'ಸೋತವರು ನನ್ನ ವಿರುದ್ಧ ಆರೋಪ ಮಾಡ್ತಿದ್ದಾರೆ'26-12-2017

ಬೆಂಗಳೂರು: ಮಹದಾಯಿ ಅಥವಾ ಲಿಂಗಾಯಿತ ಪ್ರತ್ಯೇಕ ಧರ್ಮ ವಿವಾದ ಕಾಂಗ್ರೆಸ್ ಪ್ರೇರಿತ ಅಲ್ಲವೇ ಅಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಲಿಂಗಾಯಿತ ಪ್ರತ್ಯೇಕ ಧರ್ಮ ಕೋರಿ ಐದು ಮನವಿಗಳು ಬಂದಿದ್ದು, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಆಯೋಗಕ್ಕೆ ಕಳುಹಿಸಿದ್ದಾರೆ. ಆಯೋಗ ತಜ್ಞರ ಸಮಿತಿ ರಚನೆ ಮಾಡಿದೆ. ಅದರ ಶಿಫಾರಸು ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ತಜ್ಞರು ಕಾಂಗ್ರೆಸ್‍ಗೆ ಸೇರಿದವರು, ಲಿಂಗಾಯಿತ, ವೀರಶೈವ ಬಗ್ಗೆ ಗೊತ್ತಿಲ್ಲ ಎಂಬುದೆಲ್ಲ ಸರಿಯಲ್ಲ. ತಜ್ಞರು ಅನುಭವ  ಉಳ್ಳವರೇ ಆಗಿದ್ದಾರೆ ಎಂದು ಸಮರ್ಥಿಸಿಕೊಂಡರು. ಇನ್ನು ಬಿಜೆಪಿ ಕಚೇರಿ ಬಳಿ ಮಹದಾಯಿ ವಿವಾದ ಬಗೆಹರಿಸಲು ಧರಣಿ ಕುಳಿತವರು ಕಾಂಗ್ರೆಸ್ ನವರು ಎಂಬ ಆರೋಪ ಸರಿಯಲ್ಲ. ಹೋರಾಟಗಾರರಿಗೆ ಪಕ್ಷದ ಲೇಬಲ್ ಅಂಟಿಸಬಾರದು. ಮಹದಾಯಿ ರೈತರು ಹಾಗೂ ಉತ್ತರ ಕರ್ನಾಟಕ ಭಾಗದ ಜನರ ವಿಚಾರ. ಎಲ್ಲ ರಾಜಕೀಯ ಪಕ್ಷಗಳು ರಾಜಕೀಯ ಬಿಟ್ಟು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಹೇಳಿದರು.

ತಮ್ಮ ವಿರುದ್ಧ ಕೇಳಿ ಬಂದಿರುವ ಬಿಡಿಎ ನಿವೇಶನಕ್ಕೆ ಲಾಬಿ ಮಾಡುತ್ತಿರುವ ಆರೋಪದ ಬಗ್ಗೆ ನನಗೇನೂ ಗೊತ್ತಿಲ್ಲ. ನನಗ ಬಿಡಿಎಯಿಂದ ನಿವೇಶನ ಹಂಚಿಕೆಯಾಗಿದೆ ನ್ಯಾಯ ಸಮ್ಮತ ಇದ್ದರೆ ನೋಂದಣಿ ಮಾಡಕೊಡಿ. ಇಲ್ಲವೇ ದೂರು ಕೊಟ್ಟವರಿಗೆ ನನಗಿಂತ ಮೊದಲೇ ಹಂಚಿಕೆಯಾಗಿದ್ದವರಿಗೆ ಮಾಡಿಕೊಡಿ. ನಿಯಮಾನುಸಾರ ನನಗೆ ನಗರದಲ್ಲಿ ನಿವೇಶನ ಇಲ್ಲದ ಕಾರಣ ಬಿಡಿಎಯಿಂದ ಹಂಚಿಕೆಯಾಗಿದೆ. ಹೀಗಾಗಿ, ನಿವೇಶನ ಕೊಡಿ ಅದು ಎಲ್ಲಾದರೂ ಆಗಬಹುದು ಎಂಬುದಷ್ಟೇ ನನ್ನ ಮನವಿ. ಬಿಡಿಎ ವತಿಯಿಂದ ನಿವೇಶನ ಹಂಚಿಕೆ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದ್ದು, ಇದನ್ನೇ ನನ್ನ ವಿರುದ್ಧ ಚುನಾವಣೆಯಲ್ಲಿ ಸೋತವರು ಮುಂದಿಟ್ಟುಕೊಂಡು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

sharan prakash patil medical education ಬಿಡಿಎ ಲೇಬಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ