'ತಲಕಾವೇರಿ ಉಳಿಸಿ'21-12-2017

ಬೆಂಗಳೂರು: “ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಬೆಟ್ಟಗಳು ಅತಿಕ್ರಮಣವಾಗದಂತೆ, ನಾಶವಾಗದಂತೆ ತಡೆಯಬೇಕು. ಬ್ರಹ್ಮಗಿರಿಯ ಜೀವವೈವಿಧ್ಯ ಉಳಿವಿಗೆ ಅರಣ್ಯ, ಕಂದಾಯ ಇಲಾಖೆ ಜಂಟಿ ಸರ್ವೆಗೆ ತುರ್ತುಕ್ರಮಕ್ಕೆ ಮುಂದಾಗಬೇಕು” ಎಂದು ರಾಜ್ಯದ ಪರಿಸರ ಸಂಘಟನೆಗಳ ಪ್ರಮುಖ ಮುಖಂಡರು ಒತ್ತಾಯಿಸಿದ್ದಾರೆ. 30 ವರ್ಷ ಹಿಂದೆ ಪಶ್ಚಿಮ ಘಟ್ಟ ಉಳಿಸಿ ಎಂದು ಒತ್ತಾಯಿಸಿ ನಡೆಸಿದ್ದ ಪಾದಯಾತ್ರೆ ನೆನಪಿನಲ್ಲಿ ತಲಕಾವೇರಿಯಿಂದ ಭಾಗ ಮಂಡಲದವರೆಗೆ ಇತ್ತೀಚಿಗೆ ಪಾದಯಾತ್ರೆ ಕೈಗೊಳ್ಳಲಾಯಿತು.

ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಕೇಂದ್ರ  ಜೈವಿಕ ಇಂಧ ಕಾರ್ಯಪಡೆ ಅಧ್ಯಕ್ಷ ವೈ.ಬಿ. ರಾಮಕೃಷ್ಣ,  ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಡಾ.ವಾಮನ್ ಆಚಾರ್ಯ, ರಾಜ್ಯ ಔಷಧೀ ಸಸ್ಯ ಪ್ರಾಧಿಕಾರದ ಸದಸ್ಯ ಡಾ.ಕೇಶವ. ಹೆಚ್. ಕೊರ್ಸೆ, ಪರಿಸರ ಬರಹಗಾರ ನಾಗೇಶ ಹೆಗಡೆ, ಕಾವೇರಿ ಸೇನೆಯ ರವಿ ಚೆಂಗಪ್ಪ, ಪರಿಸರ ತಜ್ಞರಾದ ಪ್ರೊ. ಬಿ.ಎಂ ಕುಮಾರಸ್ವಾಮಿ, ಡಾ.ಶಂಕರಶರ್ಮಾ ಸೇರಿದಂತೆ ಕರ್ನಾಟಕ, ಕೇರಳ, ತಮಿಳುನಾಡಿನ ಪರಿಸರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಹಕ್ಕೊತ್ತಾಯ: “ತಲಕಾವೇರಿ ಉಳಿಸಿ” :“ತಲಕಾವೇರಿ- ಭಾಗಮಂಡಲ ವ್ಯಾಪ್ತಿಯ ಶೋಲಾ ಅರಣ್ಯ ಭಾಗದಲ್ಲಿ ಕಳೆದ 15 ವರ್ಷಗಳಲ್ಲಿ ಮಾನವ ಹಸ್ತಕ್ಷೇಪ ಅತಿಯಾಗಿ ಅರಣ್ಯ ನಾಶವಾಗಿದೆ. ಈ ಸೂಕ್ಷ್ಮ ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕು. ಭಾರೀ ಕಟ್ಟಡ ನಿರ್ಮಾಣ ತಡೆಗಟ್ಟಬೇಕು. ಅರಣ್ಯತೇರ ಚಟುವಟಿಕೆಯಿಂದ ನದೀಮೂಲವೇ ಬತ್ತಿ ಹೋಗುವ ಅಪಾಯವಿದೆ. ಹೀಗಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ. ತಲಕಾವೇರಿಯಿಂದ ಮೇಲೆ ಬ್ರಹ್ಮಗಿರಿಯಲ್ಲಿ ಇದ್ದ ಜಲಮೂಲ ಸಪ್ತ ಕುಂಡಗಳಲ್ಲಿ  (ಹೊಂಡ) ನೀರಿಲ್ಲ. ಬೆಟ್ಟದ ಎತ್ತರದ ತಾಣ ಈಗ ಮೋಜಿನ ತಾಣವಾಗಿದೆ. ಯಾವ ಕಾವಲುಗಾರರೂ ಇಲ್ಲಿ ಇಲ್ಲ, ಪಕ್ಕದಲ್ಲಿ ಇರುವ ಹುಲ್ಲುಗಾವಲು, ದೇವಿವನ ಬ್ರಹ್ಮಗಿರಿ ಅಭಯಾರಣ್ಯದ ವ್ಯಾಪ್ತಿಗೆ ಒಳಪಡಿಸಬೇಕು. 

ತಲಕಾವೇರಿ ಸುತ್ತ 60 ಹೊಳೆ ಹಳ್ಳಗಳಿದ್ದು, ಇವುಗಳ ರಕ್ಷಣೆ ಆದರೆ ಮಾತ್ರ ಕಾವೇರಿ ನದಿ ಸಮೃದ್ಧವಾಗಿ ಹರಿಯುತ್ತದೆ. ಜತೆಗೆ ಇಲ್ಲಿನ ದೇವರ ಕಾಡು ರಕ್ಷಣೆ ಆಗಬೇಕು. ಪರಿಗಣಿತ ಅರಣ್ಯ ರಕ್ಷಣೆಯಾಗಬೇಕು, ಇಲ್ಲಿನ ದೇವಸ್ಥಾನಗಳು ಹಾಗೂ ಜನತೆಯ ಸಹಭಾಗಿತ್ವಕ್ಕೆ ಆದ್ಯತೆ ನೀಡಬೇಕು. ಜನಪ್ರತಿನಿಧಿಗಳು ಕಾವೇರಿ ಮೂಲ ಉಳಿಸುವ ಇಚ್ಛಾಶಕ್ತಿ ಪ್ರಕಟಿಸಬೇಕು. ಅರಣ್ಯ ನಾಷ ಮಾಡುವವರ ಮೇಲೆ ಅರಣ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ರಾಜಕೀಯ ಪಕ್ಷಗಳು ಅಡ್ಡಿ ಮಾಡಬಾರದು ಎಂದು ಪರಿಸರ ಹೋರಾಟಗಾರರು ಒತ್ತಾಯಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Talakaveri environmentalist ಬ್ರಹ್ಮಗಿರಿ ಭಾಗಮಂಡಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ