ಉಗುಳು ರಾಜರೇ…ಎಚ್ಚರಿಕೆ!

Those spitting in public in Indore to be fined, shamed

21-12-2017

ನಿಮಗೆ ಎಲ್ಲೆಂದರಲ್ಲಿ ಕ್ಯಾಕರಿಸಿ ಉಗುಳುವ ಚಟವಿದೆಯೇ ಹಾಗಿದ್ದರೆ ಎಚ್ಚರಿಕೆ, ನಾಳೆ ನಿಮ್ಮ ಹೆಸರು ಪೇಪರ್‌ನಲ್ಲಿ ಬರಬಹುದು ಮತ್ತು ರೇಡಿಯೋದಲ್ಲೂ ಕೂಡ ನಿಮ್ಮನ್ನು ‘ಉಗುಳು ರಾಜ’ನೆಂಬ ಬಿರುದು ಕೊಟ್ಟು ತೆಗಳಬಹುದು. ಇದರ ಜೊತೆಗೆ ನೀವು 500 ರೂಪಾಯಿ ದಂಡವನ್ನೂ ತೆರಬೇಕು. ಗಾಬರಿಯಾಗಬೇಡಿ. ಕಿಚಕ್ ಪಿಚಕ್ ಉಗೆಯಪ್ಪರಿಗೆ ಈ ರೀತಿ ಮಾಡುತ್ತಿರುವುದು ಇಲ್ಲಲ್ಲ, ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಎಂದು ಹೆಸರಾಗಿರುವ ಇಂದೋರ್‌ನಲ್ಲಿ.

2017ರ ಕ್ಲೀನ್ ಸರ್ವೆಯಲ್ಲಿ, ಇಂದೋರ್‌ ನಗರ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ. ಹೀಗಾಗಿ, ನಗರದಲ್ಲಿ ಪಾನ್, ಗುಟ್ಕಾ ಹಾಕಿಕೊಂಡು ಅಗೆದೂ ಅಗೆದೂ ಸಿಕ್ಕ ಸಿಕ್ಕಲ್ಲಿ ಉಗೆಯುತ್ತಾ ಹೋಗುವವರಿಗೆ ಐದುನೂರು ರೂಪಾಯಿ ದಂಡದ ಜೊತೆಗೆ ಅವರ ಹೆಸರನ್ನು ನ್ಯೂಸ್ ಪೇಪರ್‌ನಲ್ಲಿ ಪ್ರಕಟಿಸುವ ಹಾಗೂ ಸ್ಥಳೀಯ ಆಕಾಶವಾಣಿಯಲ್ಲಿ ಹೇಳುವ ಮೂಲಕ ಅವರಿಗೆ ಮುಜುಗರ ಉಂಟುಮಾಡುವುದು ಅಲ್ಲಿನ ನಗರ ಪಾಲಿಕೆ ಉದ್ದೇಶವಂತೆ. ಹೀಗೆ ಮಾಡುವುದರಿಂದ, ಉಗುಳುರಾಜರು ಎಚ್ಚರವಹಿಸುತ್ತಾರೆ ಎಂಬ ನಂಬಿಕೆ ಅಲ್ಲಿನ ಮೇಯರ್ ಮಾಲಿನಿ ಗೌಡ್ ಅವರದ್ದು.

ಈ ಉಗುಳಾಧಿಪತಿಗಳನ್ನು ಹಿಡಿದು ದಂಡ ಹಾಕಲು, ಇಂದೋರ್ ನಗರದ ಟ್ರಾಫಿಕ್ ಸಿಗ್ನಲ್ ಮತ್ತು ರಸ್ತೆ ವಿಭಜಕಗಳ ಬಳಿ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತದಂತೆ. ಆದರೆ, ಈ ಉಗುಳು ಭಟರನ್ನು ಹಿಡಿಯುವ ರಾಜ ಭಟರು, ತಮಗೆ ಉಗುಳು ಸಿಡಿಯದಂತೆ ಕಾಪಾಡಿಕೊಳ್ಳುವುದು ಕಷ್ಟವಾಗಬಹುದು.


ಸಂಬಂಧಿತ ಟ್ಯಾಗ್ಗಳು

spitting Madhya Pradesh ಗುಟ್ಕಾ ಪೇಪರ್‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ