‘ಇವಿಎಂ ಪರಿಶೀಲನೆಗೆ ಅವಕಾಶ ಕಲ್ಪಿಸಿ’20-12-2017 262

ಕಲಬುರ್ಗಿ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಹರಸಾಹಸದಿಂದ ಗೆಲುವು ಸಾಧಿಸಿದೆ ಎಂದು, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅತ್ಯಂತ ಕೀಳು ಮಟ್ಟಕ್ಕಿಳಿದು ಪ್ರಚಾರ ನಡೆಸಿದ್ದರೂ ಹಿಂದಿಗಿಂತ ಕಡಿಮೆ ಸೀಟು ಪಡೆದಿದ್ದಾರೆ, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಕಡಿಮೆ ಏನಲ್ಲ ಎಂದಿದ್ದಾರೆ. ಗುಜರಾತ್ ಚುನಾವಣೆಯ ಪರಿಣಾಮ ಕರ್ನಾಟಕದ ಮೇಲೆ ಬೀರಲು ಸಾಧ್ಯವಿಲ್ಲ, ಕರ್ನಾಟಕದ ಪರಿಸ್ಥಿತಿಯೇ ಬೇರೆ, ಗುಜರಾತ್ ಪರಿಸ್ಥಿತಿಯೇ ಬೇರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಇವಿಎಂ ಮೆಷಿನ್ ಬಗ್ಗೆ ಜನರಲ್ಲಿ ಅಪನಂಬಿಕೆ ಶುರುವಾಗಿದೆ, ಜನರ ಅಪನಂಬಿಕೆ ಹೋಗಲಾಡಿಸಲು ಚುನಾವಣಾ ಆಯೋಗ ಇವಿಎಂ ಪರಿಶೀಲನೆಗೆ ಮುಕ್ತ ಅವಕಾಶ ಕಲ್ಪಿಸಬೇಕು, ಈ ಮೊದಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾತ್ರ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿತ್ತು, ದೇಶದ ಯಾವುದೇ ಪರಿಣಿತ ವ್ಯಕ್ತಿಗೂ ಇವಿಎಂ ಪರಿಶೀಲನೆಗೆ ಅವಕಾಶ ಕಲ್ಪಿಸಿ, ಜನರ ಮನಸ್ಸಿನಲ್ಲಿನ ಅಪನಂಬಿಕೆ ಹೋಗಲಾಡಿಸದ ಹೊರತು ಇವಿಎಂ ಬಳಕೆ ಬೇಡ ಎಂದಿದ್ದಾರೆ.

ಇನ್ನು ಇದೇ ವೇಳೆ, ಕೇಂದ್ರ ಸರ್ಕಾರ ತೊಗರಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ, ಅದರಂತೆ ರಾಜ್ಯ ಸರ್ಕಾರ‌ ಕೂಡ ತೊಗರಿಗೆ ಬೆಂಬಲ ಬೆಲೆ ನೀಡಲಿದೆ ಎಂದು ತಿಳಿಸಿದರು. ಕ್ವಿಂಟಾಲ್ ತೊಗರಿಗೆ 550 ರೂ. ಬೆಂಬಲ ಬೆಲೆ ನೀಡಲಿದ್ದು, 6000 ರೂ ಪ್ರತಿ ಕ್ವಿಂಟಾಲ್ ತೊಗರಿ ಖರೀದಿ ಮಾಡಲು ನಿರ್ಧಾರಿಸಲಾಗಿದೆ ಎಂದರು. ಬೆಂಬಲ ಬೆಲೆ‌ ನೀಡಲು ಸಿಎಂ‌ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ, ಆನ್‌ಲೈನ್ ರೆಜಿಸ್ಟ್ರೇಷನ್ ಮೂಲಕ ತೊಗರಿ ಖರೀದಿ ಮಾಡಲಿದ್ದು, ಅಕ್ರಮ ತಡೆಯಲು ಆಧಾರ್ ಲಿಂಕ್ ಮಾಡಲಾಗುವುದು ಮತ್ತು ರೈತರ ಬ್ಯಾಂಕ್ ಅಕೌಂಟಿಗೆ ನೇರವಾಗಿ ಹಣ ಸಂದಾಯವಾಗುವ ವ್ಯವಸ್ಥೆ ಮಾಡಲಾಗುವುದೆಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ