ಕೆಪಿಸಿಸಿ: ಚುನಾವಣಾ ಪ್ರಚಾರಕ್ಕೆ ಚಾಲನೆ

KPCC: Election campaign

21-12-2017 268

ಬೆಂಗಳೂರು: ರಾಜ್ಯದ ನೂರಿಪ್ಪತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಸಿಎಂ ಸಿದ್ಧರಾಮಯ್ಯ ಅವರ ಸಾಧನಾ ಸಂಭ್ರಮ ಯಾತ್ರೆ ನಡೆಯುತ್ತಿರುವ ಬೆನ್ನಲ್ಲೇ ಕಳೆದ ಚುನಾವಣೆಯಲ್ಲಿ ಪಕ್ಷ ಸೋತ ಕ್ಷೇತ್ರಗಳಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೇತೃತ್ವದ ಯಾತ್ರೆ ಇಂದು ವಿದ್ಯುಕ್ತವಾಗಿ ಆರಂಭವಾಗಿದೆ. ಆ ಮೂಲಕ ಕೈ ಪಾಳೆಯ ಮುಂದಿನ ಸಮರಕ್ಕೆ ಸಜ್ಜಾಗತೊಡಗಿದೆ.

ಹಿರಿಯ ನಾಯಕರಾದ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲ ಪ್ರಮುಖರು ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ಹಾಗೂ ಮಾಲೂರು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರೀ ಸಮಾವೇಶದಲ್ಲಿ ಪಾಲ್ಗೊಂಡರು.

ಇಂದು ಶುರುವಾದ ಯಾತ್ರೆಗೆ ದೈವಬಲ ಕೋರಿ ಕೋಲಾರ ಜಿಲ್ಲೆಯ ಕೂಡುಮಲೈ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಂತರ ಮುಳಬಾಗಿಲಿನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕೆಪಿಸಿಸಿ ಧುರೀಣರು ಆನಂತರ ಮುಳಬಾಗಿಲಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು.

ತದನಂತರ ಕೆಜೆಎಫ್‍ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಕೈ ನಾಯಕರು, ರಾಜ್ಯ ಸರ್ಕಾರದ ಸಾಧನೆಯನ್ನು ವಿವರಿಸಿದ್ದಲ್ಲದೆ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಪುನ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಇದೇ ಕಾಲಕ್ಕೆ ಉಭಯ ಕ್ಷೇತ್ರಗಳ ಪ್ರಮುಖ ನಾಯಕರ ಜತೆಗೂ ಚರ್ಚಿಸಿದ ನಾಯಕರು ಒಮ್ಮತದಿಂದ ಮುಂದೆ ಸಾಗುವಂತೆ ಸೂಚನೆ ನೀಡಿದ್ದು ಯಾವ ಕಾರಣಕ್ಕೂ ಭಿನ್ನಾಭಿಪ್ರಾಯ ಭುಗಿಲೇಳದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

ಶುಕ್ರವಾರ ಯಾತ್ರೆ ಮುಂದುವರಿಯಲಿದ್ದು ಮಾಲೂರು ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಿ ಸರ್ಕಾರದ ಸಾಧನೆಯನ್ನು ವಿವರಿಸಲಿದೆಯಲ್ಲದೆ ತದ ನಂತರ ಪಕ್ಷ ಸಂಘಟನೆಗೆ ಅಗತ್ಯವಾದ ಮಾತುಕತೆಯನ್ನು ಸ್ಥಳೀಯ ನಾಯಕರ ಜತೆ ನಡೆಸಲಿದೆ. ಇದಾದ ನಂತರ ಡಿಸೆಂಬರ್ 29 ರಂದು ಶಿಡ್ಲಘಟ್ಟ, ಚಿಂತಾಮಣಿಯಲ್ಲಿ ಕೆಪಿಸಿಸಿ ಯಾತ್ರೆ ಮುಂದುವರಿಯಲಿದ್ದು ಡಿಸೆಂಬರ್ 30 ರಂದು ದೇವನಹಳ್ಳಿ, ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ಹಾಗೂ ಪಕ್ಷ ಸಂಘಟನೆಗೆ ಪೂರಕವಾದ ಮಾತುಕತೆಗಳು ನಡೆಯಲಿವೆ.

ಸಮಾವೇಶದ ಸಂದರ್ಭದಲ್ಲಿ ಆಯಾ ಜಿಲ್ಲೆಯ ಪ್ರಮುಖ ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದ್ದು ಎಲ್ಲ ಕ್ಷೇತ್ರಗಳ ಸಮಾವೇಶದ ಯಶಸ್ಸಿಗೆ ಒಮ್ಮನಸ್ಸಿನಿಂದ ದುಡಿಯುವಂತೆ ಈಗಾಗಲೇ ಸೂಚನೆ ರವಾನೆಯಾಗಿದೆ. ಸಿಎಂ ಸಿದ್ಧರಾಮಯ್ಯ ಅವರು ನವ ಕರ್ನಾಟಕ ನಿರ್ಮಾಣದ ಹೆಸರಿನಲ್ಲಿ ಸಾಧನಾ ಸಂಭ್ರಮ ಯಾತ್ರೆ ಈಗಾಗಲೇ ಆರಂಭಿಸಿದ್ದು ಹಲವು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ ಅವರ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸರ್ಕಾರದ ಸಾಧನೆಯ ಬಗ್ಗೆ ಜನರಿಗೆ ವಿವರಿಸುವುದರ ಜತೆಗೆ,ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ, ಈಡೇರಿಸಿದ ಭರವಸೆಗಳ ವಿವರವನ್ನೂ ಸಿಎಂ ಸಿದ್ಧರಾಮಯ್ಯ ನೀಡುತ್ತಿದ್ದಾರೆ.

ಹಾಗೆಯೇ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಾ, ಅದು ಕೈಗೊಂಡಿರುವ ಕ್ರಮಗಳಿಂದ ಜನಸಾಮಾನ್ಯರ ಬದುಕು ಹೇಗೆ ದುಸ್ತರವಾಗುತ್ತಿದೆ ಎಂಬುದನ್ನು ವಿವರಿಸುತ್ತಾ ಸಿದ್ಧರಾಮಯ್ಯ ಅವರ ಯಾತ್ರೆ ಮುಂದುವರಿದಿದೆ. ಇದೀಗ ಅದೇ ಮಾದರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನಾಯಕತ್ವದ ಯಾತ್ರೆ ಶುರುವಾಗಿದ್ದು ಏಕಕಾಲಕ್ಕೆ ರಾಜ್ಯಾದ್ಯಂತ ಎಲ್ಲೆಡೆ ಕೈ ಪಾಳೆಯದ ಹವಾ ಇರುವಂತೆ ನೋಡಿಕೊಳ್ಳಲು ಅದು ಬಯಸಿರುವುದು ಸ್ಪಷ್ಟವಾಗಿದೆ.ಸಂಬಂಧಿತ ಟ್ಯಾಗ್ಗಳು

G. Parameshwara KPCC ಬಜೆಟ್ ಪ್ರಣಾಳಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ