ಜೀವನದಲ್ಲಿ ಜಿಗುಪ್ಸ: ಯುವಕರಿಬ್ಬರು ಆತ್ಮಹತ್ಯೆ

2 young boys hang suicide in bangalore

26-12-2017

ಬೆಂಗಳೂರು: ಜೀವನದಲ್ಲಿ ಜಿಗುಪ್ಸೆ ಹೊಂದಿದ ಆಟೋ ಚಾಲಕ ಸೇರಿ ಇಬ್ಬರು ಯುವಕರು ನೇಣಿಗೆ ಶರಣಾಗಿರುವ ಧಾರುಣ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕಾಮಾಕ್ಷಿಪಾಳ್ಯದ ಬಿ.ಇ.ಎಂ.ಎಲ್ ಲೇಔಟ್ ಚೇತನ್ (17) ಹಾಗೂ ವೃಷಭಾವತಿ ನಗರದ ರಾಕೇಶ್ ಗೌಡ (22) ಎಂದು ಗುರುತಿಸಲಾಗಿದೆ.

ಅರ್ಧಕ್ಕೆ ಶಾಲೆ ಬಿಟ್ಟು ಆಟೋ ಓಡಿಸುತ್ತಿದ್ದ ಚೇತನ್ ನಿನ್ನೆ ಮಧ್ಯಾಹ್ನ ತಾಯಿ ಮನೆಗೆಲಸಕ್ಕೆ ಹೋಗಿದ್ದಾಗ ಸೀಲಿಂಗ್ ಫ್ಯಾನ್‍ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ ಕೆಲಸ ಮುಗಿಸಿಕೊಂಡು ತಾಯಿ ಮನೆಗೆ ಬಂದು ನೋಡಿದಾಗ ಚೇತನ್ ನೇಣಿಗೆ ಶರಣಾಗಿದ್ದ. ಆತನ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಇನ್ನೊಂದೆಡೆ ಸಿಟಿ ಮಾರುಕಟ್ಟೆಯಲ್ಲಿನ ಕ್ಲಬ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಗೌಡ ಪ್ರತಿದಿನ ಮಧ್ಯಾಹ್ನ 4ಕ್ಕೆ ಕೆಲಸಕ್ಕೆ ಹೋಗಿ ಮಧ್ಯರಾತ್ರಿ 2ಕ್ಕೆ ವಾಪಸ್ ಆಗುತ್ತಿದ್ದ. ಮೊನ್ನೆ ಮಧ್ಯಾಹ್ನ ಕೆಲಸಕ್ಕೆ ಹೋದವನು ನಿನ್ನೆ ಬೆಳಿಗ್ಗೆಯವರೆಗೆ ಮನೆಗೆ ಬಂದಿರಲಿಲ್ಲ. ತಂದೆ-ತಾಯಿ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು.

ತನ್ನ ಬಳಿ ಇದ್ದ ಕೀ ಯಿಂದ ಮನೆ ಬೀಗ ತೆಗೆದುಕೊಂಡು ಒಳಹೋಗಿದ್ದ ರಾಕೇಶ್ ಗೌಡ, ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿಕೊಂಡು ಲುಂಗಿಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾನೆ. ರಾತ್ರಿ ಕೆಲಸ ಮುಗಿಸಿಕೊಂಡು ತಂದೆ-ತಾಯಿ ಬಂದು ಮನೆ ಬಾಗಿಲು ಹಲವು ಬಾರಿ ಬಡಿದರೂ ತೆಗೆಯದಿದ್ದರಿಂದ ಆತಂಕಗೊಂಡು ಬಾಗಿಲು ಮುರಿದು ನೋಡಿದಾಗ ರಾಕೇಶ್ ಗೌಡ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಎರಡೂ ಪ್ರಕರಣಗಳನ್ನು ದಾಖಲಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ