ಬಿಜೆಪಿ ಹೈಕಮಾಂಡ್ ಗೆ ಆತಂಕ

BJP High Command and karnataka election

21-12-2017 1651

ಬೆಂಗಳೂರು: ನಗರ ಪ್ರದೇಶದಲ್ಲಿ ಪಕ್ಷ ಸಂಘಟನೆ ಸಡಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ತೀವ್ರ ಕಳವಳಕ್ಕೀಡಾಗಿದೆ. ನಗರ ಕೇಂದ್ರಿತ ಪಕ್ಷ ಎಂದು ಗುರುತಿಸಿಕೊಂಡಿದ್ದು, ಅದಕ್ಕೆ ತಕ್ಕಂತೆ ಪಕ್ಷ ಸಂಘಟನೆಯಾಗುತ್ತಿಲ್ಲ. ಈ ಬೆಳವಣಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗಂಭೀರ ಪರಿಣಾಮ ಬೀರಬಹುದು ಎನ್ನುವ ಆತಂಕದಲ್ಲಿದೆ.

ಇದರಿಂದಾಗಿ ಪಕ್ಷಕ್ಕೆ ಆಗುತ್ತಿರುವ ಹಾನಿ ತಪ್ಪಿಸಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ 25 ರಂದು ಪಕ್ಷದ ಪ್ರಮುಖರ ಸಭೆ ನಡೆಸಿ ಸೂಕ್ತ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ನಗರ ಪ್ರದೇಶಗಳ ಮತದಾರರ ವಿಶ್ವಾಸವನ್ನು ಹೆಚ್ಚು ಮಾಡಿಕೊಳ್ಳುವುದು ಹೇಗೆ? ಗ್ರಾಮೀಣ ಪ್ರದೇಶಗಳ ಮತದಾರರ ಮೇಲೆ ಪ್ರಭಾವ ಬೀರುವ ಅಂಶಗಳ ಕುರಿತು ಚರ್ಚೆ ನಡೆಯಲಿದೆ ಎಂದಿವೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಆಪ್ತ ಪಡೆ ಈಗಾಗಲೇ ಕರ್ನಾಟಕದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದು ಜಿಲ್ಲಾವಾರು ಭೇಟಿ ಕಾರ್ಯವನ್ನು ಮುಗಿಸಿದೆ. ಈ ಸಂದರ್ಭದಲ್ಲಿ ನಗರ ಪ್ರದೇಶಗಳ ಮತದಾರರ ಮೇಲೆ ಈ ಹಿಂದೆ ಪಕ್ಷಕ್ಕಿದ್ದ ಹಿಡಿತ ಕಡಿಮೆಯಾಗಿದೆ ಎಂದು ಅದು ದೆಹಲಿಗೆ ಮಾಹಿತಿ ರವಾನಿಸಿದೆ. ಇತ್ತೀಚೆಗೆ ವಿಧಾನಪರಿಷತ್ತಿಗೆ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಿಂದ ನಡೆದ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯನ್ನು ಅದು ಪ್ರಮುಖವಾಗಿ ಎತ್ತಿ ತೋರಿಸಿದೆಯಲ್ಲದೆ ಪ್ರಮುಖವಾಗಿ ಹಳೆ ಮೈಸೂರು ಹಾಗೂ ಮಧ್ಯ ಕರ್ನಾಟಕ ಭಾಗದ ನಗರ ಪ್ರದೇಶಗಳಲ್ಲಿ ಬಿಜೆಪಿ ಮೇಲಿದ್ದ ಆಕರ್ಷಣೆ ಜನರಿಗೆ ಕಡಿಮೆಯಾಗಿದೆ ಎಂದು ವರದಿ ಹೇಳಿರುವುದಾಗಿ ಉನ್ನತ ಮೂಲಗಳು ಹೇಳಿವೆ.

ಇದೇ ರೀತಿ ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಡೆಸುತ್ತಿರುವ ನವ ಕರ್ನಾಟಕ ನಿರ್ಮಾಣ ಯಾತ್ರೆಗೂ ಹೆಚ್ಚು ಜನ ಸೇರುತ್ತಿರುವುದನ್ನೂ ಪಕ್ಷ ಗಂಭೀರವಾಗಿ ಪರಿಗಣಿಸಬೇಕಿದೆ. ಮೊದಲೆಲ್ಲ ನಗರ ಪ್ರದೇಶಗಳ ಮತದಾರರ ಪೈಕಿ ಬಹುತೇಕರು ಬಿಜೆಪಿ ಪರವಾದ ಒಲವು ಹೊಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆ ಒಲವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಅದು ಹೇಳಿದೆ.

ಪರಿಣಾಮವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಏಕಕಾಲಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲ ಪೈಪೋಟಿ ನೀಡಲಿದ್ದು ಈ ಹಿನ್ನೆಲೆಯಲ್ಲಿ ಪಕ್ಷ ತನ್ನ ರಣತಂತ್ರವನ್ನು ಬದಲಿಸುವುದಲ್ಲದೆ ಎದುರಾಳಿಗಳನ್ನು ಕಟ್ಟಿ ಹಾಕುವ ಕುರಿತೂ ಯೋಚಿಸಬೇಕಿದೆ ಎಂದು ಅದು ವಿವರಿಸಿರುವುದಾಗಿ ಮೂಲಗಳು ಹೇಳಿವೆ. ಎದುರಾಳಿಗಳನ್ನು ಕಟ್ಟಿ ಹಾಕುವ ಕುರಿತು ಪಕ್ಷದ ಹೈಕಮಾಂಡ್ ಈಗಾಗಲೇ ಕಾರ್ಯ ತಂತ್ರ ರೂಪಿಸಿದ್ದರೂ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮತದಾರರ ಮೇಲೆ ಕಾಂಗ್ರಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹಿಡಿತ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅದು ವಿವರ ನೀಡಿದೆ.

ಒಂದು ವೇಳೆ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ಪ್ರವೃತ್ತವಾಗದಿದ್ದರೆ ಕರ್ನಾಟಕದಲ್ಲಿ ನಾವು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಬದಲಿಗೆ ಅಧಿಕಾರದಲ್ಲಿ ಪಾಲುದಾರರಾಗುವ ಕನಸು ಕಾಣಬಹುದಷ್ಟೇ ಎಂದು ವರದಿ ವಿವರಿಸಿರುವುದಾಗಿ ಇವೇ ಮೂಲಗಳು ಹೇಳಿವೆ.

ಈ ವರದಿಯ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ನಾಯಕರಿಗೆ ಮಾಹಿತಿ ರವಾನಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಇವೆಲ್ಲ ಅಂಶಗಳ ಕುರಿತು ರಾಜ್ಯ ಬಿಜೆಪಿ ಗಮನ ಹರಿಸಬೇಕು. ನಗರ ಪ್ರದೇಶಗಳ ಮತದಾರರ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳುವುದರ ಜತೆಗೆ ಗ್ರಾಮೀಣ ಪ್ರದೇಶದ ಮತದಾರರನ್ನು ಆಕರ್ಷಿಸುವ ಕೆಲಸ ಮಾಡಬೇಕಿದೆ ಎಂದು ಸೂಚಿಸಿದ್ದಾರೆ. ಪಕ್ಷದ ಹೈಕಮಾಂಡ್ ವತಿಯಿಂದ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಆದರೆ ಅದಕ್ಕೂ ಮುನ್ನ ನೀವು ಮೂಲದಲ್ಲೇ ಜನರ ವಿಶ್ವಾಸ ಹೆಚ್ಚಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಅವರು ರಾಜ್ಯದ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ಡಿಸೆಂಬರ್ 25 ರಂದು ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಸಲು ನಿರ್ಧರಿಸಲಾಗಿದ್ದು ಅಲ್ಲಿ ವಿವರವಾಗಿ ಪಕ್ಷದ ಸಂಘಟನೆ,ಮುಂದಿನ ದಿನಗಳಲ್ಲಿ ಇಡಬೇಕಾದ ಹೆಜ್ಜೆಗಳ ಸ್ವರೂಪದ ಕುರಿತು ಚರ್ಚೆ ನಡೆಯಲಿದೆ.ಸಂಬಂಧಿತ ಟ್ಯಾಗ್ಗಳು

Amit Shah High command ವಿಧಾನಸಭಾ ಕಾರ್ಯತಂತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ