ಒಂದೂವರೆ ಗಂಟೆಯಲ್ಲಿ ಬೆಂಗಳೂರು ಟು ಮೈಸೂರು...?

Bangalore to Mysore in one and half hour ...?

20-12-2017

ಬೆಂಗಳೂರು: ಬೆಂಗಳೂರು-ಮೈಸೂರು ಷಟ್ಪಥ ರಸ್ತೆಯ ನಿರ್ಮಾಣ ಕಾರ್ಯ ಜನವರಿ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಗೆ 4149 ಕೋಟಿ ರೂಗಳನ್ನು ವೆಚ್ಚ ಮಾಡಲಾಗುವುದು ಎಂದ ಅವರು, ಭೂ ಸ್ವಾಧೀನ ಕಾರ್ಯಕ್ಕೆ 3000 ಕೋಟಿ ರೂಗಳು ಸೇರಿದರೆ ಒಟ್ಟಾರೆಯಾಗಿ ಏಳು ಸಾವಿರ ಕೋಟಿ ರೂಗಳಿಗಿಂತ ಹೆಚ್ಚು ಹಣ ಈ ಯೋಜನೆಗೆ ವೆಚ್ಚವಾಗಲಿದೆ ಎಂದು ವಿವರ ನೀಡಿದರು.

ಹೈಬ್ರಿಡ್ ಆನ್ಯೂಯಿಟಿ ಅಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು ಇದಕ್ಕೆ ಕೇಂದ್ರ ಸರ್ಕಾರ ಶೇಕಡಾ 50 ರಷ್ಟು ಹಣವನ್ನು ಒದಗಿಸಲಿದೆ. ಉಳಿದ ಶೇಕಡಾ 50 ರಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗುವುದು ಎಂದರು. ಷಟ್ಪಥ ರಸ್ತೆ ನಿರ್ಮಿಸುವುದು ಮತ್ತು ಎಡ ಮತ್ತು ಬಲಭಾಗಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವುದು ಯೋಜನೆಯಲ್ಲಿ ಒಳಗೊಂಡಿರುತ್ತದೆ, ಸದರಿ ಯೋಜನೆಗೆ ಕೇಂದ್ರ ಸರ್ಕಾರ ಬಹುತೇಕ ಸಮ್ಮತಿ ನೀಡಿದೆ ಎಂದು ತಿಳಿಸಿದರು.  ಯೋಜನೆಯಡಿ ಬೆಂಗಳೂರು-ನಿಡುಘಟ್ಟ ನಡುವೆ 56.2 ಕಿಲೋಮೀಟರ್ ರಸ್ತೆ ನಿರ್ಮಿಸಲು 1980 ಕೋಟಿ ರೂ ಬಳಸಲಾಗುವುದು. ನಿಡುಘಟ್ಟ-ಮೈಸೂರು ನಡುವೆ 64.14 ಕಿಲೋಮೀಟರ್ ರಸ್ತೆ ನಿರ್ಮಿಸಲು 2169 ಕೋಟಿ ರೂ ಬಳಸಲಾಗುವುದು ಎಂದು ಅವರು ಹೇಳಿದರು.

ಎರಡು ಸಾವಿರ ಕೋಟಿ ರೂ ವೆಚ್ಚದೊಳಗಿನ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಬೇಕು. ಆ ಮೊತ್ತವನ್ನು ಮೀರಿದ ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡಬೇಕು, ಇಂತಹ ಒಪ್ಪಿಗೆ ಕೊಡಿಸುವುದಾಗಿ ಮಂಗಳವಾರ ಕೇಂದ್ರ ಭೂಸಾರಿಗೆ ಸಚಿವರನ್ನು ಭೇಟಿ ಮಾಡಿದಾಗ ನನಗೆ ಭರವಸೆ ಸಿಕ್ಕಿದೆ. ಯೋಜನೆಯಡಿ ಬಿಡದಿ,ರಾಮನಗರ,ಚನ್ನಪಟ್ಟಣ,ಮದ್ದೂರು,ಮಂಡ್ಯ,ಶ್ರೀರಂಗಪಟ್ಟಣಗಳ ಬಳಿ ಟೋಲ್‍ಗೇಟ್ ನಿರ್ಮಿಸಲಾಗುವುದು, ಅಲ್ಲಿ ಸಂಚರಿಸುವವರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೋ? ಅಲ್ಲಿಯವರೆಗೆ ಮಾತ್ರ ಟೋಲ್ ಕೊಡಬೇಕು, ಉಳಿದ ಯೋಜನೆಗಳಲ್ಲಿ ಒಟ್ಟಾರೆಯಾಗಿ ಟೋಲ್ ಪಡೆಯಲಾಗುತ್ತದೆ ಎಂದು ಹೇಳಿದರು.

ಸರ್ವೀಸ್ ರಸ್ತೆಗಳನ್ನು ಬಳಸಲು ಹಣ ನೀಡಬೇಕಾಗಿಲ್ಲ ಎಂದ ಅವರು,ಯೋಜನೆಗೆ ಅಗತ್ಯವಾದ ಶೇಕಡಾ 60 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಒಟ್ಟಾರೆ ಯೋಜನೆ ಪೂರ್ಣಗೊಂಡರೆ ಒಂದೂವರೆ ಗಂಟೆಯೊಳಗೆ ಮೈಸೂರು ತಲುಪಲು ಪ್ರಯಾಣಿಕರಿಗೆ ಸಾಧ್ಯವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ಜಂಕ್ಷನ್ ಬಳಿ ಹಲವು ರಸ್ತೆಗಳನ್ನು ಸಂಪರ್ಕಿಸಲು ಸಾಧ್ಯವಾಗುವ ಮೇಲ್ಸೇತುವೆಯನ್ನು 561 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು, ಇದರಿಂದಾಗಿ ಹತ್ತು ಜಂಕ್ಷನ್‍ಗಳ ಸಂಪರ್ಕ ಸಾಧ್ಯವಾಗಲಿದೆ ಎಂದರು. ಇದೇ ರೀತಿ ಧಾರವಾಡದ ಮಾನಸಿಕ ಆರೋಗ್ಯ ಸಂಸ್ಥೆಯ ಬಳಿ 681 ಕೋಟಿ ರೂ ವೆಚ್ಚದಲ್ಲಿ ಒಂಭತ್ತು ಜಂಕ್ಷನ್‍ಗಳ ಸಂಪರ್ಕ ಸಾಧ್ಯವಾಗುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ವಿವರ ನೀಡಿದರು.

ಸದರಿ ಯೋಜನೆಗೆ ವೆಚ್ಚ ಮಾಡುತ್ತಿರುವ ಹಣ ಸ್ವಲ್ಪ ಹೆಚ್ಚಾಯಿತು ಎಂಬ ಮಾತಿರುವುದರಿಂದ ಅದನ್ನು ಕಡಿಮೆ ಮಾಡಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು. ಈ ಮಧ್ಯೆ ಮೈಸೂರು-ಸತ್ಯಮಂಗಲ, ಜೇವರ್ಗಿ-ಚಾಮರಾಜ ನಗರ,ಮೈಸೂರು-ಬನ್ನೂರು ಹೆದ್ದಾರಿಗಳನ್ನು ಪರಸ್ಪರ ಸಂಪರ್ಕ ಮಾಡುವ ವರ್ತುಲ ರಸ್ತೆಯನ್ನು 80 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಶರಾವತಿ ನದಿಗೆ ಅಡ್ಡಲಾಗಿ 600 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಇದರಿಂದಾಗಿ ಸಿಗಂದೂರನ್ನು ಸುಲಭವಾಗಿ ತಲುಪಲು ಸಾಧ್ಯವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು. ಸಾಗರದಿಂದ ಹಾಗೂ ಶಿವಮೊಗ್ಗದಿಂದ ಹೊಳೆಬಾಗಿಲಿನ ತನಕ ಬಸ್ಸಿನಲ್ಲಿ ಪ್ರಯಾಣಿಸಬಹುದು, ಆನಂತರ ನದಿಯಲ್ಲಿ ಲಾಂಚ್ ಮೂಲಕ ಪ್ರಯಾಣಿಸಬೇಕು, ಹೀಗಾಗಿ ಸೇತುವೆ ನಿರ್ಮಿಸಿದರೆ ಸಿಗಂದೂರು ಚೌಡೇಶ್ವರಿ,ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗುವವರಿಗೆ ಅನುಕೂಲವಾಗಲಿದೆ, ಯೋಜನೆಗೆ ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು ಶಿರಾಡಿ ಘಾಟ್ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ನಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 4688 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಇತ್ತು. ಅದೀಗ 13404 ಕಿಲೋಮೀಟರುಗಳಿಗೆ ಮುಟ್ಟಿದಂತಾಗಿದೆ, ಅದೇ ರೀತಿ ನಾವು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಮೂವತ್ತೆರಡು ಸಾವಿರ ಕಿಲೋಮೀಟರುಗಳಷ್ಟು ಜಿಲ್ಲಾ ಮುಖ್ಯ ರಸ್ತೆ,ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ, ಅಭಿವೃದ್ಧಿಪಡಿಸುವ ಕೆಲಸವಾಗಿದೆ ಎಂದು ಅವರು ವಿವರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ