ಪಶು ಆಹಾರ ದರ ಕಡಿತಕ್ಕೆ ಆಗ್ರಹ

Demand for price reduce of animals food

22-12-2017

ಬೆಂಗಳೂರು: ರೈತರಿಗೆ ನೆರವು ನೀಡುವ ದೃಷ್ಟಿಯಿಂದ ಪಶು ಆಹಾರದ ಮೇಲಿನ ದರವನ್ನು ಪ್ರತಿ ಟನ್‍ಗೆ ಕನಿಷ್ಟ ಪಕ್ಷ ಎರಡು ಸಾವಿರ ರೂಪಾಯಿಗಳಷ್ಟು ಕಡಿಮೆ ಮಾಡುವಂತೆ ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಈ ಹಿಂದೆ ನಾನು ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಪಶು ಆಹಾರದ ಬೆಲೆ ಕೆಜಿಗೆ ಏಳು ರೂಪಾಯಿಗಳಷ್ಟಿತ್ತು, ಆದರೆ ಈಗ ಕೆಜಿಗೆ ಇಪ್ಪತ್ತೊಂದು ರೂಪಾಯಿಗಳಷ್ಟಾಗಿದೆ ಎಂದರು.

ಪಶು ಆಹಾರದ ದರ ಹೆಚ್ಚಾಗಿರುವುದರಿಂದ ರೈತರಿಗೆ ಸಮಸ್ಯೆ ಎದುರಾಗಿದೆ. ಕೇಳಿದರೆ ಪಶು ಆಹಾರ ಉತ್ಪಾದನಾ ಘಟಕಗಳಿಂದ ಅರವತ್ತೈದು ಕೋಟಿ ರೂಗಷ್ಟು ಲಾಭ ಬಂದಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ ನಾವು ಪಶು ಆಹಾರ ಘಟಕಗಳನ್ನು ಸ್ಥಾಪಿಸಿದ್ದೇ ನೋ ಲಾಸ್,ನೋ ಪ್ರಾಫಿಟ್ ಆಧಾರದ ಮೇಲೆ, ಆದರೆ ಈಗ ಲಾಭವನ್ನು ಗಮನದಲ್ಲಿಟ್ಟುಕೊಂಡು ಪಶು ಆಹಾರದ ದರವನ್ನು ಬೇಕಾಬಿಟ್ಟಿ ಹೆಚ್ಚಳ ಮಾಡಲಾಗಿದೆ ಇದು ಸರಿಯಲ್ಲ ಎಂದರು.

ನಾವಿದ್ದಾಗ ಪಶು ಆಹಾರದ ಬೆಲೆ ಕಡಿಮೆ ಇದ್ದುದರಿಂದ ರೈತರು ಅದನ್ನೇ ಅವಲಂಬಿಸುತ್ತಿದ್ದರು. ಖಾಸಗಿಯವರು ಬಾಗಿಲು ಮುಚ್ಚಿಕೊಂಡು ಹೋಗಿದ್ದರು. ಆದರೆ ಇವರು ಖಾಸಗಿಯವರ ಜೊತೆ ಷಾಮೀಲಾಗಿ ಪಶು ಆಹಾರದ ದರವನ್ನು ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಸರ್ಕಾರಿ ಪಶು ಆಹಾರ ಘಟಕಗಳಲ್ಲಿ ಉತ್ಪಾದನೆಯಾಗುವ ಪಶು ಆಹಾರಕ್ಕಿಂತ ಖಾಸಗಿಯವರು ಪೂರೈಕೆ ಮಾಡುತ್ತಿರುವ ಪಶು ಆಹಾರದ ದರ ಕಡಿಮೆಯಾಗಿದ್ದು, ಇದರ ಪರಿಣಾಮವಾಗಿ ರೈತರು ಹೆಚ್ಚಾಗಿ ಆ ಕಡೆ ವಾಲುವಂತಾಗಿದೆ ಎಂದರು. ಹೀಗೆ ಲಾಭ ಮಾಡಿಕೊಳ್ಳುವ ಬದಲು ಪ್ರತಿ ಟನ್ ಪಶು ಆಹಾರದ ದರವನ್ನು ಎರಡು ಸಾವಿರ ರೂಗಳಷ್ಟು ಕಡಿಮೆ ಮಾಡಬೇಕು, ಆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

H. D. Revanna KMF ಪಶು ಆಹಾರ ಉತ್ಪಾದನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ