. ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಕೆರೆ ಹಾಗು ಅತಿ ಹೆಚ್ಚು ಬೋರ್ವೆಲ್ ಹೊಂದಿರುವ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ಇಲ್ಲಿ ಇದೀಗ ಒಂದು ಸಾವಿರ ಆಳಕ್ಕೆ ಹೋದರು ನೀರು ಸಿಗದ ಪರಿಸ್ಥಿತಿ ಉಂಟಾಗಿದೆ.

ಇನ್ನು ಕೆಲವು ಕಡೆ ನೀರು ಸಿಕ್ಕಿದರು ಅದರಲ್ಲಿ ಆರ್ಸೆನಿಕ್ ಮತ್ತು ಫ್ಲೋರೈಡ್ ಎಂಬ ರಾಸಾಯಿನಿಕ ಇದ್ದು ಇದು ಮನುಷ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ಸರ್ಕಾರ ಕೋಲಾರದಲ್ಲಿ ಹೊಸದಾಗಿ ಯಾವುದೇ ಬೋರ್ವೆಲ್ ಕೊರೆಸದಂತೆ ನಿಷೇದ ಹೇರಿದೆ.

ಅವ್ಯಾಹತವಾಗಿ ನಡೆದ ಮರಳು ಗಣಿಗಾರಿಕೆ ಅಂತರ್ಜಲವನ್ನು ನುಂಗಿ ಹಾಕಿದೆ ಎಂಬ ಸಂಗತಿ ಅರಿವಿಗೆ ಬರುತ್ತಿದಂತೆ ಎಚ್ಚೆತ್ತ ಕೋಲಾರದ ಜನತೆ ಮರಳು ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದಾರೆ. ಆದರೆ ಈಗಾಗಲೇ ಕಾಲ ಮಿಂಚಿ ಹೋಗಿದೆ. ಕಳೆದ ಎರಡು  ದಶಕಗಳ ಹಿಂದೆ ಸುರಿಯುತ್ತಿದ್ದ ಮಳೆ ಮುಗಿಲು ಸೇರಿದ್ದು ಮತ್ತೆ ಧರೆಗಿಳಿದಿಲ್ಲ. ಯುವ ಜನತೆಯಂತೂ ಅಂತಹ ಮಳೆ ನೋಡಿದ್ದನ್ನು ಜ್ಞಾಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಇದೀಗ ಕೋಲಾರ ಕುಡಿಯುವ ನೀರಿಗೂ ಪರಿತಪಿಸುವಂತಹ ಜಿಲ್ಲೆಯಾಗಿ ಪರಿಣಮಿಸಿದೆ. ಇದೀಗ ಜನತೆಯಂತೆ ಎಚ್ಚೆತ್ತಿರುವ ಸರ್ಕಾರ ಕೂಡ ಕೆಲವೊಂದು ಕ್ರಮಗಳ ಬಗ್ಗೆ ಆದೇಶ ಹೊರಡಿಸಿದೆ. ಅಂತರ್ಜಲವನ್ನು ಇನ್ನಿಲ್ಲದಂತೆ ಹೀರುವ ನೀಲಗಿರಿ ಬೆಳೆಯದಂತೆ ನಿಷೇದ ವಿಧಿಸಲಾಗಿದೆ.

ಇಂತಹ ಯಾವುದೇ ಕ್ರಮಗಳಿರಲಿ ಸಧ್ಯ ಕೋಲಾರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ. ಪಾತಾಳ ಸೇರಿರುವ ಅಂತರ್ಜಲ ಮರುಪೂರಣ ಹೇಗೆ, ಭತ್ತಿ ಹೋಗಿರುವ ಕೆರೆ ಕುಂಟೆ ಕಟ್ಟೆ ಕಾಲುವೆ ನದಿಗಳು ಹರಿಯುವುದು ಯಾವಾಗ, ಇದಕ್ಕೆ ಏನು ಮಾಡಬೇಕು ಎಂಬ ಚರ್ಚೆಗಳು ಆರಂಭಗೊಂಡಿವೆ. ಪರಿಸರವಾದಿಗಳು, ಸಾರ್ವಜನಿಕರು, ಜಲ ತಜ್ಞರು ಜಿಲ್ಲೆಯ ಸುಧಾರಣೆಗೆ ಏನು ಮಾಡಬೇಕೆಂದು ಚಿಂತನೆ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಎತ್ತಿನ ಹೊಳೆ ಯೋಜನೆ ಮತ್ತು ಬೆಂಗಳೂರು ನಗರದ ಕೊಳಚೆ ನೀರನ್ನು ಸಂಸ್ಕರಿಸಿ ಅದನ್ನು ಕೋಲಾರದ ಕೆರೆಗಳು ತುಂಬುವಂತೆ ಮಾಡಿ ಅಂತರ್ಜಲ ಮರು ಪೂರಣ ಮಾಡಬಹುದು ಎಂದು ಯೋಚಿಸಿ ಇದಕ್ಕಾಗಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿದೆ.

ಕೋಲಾರದಲ್ಲಿ ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿ ಶೇ. 10ರಷ್ಟು ಮಾತ್ರ ಇಂಗುತ್ತಿದ್ದು ಅಂತರ್ಜಲಕ್ಕೆ ಸೇರ್ಪಡೆಯಾಗುತ್ತಿದೆ. ಕೋಲಾರದಲ್ಲಿ ಮರಳು ಗಣಿಗಾರಿಕೆ ಸ್ಥಗಿತಗೊಳ್ಳುತ್ತಿದ್ದಂತೆ ಶ್ರಮಜೀವಿಗಳಾದ ಇಲ್ಲಿನ ಜನರು ತೋಟಗಾರಿಕೆ ಬೆಳೆಗಳತ್ತ ಗಮನ ಕೇಂದ್ರಿಕರಿಸಿದರು. ಇದರ ಪರಿಣಾಮವಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ಹೂವು, ಹಣ್ಣು ಮತ್ತು ತರಕಾರಿ ಬೆಳೆಯುವ ಪ್ರದೇಶವಾಗಿದೆ ಕೋಲಾರ.

ಕೋಲಾರದ ಭೌಗೋಳಿಕ ಪರಿಸರವೇ  ಅಂತಹದ್ದು. ಇಲ್ಲಿನ ಭೂಮಿ ಅಕ್ಷರಶ: ಚಿನ್ನವೇ ಇಲ್ಲಿ ಏನೇ ಬಿತ್ತಿದರೂ ಚಿನ್ನದ ಬೆಳೆ ಬರುತ್ತದೆ. ಇನ್ನು ಬಂದಂತಹ ಬೆಳೆ ಮಾರಾಟ ಮಾಡಲು ಒಂದು ಕಡೆ ರಾಜಧಾನಿ ಮಹಾನಗರಿ ಬೆಂಗಳೂರು. ಮತ್ತೊಂದು ಕಡೆ ಚನ್ನೈ ಮತ್ತು ಹೈದ್ರಾಬಾದ್ ಕೂಡಾ ಕೆಲವೇ ಗಂಟೆಗಳ ಪ್ರಮಾಣದಲ್ಲಿ ತಲಪಬಹುದು. ಹೀಗಾಗಿ ಇಲ್ಲಿನ ಜನತೆ ಯಾವುದೇ ಬೆಳೆ ಬೆಳೆದರೂ ಸಕಾಲದಲ್ಲಿ ಮಾರುಕಟ್ಟಗೆ ತಲುಪಿಸುವುದರಿಂದ ಉತ್ತಮ ಲಾಭ ಗಳಿಸುತ್ತಿದ್ದಾರೆ. ರೈತರ ಆದಾಯ ಹೆಚ್ಚುತ್ತಿರುವ ಪರಿಣಾಮ ಹೆಚ್ಚೆಚ್ಚು ಬೋರ್‍ವೆಲ್ ಕೊರೆಸಿ ಕೃಷಿಗೆ ಬಳಕೆ ಮಾಡುತ್ತಿರುವುದು, ಅಂತರ್ಜಲ ಬಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು ಬೋರ್‍ವೆಲ್‍ಗಳಿಂದ ಹೊರಬರುತ್ತಿರುವ ನೀರು ಫ್ಲೋರೈಡ್ ಆರ್ಸೆನಿಕ್ ಹೊತ್ತುತರುತ್ತಿದ್ದರೂ ಕೃಷಿಯ ಮೇಲೇನೂ ಪರಿಣಾಮ ಬೀರುತ್ತಿಲ್ಲ. ಹೀಗಾಗಿ ಮಳೆಯ ಮೂಲಕ ಪ್ರತಿವರ್ಷ ಶೇ. 10ರಷ್ಟು ನೀರು ಅಂತರ್ಜಲ ಸೇರಿದರೆ, ಶೇ 500ರಷ್ಟು ನೀರನ್ನು ಬೋರ್‍ವೆಲ್ ಮೂಲಕ ತೆಗೆಯುತ್ತಿದ್ದು, ಪರಿಸ್ಥಿತಿ ಹೀಗೆ ಆದರೆ ಕೋಲಾರ ಮರುಭೂಮಿ ಆಗಲಿದೆ ಎಂದು ಜಲ ತಜ್ಞರು ಎಚ್ಚರಿಸುತ್ತಿದ್ದ್ತಾರೆ.

ಈ ಎಚ್ಚರಿಕೆಯ ಗಂಭೀರತೆಯನ್ನು ಅರಿತಿರುವ ಪ್ರಸಕ್ತ ರಾಜ್ಯ ಸರ್ಕಾರ ಹಲವು ವಿಶೇಷ ಯೋಜನೆ ರೂಪಿಸ ತೊಡಗಿದೆ. ಅದರಲ್ಲೂ ಆರೋಗ್ಯ ಸಚಿವ ರಮೇಶ್ ಕುಮಾರ್ ವಿಶೇಷ ಕಾಳಜಿ ವಹಿಸುತ್ತಿರುವ ಪರಿಣಾಮ ಪರಿಸ್ಥಿತಿ ಸುಧಾರಣೆಯತ್ತ ಅಧಿಕಾರಿಗಳು ಗಮನ ಹರಿಸಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಆರಂಭಿಸಿದ್ದಾರೆ.

ಸದ್ಯ ಕೋಲಾರ ಜಿಲ್ಲೆಯಲ್ಲಿ ಭಾರಿ ಮಳೆ ಬಂದರೂ ನೀರು ಕೆರೆ, ಕುಂಟೆ ತಲುಪದಂತೆ ಒತ್ತುವರಿಯಾಗಿದೆ. ಈ ಒತ್ತುವರಿ ತೆರವಿಗೆ ಜ್ಞಾಡಳಿತ ಕ್ರಮಕೈಗೊಂಡಿದ್ದು ಈ ಬಾರಿ ಉತ್ತಮ ಮಳೆಯಾದರೆ ನೀರು ಸರಾಗವಾಗಿ ಕೆರೆ ಸೇರುವಂತೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಅಂತರ್ಜಲ ಅಭಿವೃದ್ಧಿ ಪಡಿಸುವ ದೃಷ್ಠಿಯಿಂದ ಹಳ್ಳ-ಕೊಳ್ಳ, ಚೆಕ್‍ಡ್ಯಾಮ್ ನಿರ್ಮಾಣ ಮಾಡಲಾಗುತ್ತಿದೆ.

ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಬೋರ್‍ವೆಲ್‍ಗಳಿಂದ ಯಾವ ಪ್ರಮಾಣದಲ್ಲಿ ನೀರು ಬಳಸಬೇಕು, ಇದರಲ್ಲಿ ಕುಡಿಯುವ ಉದ್ದೇಶಕ್ಕೆ ಎಷ್ಟು ಮೀಸಲಿಡಬೇಕು ಹಾಗೂ ಉಳಿಯುವ ನೀರನ್ನು ಅಂತರ್ಜಲ ಮರುಪೂರಣಕ್ಕೆ ಹೇಗೆ ಬಳಸಬೇಕು ಎಂಬ ಅರಿವು ಮೂಡಿಸುತ್ತಿದ್ದಾರೆ. ಅಂತರ್ಜಲ ಮರುಪೂರಣದಿಂದಾಗಿ ತಮ್ಮ ಬೊರ್‍ವೆಲ್‍ಗಳಲ್ಲೂ ನೀರಿನ ಪ್ರಮಾಣ ಹೆಚ್ಚಲಿದೆ ಎಂದು ಬೋರ್‍ವೆಲ್‍ಗಳ ಪಕ್ಕದಲ್ಲೇ ವ್ಯರ್ಥ ನೀರು ಮತ್ತೆ ಭೂಮಿ ಸೇರುವಂತಹ ವ್ಯವಸ್ಥೆ ರೂಪಿಸುತ್ತಿದ್ದಾರೆ.

ಇವೆಲ್ಲಾ ಕಾಲದಿಂದ ಕಾಲಕ್ಕೆ ಅನುಷ್ಟಾನಗೊಳ್ಳಲೇ ಬೇಕಾಗಿರುವ ಯೋಜನೆಗಳು ಎತ್ತಿನಹೊಳೆ ಯೋಜನೆ ಅನುಷ್ಟಾನಗೊಂಡರೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಬಗೆ ಹರಿಯಬಹುದು ಎಂಬ ವಿಶ್ವಾಸವಿದೆ. ಇದೂ ಸಾಧ್ಯವಾಗದೇ ಹೋದರೆ ಆಲಮಟ್ಟಿಯಿಂದ ಕೃಷ್ಣಾ ನದಿ ನೀರು ಪೂರೈಸಬೇಕೆಂಬ ಕೂಗು ಕೇಳಿದೆ. ಸದ್ಯ ಆಲಮಟ್ಟಿ ಜಲಾಶಯದಿಂದ ತೆಲಗು-ಗಂಗಾ ಯೋಜನೆಯಡಿ ಚನ್ನೈಗೆ ನೀರು ಪೂರೈಸಲಾಗುತ್ತಿದೆ. ಅದೇ ರೀತಿ ಕೋಲಾರಕ್ಕೂ ಯಾಕೆ ರೂಪಿಸಬಾರದೆಂಬ ಪ್ರಶ್ನೆ ಎತ್ತಲಾಗುತ್ತಿದೆ.

ಇಂತಹ ಪ್ರಶ್ನೆಗಳೂ ಸಹಜವೇ ಇದಕ್ಕೆ ಉತ್ತರವೂ ಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಇದೇ ಕೋಲಾರ ಜಿಲ್ಲೆಯಲ್ಲಿಯೇ ಕುಡಿಯುವ ನೀರಿಗೂ ತತ್ವಾರ. ಬೋರ್‍ವೆಲ್‍ಗಳಿಂದ ಬರುತ್ತಿರುವ ನೀರು ಫ್ಲೋರೈಡ್ ಮತ್ತು ಆರ್ಸೆನಿಕ್‍ನಂತಹ ವಿಷಕಾರಕ ರಾಸಾಯನಿಕವನ್ನೂ ಹೊತ್ತು ತರುತ್ತಿವೆ. ಹೀಗಾಗಿ ಈ ನೀರನ್ನು ಶುದ್ಧೀಕರಿಸಿ ಕುಡಿಯಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ.

 

ಇಂತಹ ಅನಿವಾರ್ಯತೆಯನ್ನು ಮನಗಂಡಿರುವ ರಾಜ್ಯಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳ ಮೂಲಕ ಕೋಲಾರ ಹಾಗು ಇತರೆ ಪ್ರಮುಖ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೆ ಈ ಘಟಕಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೂಕ್ತ ನಿರ್ವಹಣೆಯಿಲ್ಲದೆ ಕೆಟ್ಟು ನಿಂತಿದೆ. ಶುದ್ದ ನೀರು ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಯ ಕಾಮಗಾರಿ ಟೆಂಡರ್ ಪಡೆದ ಸಂಸ್ಥೆ ಕಳಪೆ ಸಾಮಾಗ್ರಿ ಆಳವಡಿಸಿದ್ದಲ್ಲದೆ  ಅಸಮರ್ಪಕ ನಿರ್ವಹಣೆ ಮಾಡಿದ ಪರಿಣಾಮ ಕೆಟ್ಟು ಹೋಗುವಂತಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನತೆ ಪರ್ಯಾಯ ಮಾರ್ಗವಿಲ್ಲದೆ ಆರ್ಸೆನಿಕ್ ಯುಕ್ತ ನೀರು ಕುಡಿಯುವ ಪರಿಸ್ಥಿತಿ ಉಂಟಾಗಿದೆ. ಕೆಟ್ಟು ನಿಂತಿರುವ ಘಟಕಗಳಲ್ಲಿ ಕಳಪೆ ಯಂತ್ರೋಪಕರಣ ಅಳವಡಿಸಿರುವ ಪರಿಣಾಮ ಅವುಗಳ ದುರಸ್ಥಿ ಸಾಧ್ಯವಿಲ್ಲದೆ ಎಲ್ಲವನ್ನು ಮತ್ತೆ ಹೊಸದಾಗಿ ಅಳವಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಎಚ್ಚೆತ್ತಿರುವ ಸರ್ಕಾರ ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶಿಸಿದೆ.

ಇದು ಗ್ರಾಮೀಣ ಪ್ರದೇಶದ ಕತೆಯಾದರೆ, 30 ಚದರ ಕಿಮೀ ವಿಸ್ತೀರ್ಣ ಹೊಂದಿದ್ದು 35 ವಾರ್ಡ್‍ಗಳನ್ನು ಹೊಂದಿರುವ ಕೋಲಾರ ನಗರದ ಸ್ಥಿತಿಯಂತೂ ಮತ್ತಷ್ಟು ದಾರುಣ. ಪ್ರತಿನಿತ್ಯ 70 ಲಕ್ಷ ಲೀಟರ್ ನೀರಿನ ಅಗತ್ಯವಿರುವ ಈ ನಗರಕ್ಕೆ ಕೊಳವೆ ಬಾವಿಗಳ ನೀರಿನ ಪ್ರಮುಖ ಆಶ್ರಯ.

ಕೊಳವೆ ಬಾವಿಗಳ ನೀರು ಶುದ್ದೀಕರಿಸಲು ನಗರ ವ್ಯಾಪ್ತಿಯಲ್ಲಿ ಸದ್ಯ ಶುದ್ಧ ಕುಡಿಯುವ ನೀರಿನ 26 ಘಟಕಗಳಿವೆ. ಇದರಲ್ಲಿ ಯಥಾ ಪ್ರಕಾರ 14 ಘಟಕಗಳು ಕೆಟ್ಟು ನಿಂತಿವೆ ಉಳಿದಿರುವ ಘಟಕಗಳಿಗೆ ಯಾವುದೇ ನೀರಿನ ಮೂಲ ಇಲ್ಲ. ಹೀಗಾಗಿ ಟ್ಯಾಂಕರ್‍ಗಳ ಮೂಲಕ ಘಟಕಗಳಿಗೆ ನೀರು ಭರ್ತಿ ಮಾಡಲಾಗುತ್ತಿದೆ. ಗಂಟೆಗೆ 1 ಸಾವಿರ ಲೀಟರ್ ಶುದ್ದೀಕರಿಸುವ ಸಾಮಥ್ರ್ಯ ಹೊಂದಿರುವ ಈ ಘಟಕಗಳ ನಿರ್ವಹಣೆ ನಗರಸಭೆ ನೋಡಿಕೊಳ್ಳುತ್ತಿವೆ. ಆದರೆ ನಗರಸಭೆಯ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟಕಗಳ ಪ್ರಯೋಜನ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಇವುಗಳಿಗೆ ನೀರು ಪೂರೈಸಲು ಹಾಗೂ ಅವುಗಳ ನಿರ್ವಹಣೆಗೆ 4ಕೋಟಿ ರೂಪಾಯಿ ಮೀಸಲಿಟ್ಟಿದ್ದರೂ ಅದರ ಬಳಕೆಯಾಗಿಲ್ಲ. ಇಂತಹ ಅವ್ಯವಸ್ಥೆಯ ಹಿಂದೆ ಮತ್ತೊಂದು ವ್ಯವಸ್ಥಿತ ಕರಾಳ ದಂಧೆಯ ಜಾಲವೂ ಇದೆ. ಈ ಜಾಲಕ್ಕೆ ಚುನಾಯಿತ ಪ್ರತಿನಿಧಿಗಳ ಕೃಪಾರ್ಶಿರ್ವಾದ ಇರುವುದರಿಂದ ಅದರ ಗೋಜಿಗೆ ಯಾರೂ ಹೋಗದಂತಹ ಸ್ಥಿತಿ ಉಂಟಾಗಿದೆ. ಅದೇನೆಂದರೆ ಖಾಸಗಿ ಟ್ಯಾಂಕರ್ ಮಾಫಿಯಾ.

ಸರ್ಕಾರವೇ ಇ-ಟೆಂಡರ್ ಮೂಲಕ ಟ್ಯಾಂಕರ್ ನೀರು ಪೂರೈಕೆಗೆ ಅವಕಾಶ ನೀಡಿದೆ ಆದರೆ ಗುತ್ತಿಗೆ ಪಡೆದ ಟ್ಯಾಂಕರ್‍ಗಳು ಕೆಲವು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಪೂರೈಸಿದರೆ ಉಳಿದ ಟ್ಯಾಂಕರ್‍ಗಳು ಎಲ್ಲಿವೆ ಎಂಬ ಮಾಹಿತಿ ಇರುವುದಿಲ್ಲ. ಆದರೆ ದಾಖಲೆಗಳಲ್ಲಿ ಮಾತ್ರ ಕೆಟ್ಟು ನಿಂತಿರುವ ಘಟಕಗಳಷ್ಟೇ ಅಲ್ಲ ಹಲವು ಬಡಾವಣೆಗಳಿಗೂ ನೀರು ಭರ್ತಿ ಮಾಡಿರುವ ವಿವರ ನಮೂದಾಗಿದ್ದು, ಅಧಿಕಾರಿಗಳ ಸೀಲು ಮತ್ತು ಸಹಿ ಇರುತ್ತದೆ.

ಮತ್ತೊಂದೆಡೆ ಖಾಸಗಿ ಟ್ಯಾಂಕರ್‍ಗಳು ಒಂದು ಟ್ಯಾಂಕರ್ ನೀರಿಗೆ 700 ರೂ ನಿಂದ 800 ರೂಪಾಯಿ ಪಡೆದು ಅಗತ್ಯವಿರುವವರಿಗೆ ಪೂರೈಕೆ ಮಾಡುತ್ತಿದ್ದಾರೆ. ನಗರ ಸಭೆಯ ಟ್ಯಾಂಕರ್‍ಗಳೊಂದಿಗೆ ಶಾಮೀಲಾದ ಖಾಸಗಿ ವ್ಯಕ್ತಿಗಳು ನಗರಸಭೆ ಟ್ಯಾಂಕರ್ ರಸ್ತೆಗಿಳಿಯದಂತೆ ಮಾಡಿ ತಾವು ನೀರು ಪೂರೈಕೆ ಮಾಡುವ ಮೂಲಕ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಾಗ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕುವ ಜಿಲ್ಲಾಧಿಕಾರಿಗಳು ಇದಕ್ಕಾಗಿ ಆಪರೇಷನ್ ಟ್ಯಾಂಕರ್ ಕಾರ್ಯಾಚರಣೆ ಆರಂಭಿಸಿದರು. ನಗರಸಭೆ, ಪಾಲಿಕೆ, ಪೊಲೀಸ್ ಮತ್ತು ಬೆಸ್ಕಾಂ ಅಧಿಕಾರಿಗಳ ತಂಡ ರಚಿಸಿ ಟ್ಯಾಂಕರ್ ಮಾಫಿಯಾ ಹತ್ತಿಕ್ಕಲು ಮುಂದಾದರು. ಸ್ವತಃ ಜಿಲ್ಲಾಧಿಕಾರಿಗಳೇ ಆಪರೇಷನ್ ಟ್ಯಾಂಕರ್ ಕಾರ್ಯಾಚರಣೆಗಿಳಿದರು. ಇ-ಟೆಂಡರ್ ಮೂಲಕ ಗುತ್ತಿಗೆ ಪಡೆದ ಟ್ಯಾಂಕರ್‍ಗಳ ಕಾರ್ಯವೈಖರಿ ಮೇಲೆ ತೀವ್ರ ನಿಗಾವಹಿಸಿದರು. ಇನ್ನು ವಾಹನ ವಿಮೆ, ಚಾಲನ ಪರವಾನಗಿ,  ವಾಹನ ಧೃಡೀಕರಣವಿಲ್ಲದ ಟ್ಯಾಂಕರ್‍ಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದರು. ನಗರ ಹೊರವಲಯದ ರೈತರು ನಗರಸಭೆಯ ಟ್ಯಾಂಕರ್‍ಗಳಿಗೆ ನೀರು ಕೊಡದೆ ವಾಣಿಜ್ಯ ಬಳಕೆಯ ಟ್ಯಾಂಕರ್‍ಗಳಿಗೆ ಮಾತ್ರ ನೀರು ಪೂರೈಸುತ್ತಿರುವುದನ್ನು ಕಂಡು ಅಂತಹವರ ವಿರುದ್ಧವೂ ಕ್ರಮ ಜರುಗಿಸಿದರು.

ಇದರಿಂದ ಹೆದರಿದ ರೈತರು ತಮ್ಮ ಪಂಪ್‍ಸೆಟ್‍ಗಳಿಗೆ ಬೀಗ ಹಾಕಿ ನಾಪತ್ತೆಯಾದರೆ, ದಂಡ ವಿಧಿಸುವ ಭಯದಿಂದ ಟ್ಯಾಂಕರ್‍ಗಳು ರಸ್ತೆಗಿಳಿಯಲಿಲ್ಲ. ಇದರ ಪರಿಣಾಮ ಬೇಡಿಕೆಯನ್ನು ಪೂರೈಸಲು ನಗರಸಭೆ ಟ್ಯಾಂಕರ್‍ಗಳು ತತ್ತರಿಸಿ ಹೋದವು. ಪರಿಣಾಮ ಬೆಳಗಿನ ಜಾವ ಖಾಸಗಿ ಟ್ಯಾಂಕರ್‍ಗಳು ಕಾರ್ಯಾಚರಣೆ ಆರಂಭಿಸಿ ಜನರನ್ನು ಮತ್ತಷ್ಟು ಶೋಷಣೆಗೆ ಒಳಪಡಿಸಿದಾಗ ಜಲ್ಲಾಧಿಕಾರಿಗಳು ಅನಿವಾರ್ಯವಾಗಿ ಆಪರೇಷನ್ ಟ್ಯಾಂಕರ್ ಕಾರ್ಯಾಚರಣೆಯ ವ್ಯಾಪ್ತಿ ಬದಲಾಯಿಸಬೇಕಾಯಿತು.

ಹೀಗಾಗಿ ಚಿನ್ನದ ಬೀಡು ಬಂಗಾರ ಬೆಳೆದ ನಾಡು ಎಂಬ ಖ್ಯಾತಿ ಪಡೆದಿರುವ ಕೋಲಾರದ ನೀರಿನ ದಾಹ ತೀರಿಸುವ ಭಗೀರಥನಿಗಾಗಿ ಜನತೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು ಇದಕ್ಕೆ ಯಾವಾಗ ಕಾಲ ಕೂಡಿ ಬರಲಿದೆಯೋ ಕಾದು ನೋಡಬೇಕು.

 

 

 

 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ