‘ಯಾವುದೇ ಕ್ಷಣದಲ್ಲೂ ಮಾತುಕತೆಗೆ ಸಿದ್ಧ’22-12-2017 407

ಬೆಳಗಾವಿ: ಮಹಾದಾಯಿ ಕುರಿತಾದ ಮಾತುಕತೆಗೆ ಗೋವಾ ಮುಖ್ಯಮಂತ್ರಿಯವರಿಂದ ಆಹ್ವಾನ ಬಂದ ಕೂಡಲೇ ಹೋಗಲು ತಯಾರಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮುಖ್ಯಮಂತ್ರಿಯವರು ಮಾತನಾಡಿದರು.

ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಮಾತುಕತೆಗೆ ಸಿದ್ದ ಎಂದು ಹೇಳುತ್ತಿಲ್ಲ, ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆಗೆ ಹಿಂದೆಯೂ ಸಿದ್ಧವಾಗಿದ್ದೆ, ಈಗಲೂ ತಯಾರಿದ್ದೇನೆ ಎಂದರು. ಕುಡಿಯುವ ನೀರಿಗೆ ನಮ್ಮ ಆದ್ಯತೆ. ನ್ಯಾಯವೂ ನಮ್ಮ ಪರವಾಗಿದೆ. ನ್ಯಾಯ ಮಂಡಳಿಯಲ್ಲಿಯೂ ನಮಗೇ ನ್ಯಾಯ ಸಿಗುವ ವಿಶ್ವಾಸ ಇದೆ.

ಸಿದ್ದರಾಮಯ್ಯ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಗೋವಾ ಮುಖ್ಯಮಂತ್ರಿ ಹಗುರವಾಗಿ ಮಾತನಾಡಿದ್ದಾರೆ. ನಾನೂ ಅದೇ ರೀತಿ ಹೇಳಬಹುದು. ಆದರೆ ಹೇಳಲಾರೆ. ನಿಮ್ಮ ಮೇಲೆ ನಂಬಿಕೆ ಇಲ್ಲ ಎಂದು ಗೋವಾದವರಿಗೆ ಹೇಳಬೇಕಾದವರು ನಾವು. ಆದರೆ ಇಲ್ಲಿ ಉಲ್ಟಾ ಆಗಿದೆ ಎಂದರು. ಮಾತುಕತೆಗೆ ಬನ್ನಿ ಎಂದು ಗೋವಾ ಮುಖ್ಯಮಂತ್ರಿಯವರಿಗೆ ಹಲವಾರು ಬಾರಿ ಪತ್ರ ಬರೆದರೂ ಪ್ರತಿಕ್ರಿಯೆ ಬರಲಿಲ್ಲ. ಬದಲಿಗೆ ಅಲ್ಲಿಯ ನೀರಾವರಿ ಸಚಿವರು ಕರ್ನಾಟಕ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಯಡಿಯೂರಪ್ಪ ಅವರು ಒಂದು ತಿಂಗಳಲ್ಲಿ ಮಹಾದಾಯಿ ನೀರು ತರುತ್ತೇನೆ ಎಂದರು. ನೀರು ಬಂದರೆ ಬೇಡ ಎನ್ನುವವರು ಯಾರು? ಒಂದು ವರ್ಷದಿಂದ ಸುಮ್ಮನಿದ್ದವರು ಈಗ ನೀರು ತರಲು ಹೊರಟಿದ್ದಾರೆ. ಬಿಜೆಪಿಯವರು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗೋವಾದ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ನಾವು ಆ ರೀತಿ ಅಲ್ಲ, ಯಾವುದೇ ಕ್ಷಣದಲ್ಲೂ ಮಾತುಕತೆಗೆ ತಯಾರು.

ಶಿಷ್ಟಾಚಾರದ ಪ್ರಕಾರ ಗೋವಾ ಮುಖ್ಯಮಂತ್ರಿಯವರು ನನಗೆ ಪತ್ರ ಬರೆಯಬೇಕಿತ್ತು. ಆದರೆ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಇಷ್ಟಕ್ಕೂ ಮಾತುಕತೆಗೆ ಹೋಗಬೇಕಾದವರು ನಾನು ಅಥವಾ ಜಲ ಸಂಪನ್ಮೂಲ ಸಚಿವರು. ಈಗ ನಾನು ಗೋವಾ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಮಾತುಕತೆಗೆ ತಯಾರಿರುವುದಾಗಿ ಹೇಳುತ್ತೇನೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.ಸಂಬಂಧಿತ ಟ್ಯಾಗ್ಗಳು

siddaramaiah Mahadayai ಶಿಷ್ಟಾಚಾರ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ