ಎಷ್ಟು ಜನ ಕಟ್ತಾರೆ ಇನ್‌ಕಮ್ ಟ್ಯಾಕ್ಸ್?

How many people paying tax in india..?

26-12-2017

ಭಾರತದ ಬಹುತೇಕ ಜನರಿಗೆ ಇನ್‌ಕಮ್ ಟ್ಯಾಕ್ಸು ಅಂದ್ರೆ ಸಾಕು ಭಾರಿ ಭಯ. ಎಷ್ಟರ ಮಟ್ಟಿಗೆ ಅಂದ್ರೆ, ದೊಡ್ಡ ಸಂಬಳ ತಗೊಂಡು ಟ್ಯಾಕ್ಸ್ ಕಟ್ಟೋರು ಹಾಗಿರಲಿ, ತೆರಿಗೆ ಕಟ್ಟುವಷ್ಟು ಸಂಬಳ ಅಥವ ದುಡಿಮೆನೇ ಇಲ್ಲದೇ ಇರೋರೂ ಕೂಡ, ಟ್ಯಾಕ್ಸು ಅಂದ್ರೆ ಬೆಚ್ಚಿ ಬೀಳ್ತಾರೆ, ನಮಗೆ ಸಂಬಳ ಜಾಸ್ತಿ ಆಗದೇ ಇದ್ರೂ ಪರವಾಗಿಲ್ಲಪ್ಪ, ಟ್ಯಾಕ್ಸ್ ಮಾತ್ರ ಕಟ್ಟೋಹಾಗೆ ಆಗಬಾರದು ಅನ್ನೋ ರೀತಿ ‘ಬುದ್ಧಿವಂತಿಕೆಯ’ ಮಾತಾಡ್ತಿರ್ತಾರೆ. ಸರಿಯಪ್ಪಾ ಹಾಗಿದ್ರೆ 132 ಕೋಟಿ  ಜನರಿಂದ ತುಂಬಿ ತುಳುಕಾಡ್ತಾ ಇರೋ ಭಾರತ ದೇಶದಲ್ಲಿ ಎಷ್ಟು ಕೋಟಿ ಜನ ಇನ್‌ಕಮ್ ಟ್ಯಾಕ್ಸ್ ಕಟ್ತಿರಬಹುದು, ದೇಶದ ಅಭಿವೃದ್ಧಿಗೆ ಎಂಥ ಕಾಣಿಕೆ ನೀಡ್ತಿರಬಹುದು ಅನ್ಸುತ್ತೆ ಅಲ್ಲವೇ? ಆದ್ರೆ, ಆದಾಯ ತೆರಿಗೆ ಇಲಾಖೆಯವರು ಬಿಡುಗಡೆ ಮಾಡಿರೋ ಮಾಹಿತಿ ನೋಡಿದ್ರೆ ಸುಸ್ತಾಗಿಬಿಡ್ತೀರಿ.  2015-16ನೇ ವರ್ಷದಲ್ಲಿ ಇಡೀ ದೇಶದಲ್ಲಿ ಆದಾಯ ತೆರಿಗೆ ತುಂಬಿದವರು, ದೇಶದ ಜನಸಂಖ್ಯೆಯ ಕೇವಲ ಶೇ.1.7ರಷ್ಟು ಜನ. ಅಂದ್ರೆ ಸುಮಾರು 2 ಕೋಟಿ ಜನ ಮಾತ್ರ. ಆದರೆ, ರಿಟರ್ನ್ಸ್ ಫೈಲ್ ಮಾಡಿದೋರು, ಅಂದ್ರೆ, ನಮಗೆ ಇಷ್ಟು ಆದಾಯ ಇದೆ ಅಂತ ತೆರಿಗೆ ಇಲಾಖೆಯವರಿಗೆ ಹೇಳಿದೋರ ಸಂಖ್ಯೆ 4 ಕೋಟಿ 7  ಲಕ್ಷ. 2014-15ರ ವರ್ಷಕ್ಕೆ ಹೋಲಿಸಿಕೊಂಡರೆ, 42 ಲಕ್ಷ ಜನರು ಹೊಸದಾಗಿ ಸೇರ್ಪಡೆ ಆಗಿದ್ದಾರೆ.

ದೇಶದಲ್ಲಿ ಇನ್‌ಕಮ್ ಟ್ಯಾಕ್ಸ್ ಕಟ್ಟುವವರ ಸಂಖ್ಯೆ ತುಂಬಾ ತುಂಬಾ ಕಮ್ಮಿ ಇದೆ ಅನ್ನೋದಂತೂ ಈ ಮಾಹಿತಿಯಿಂದ ಗೊತ್ತಾಗುತ್ತೆ. ಆದರೆ, ನಮ್ಮ ಜನಗಳ ಮದುವೆಗೆ ಹೋದಾಗ ಅಲ್ಲಿನ ಅದ್ದೂರಿತನ, ಹೊಸಮನೆ ಗೃಹ ಪ್ರವೇಶಕ್ಕೆ ಹೋದಾಗ ಅದರ ವೈಭವ, ನಮ್ಮ ಸುತ್ತಲೂ ಇರುವ ಜನರು ಪ್ರದರ್ಶಿಸುವ ಬಂಗಾರದ ಒಡವೆಗಳು, ಅವರ ಹೊಸ ಕಾರುಗಳು, ಅವರು ನಡೆಸುವ ಕಾರುಬಾರುಗಳು ಇವೆಲ್ಲವನ್ನೂ ನೋಡಿದಾಗ, ಇವರಿಗೆ ತೆರಿಗೆ ಕಟ್ಟುವಷ್ಟು ಸಂಬಳವೇ ಇಲ್ಲ, ಇಂಥೋರಲ್ಲೂ ಕೆಲವರು ಬಡತನ ರೇಖೆ ಕೆಳಗಿದ್ದೇವೆ ಎಂದು ಹೇಳಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ, ಹೀಗಿದ್ದರೂ, ಇಷ್ಟೆಲ್ಲ ಐಶಾರಾಮಿತನ ಹೇಗೆ ಬರುತ್ತೆ ಅನ್ನುವುದೇ ಅರ್ಥವಾಗುವುದಿಲ್ಲ.

ಒಟ್ಟಿನಲ್ಲಿ, ಭಾರತದಲ್ಲಿ ಇನ್‌ಕಮ್ ಟ್ಯಾಕ್ಸು ಅನ್ನೋದು, ತಿಂಗಳಿಗೊಮ್ಮೆ ಸಂಬಳ ತೆಗೆದುಕೊಂಡು ಸಿಕ್ಕಿಹಾಕಿಕೊಳ್ಳುವವರಿಗೆ ಮಾತ್ರವೇ ಹೊರತು, ಇತರೆ ಹಲವಾರು ರೀತಿಯಲ್ಲಿ ಲಕ್ಷಗಳು, ಕೋಟಿಗಳನ್ನು ಸಂಪಾದಿಸಿ ಮೆರೆಯುವವರಿಗೆ ಟ್ಯಾಕ್ಸು ಗೀಕ್ಸು ಏನೇನೂ ಇಲ್ಲ ಅನ್ನುವುದೂ ಕೂಡ ಗೊತ್ತಾಗುತ್ತದೆ.  


ಸಂಬಂಧಿತ ಟ್ಯಾಗ್ಗಳು

Income Tax BPL Card ಸಂಬಳ ತೆರಿಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ