ಬಡ್ತಿ ಮೀಸಲಾತಿ: ‘ರಾಷ್ಟ್ರಪತಿಗಳಿಗೆ ಮನವಿ’

H.Anjaneya

20-12-2017

ಬೆಂಗಳೂರು: ದಲಿತರಿಗೆ ಒಳಮೀಸಲಾತಿ ಒದಗಿಸುವಂತೆ ಶಿಫಾರಸು ಮಾಡಿ ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿದ ವರದಿಯ ಜಾರಿಗೆ ಸಂಬಂಧಿಸಿದಂತೆ ಮೊದಲು ಪಕ್ಷದಲ್ಲಿರುವ ದಲಿತ ನಾಯಕರ ಸಭೆ ನಡೆಸಿ ತದ ನಂತರ ಮುಂದಿನ ಹೆಜ್ಜೆ ಇಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಇಂದಿಲ್ಲಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಕಾರಣಕ್ಕಾಗಿ ಡಿಸೆಂಬರ್ 31 ರಂದು ಕಾಂಗ್ರೆಸ್ ಪಕ್ಷದ ಪ್ರಮುಖ ದಲಿತ ನಾಯಕರ ಸಭೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಅಲ್ಲಿ ಒಮ್ಮತ ಮೂಡಿದ ನಂತರ ಎಲ್ಲ ಪಕ್ಷಗಳ ನಾಯಕರ ಜತೆ ಚರ್ಚಿಸುವುದಾಗಿ ತಿಳಿಸಿದರು.

ಪಕ್ಷದ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ರುದ್ರಪ್ಪ ಲಮಾಣಿ, ಆರ್.ಬಿ.ತಿಮ್ಮಾಪೂರ, ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಪಕ್ಷದಲ್ಲಿರುವ ಉಭಯ ಸಮುದಾಯಗಳ ನಾಯಕರ ಸಭೆ ಮೊದಲು ನಡೆಯಲಿದೆ. ಅಲ್ಲಿ ಒಮ್ಮತ ಮೂಡಿದ ನಂತರ ಎಲ್ಲ ಪಕ್ಷಗಳಲ್ಲಿರುವ ದಲಿತ ನಾಯಕರ ಸಭೆ ನಡೆಸಿ ಆನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು. ಹಲವು ಕಾಲದಿಂದ ದಲಿತರಿಗೆ ಒಳಮೀಸಲಾತಿ ಕಲ್ಪಿಸಿಕೊಡಬೇಕು ಎಂಬ ವಾದ ಕೇಳಿ ಬರುತ್ತಲೇ ಇದೆ, ಪರ-ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕಾಗಿ ಮುಖ್ಯಮಂತ್ರಿಗಳು ಡಿಸೆಂಬರ್ 31 ರಂದು ಕಾಂಗ್ರೆಸ್ ಪಕ್ಷದ ದಲಿತ ನಾಯಕರ ಸಭೆಯನ್ನು ಕರೆದಿದ್ದಾರೆ ಎಂದರು.

ಬಡ್ತಿ ಮೀಸಲಾತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾಡಿರುವ ಕಾಯ್ದೆಯನ್ನು ಅಂಗೀಕರಿಸುವಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೆಹಲಿಗೆ ಹೋಗಿ ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದರು. ಶತಶತಮಾನಗಳಿಂದ ಅವಕಾಶ ವಂಚಿತವಾದ ಸಮುದಾಯಕ್ಕೆ ಬಡ್ತಿ ಮೀಸಲಾತಿಯಂತಹ ಸವಲತ್ತುಗಳನ್ನು ನೀಡುವ ಅಗತ್ಯವನ್ನು ವಿವರಿಸಿ ಕಾಯ್ದೆ ಮಾಡಲಾಗಿದೆ. ರಾಜ್ಯಪಾಲರು ಇದನ್ನು ನೀವೇ ರಾಷ್ಟ್ರಪತಿಗಳಿಗೆ ಕಳಿಸಿ ಎಂದು ಹೇಳಿದ್ದಾರೆ. ಈ ಮಧ್ಯೆ ಜನವರಿ ಹದಿನೈದರ ಒಳಗೆ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸವೋಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಬೇಕಾದ ಅನಿವಾರ್ಯತೆ ಇದೆ, ಹೀಗಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಿ ರಾಜ್ಯ ಜಾರಿಗೆ ತಂದಿರುವ ಕಾಯ್ದೆಯನ್ನು ಅಂಗೀಕರಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಇಂದಿರಾಗಾಂಧಿಯವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ನೂರು ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು. ಮದುವೆಗಾಗಿ ಬಡವರು ಅದ್ದೂರಿ ವೆಚ್ಚ ಮಾಡುವಂತಾಗಬಾರದು. ಆ ಮೂಲಕ ಸಾಲದ ಹೊರೆ ಹೊತ್ತು ತೊಳಲುವಂತಾಗಬಾರದು ಎಂದು ಕಳೆದ ಕೆಲ ವರ್ಷಗಳಿಂದ ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದ್ದು ಪರಿಶಿಷ್ಟ ಜಾತಿಯ ಜೋಡಿಗಳಿಗೆ ಐವತ್ತು ಸಾವಿರ, ಇತರ ಜಾತಿಯ ಜೋಡಿಗಳಿಗೆ ಸ್ವಾವಲಂಬನೆ ಸಾಧಿಸುವ ಸಲುವಾಗಿ ಇಪ್ಪತ್ತೈದು ಸಾವಿರ ರೂಪಾಯಿ ನೀಡಲಾಗುವುದು ಎಂದರು.

ವಿವಾಹಕ್ಕೆ ಅಗತ್ಯವಾದ ಬಟ್ಟೆ,ತಾಳಿಯಿಂದ ಹಿಡಿದು ಊಟದ ವ್ಯವಸ್ಥೆಯ ತನಕ ಎಲ್ಲವನ್ನೂ ಹೊಳಲ್ಕೆರೆಯ ಜನರ ಬೆಂಬಲದೊಂದಿಗೆ ನಡೆಸಲಾಗುವುದು. ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವ ಜೋಡಿಗಳು ಡಿಸೆಂಬರ್ ಹದಿನೈದರೊಳಗೆ ನೋಂದಣಿ ಮಾಡಿಸಬೇಕು. ಒಂದು ವೇಳೆ ನೂರಕ್ಕೂ ಹೆಚ್ಚು ಜೋಡಿಗಳು ವಿವಾಹವಾಗಲು ಮುಂದೆ ಬಂದರೆ ಅದಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದು ಅವರು, ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ