ಸ್ಟ್ರೀಟ್‌ಫುಡ್ ತಿನ್ನೋರಿಗೆ ಗುಡ್‌ನ್ಯೂಸ್…

Good News Street food lovers

21-12-2017

ನಿಮಗೆ ಸ್ಟ್ರೀಟ್ ಫುಡ್ ತುಂಬಾ ಇಷ್ಟಾನಾ? ಹೋಟೆಲ್‌ನಲ್ಲಿ ತಿನ್ನೋದಕ್ಕಿಂತ ಬೀದಿ ಬದಿಯಲ್ಲಿ ನಿಂತು ತಿನ್ನೋ ಪಾನಿ ಪೂರಿ ತುಂಬಾ ರುಚಿ ಅನ್ಸುತ್ತಾ? ಬಿಸಿ ಬಿಸಿ ಬಜ್ಜಿ ಬೋಂಡಾ ಎಣ್ಣೆಯಲ್ಲಿ ಬೇಯುತ್ತಿದ್ದಾಗಲೇ ಬಾಯಲ್ಲಿ ನೀರೂರುತ್ತಾ? ನೇರವಾಗಿ ಬಾಣಲೆಯಿಂದ ನಿಮ್ಮ ಪ್ಲೇಟಿಗೆ ಬೀಳೋ ಜಿಲೇಬಿ ಸಖತ್ ಮಜಾ  ಕೊಡುತ್ತಾ? ಇದೆಲ್ಲಾ ಸತ್ಯ ಆದ್ರೂ, ಬೀದಿಯಲ್ಲಿ ನಿಂತು ತಿನ್ನುತ್ತಿರೋ ಈ ಆಹಾರ ಶುಚಿಯಾಗಿದೆಯೋ ಇಲ್ವೋ? ಆರೋಗ್ಯ ಎಲ್ಲಿ ಹಾಳಾಗುತ್ತೋ ಅನ್ನೋ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ರೆ ಇಲ್ಲಿದೆ ನಿಮಗೊಂದು ಸಿಹಿ ಸುದ್ದಿ… ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆಯವರು ಈ ಸ್ಟ್ರೀಟ್ ಫುಡ್ ವ್ಯವಸ್ಥೆಗೆ ಒಂದು ಚೌಕಟ್ಟು ಕೊಡಲು ಹೊರಟಿದ್ದಾರೆ.

ಹೌದು, ದೇಶಾದ್ಯಂತ ಇರುವ ಸ್ಟ್ರೀಟ್ ಫುಡ್‌ ಮಾರಾಟಗಾರರು, ತಾವು ಸಿದ್ಧಪಡಿಸುವ ಆಹಾರದ ಸುರಕ್ಷತೆ ಮತ್ತು ಸ್ವಚ್ಛತೆ ಸಂಬಂಧ ಇರುವ ಕೆಲವು ಮಾನದಂಡಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದಾದರೆ, ಅಂತಹ ಸ್ಥಳಗಳನ್ನು ‘ಸ್ವಚ್ಛ ಬೀದಿ ಬದಿ ಆಹಾರ ಪ್ರದೇಶ’ ಎಂದು ಹೆಸರಿಸುತ್ತೇವೆ ಎಂದು ಹೇಳಿದ್ದಾರೆ.

ಬೀದಿ ಬದಿ ಆಹಾರ ತಯಾರಿಕೆ ಮಾಡುವಲ್ಲಿ ಶುಚಿತ್ವ, ಆಹಾರ ತಯಾರಕರ ವೈಯಕ್ತಿಕ ಶುಚಿತ್ವ, ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿ, ಕ್ರಿಮಿ ಕೀಟಗಳ ನಿಯಂತ್ರಣ, ಬೆಳಕಿನ ವ್ಯವಸ್ಥೆ ಮತ್ತು ಒಟ್ಟಾರೆ ಸ್ವಚ್ಛತೆಯನ್ನು ಗಮನದಲ್ಲಿರಿಸಿಕೊಂಡು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗುತ್ತಿದೆ ಎಂದು ಆಹಾರ ಸುರಕ್ಷತಾ ಸಂಸ್ಥೆ ಹೇಳಿದೆ. ಇದಲ್ಲದೆ, ಬೀದಿ ಬದಿ ಆಹಾರ ತಯಾರಕರು ಮತ್ತು ಮಾರಾಟಗಾರರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ರೀತಿ ನೀತಿಗಳ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತಿದೆ. ದೆಹಲಿಯ ಸುಮಾರು 20 ಸಾವಿರ ಬೀದಿ ಬದಿ ಆಹಾರ ಮಾರಾಟಗಾರರಿಗೆ ಈಗಾಗಲೇ ತರಬೇತಿ ನೀಡಲಾಗಿದೆ.

ಒಟ್ಟಿನಲ್ಲಿ, ಬಾಯಿ ಚಪಲಕ್ಕೋ, ಹೋಟೆಲಿಗೆ ಹೋಗಿ ತಿನ್ನಲು ಸಮಯದ ಅಭಾವಕ್ಕೋ ಅಥವ ತಡರಾತ್ರಿ ಸಿಗುತ್ತದೆ ಅನ್ನುವ ಕಾರಣಕ್ಕೋ ಬೀದಿ ಬದಿಯಲ್ಲಿ ಆಹಾರ ತಿನ್ನುವುದು ಬಹಳಷ್ಟು ಬಾರಿ ಅನಿವಾರ್ಯವಾಗುತ್ತದೆ. ಹೀಗಿರುವಾಗ, ಈ ಬೀದಿ ಬದಿ ಆಹಾರವೂ ಸ್ವಚ್ಛ ಮತ್ತು ಸುರಕ್ಷಿತ ಆಹಾರವಾಗಿ ಸಿಗುವುದಾದರೆ, ಯಾವುದೇ ಭಯವಿಲ್ಲದೆ ಆಸ್ವಾದಿಸಬಹುದು. ಹೊಟ್ಟೆ ನೋವು, ಭೇದಿ, ಜ್ವರ ಇತ್ಯಾದಿ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳೂ ತುಂಬಾ ಕಡಿಮೆಯಾಗಬಹುದು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ