ಮೋದಿಗೆ ಹಿಂದಿಯಲ್ಲಿ ಟಾಂಗ್ ಕೊಟ್ಟ ಸಿದ್ದು

siddaramaiah speech in koppal sadhana samavesh

19-12-2017

ಬಾಗಲಕೋಟೆ: ಬಾಗಲಕೋಟೆಯ ಜಮಖಂಡಿಯಲ್ಲಿ ಸಾಧನೆ ಸಂಭ್ರಮ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ, 2018 ಚುನಾವಣೆಯಲ್ಲಿಯೂ ಜನ ನಮಗೆ ಬೆಂಬಲ ನೀಡುತ್ತಾರೆ, ಎಲ್ಲ ಕಡೆ ನಮ್ಮ ಸರ್ಕಾರದ ಬಗ್ಗೆ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ, ನಮ್ಮ ಸರ್ಕಾರದ ವಿರುದ್ಧದ ಅಲೆಯಿಲ್ಲ, ನಮ್ಮ ಪರವಾದ ಅಲೆಯಿದೆ, ಇದಕ್ಕೆ ನಂಜನಗೂಡು, ಗುಂಡ್ಲುಪೇಟೆ ಚುನಾವಣೆಯೇ ಸಾಕ್ಷಿ ಎಂದಿದ್ದಾರೆ.

ಸಾಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಂಜನಗೂಡು, ಗುಂಡ್ಲುಪೇಟೆ ಎರಡೂ ಕ್ಷೇತ್ರದ ಜನ ನಾವು ಮಾಡಿದ ಅಭಿವೃದ್ಧಿ ಕಾರ್ಯಕ್ಕೆ ಮತ ಹಾಕಿದರು. ಮಿಷನ್ 150 ಈಗ ಠುಸ್ ಆಗಿದೆ, ಈಗ ಮಿಷನ್ 50ಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ನನ್ನನ್ನು ಅಯೋಗ್ಯ ಮುಖ್ಯಮಂತ್ರಿ ಅಂತ ಯಡಿಯೂರಪ್ಪ ಹೇಳುತ್ತಿದ್ದಾರೆ, ನಾಲಗೆ ಅವರ ಸಂಸ್ಕೃತಿ ತೋರಿಸುತ್ತದೆ, ಮುಖ್ಯಮಂತ್ರಿ ಪದವಿಗಾದ್ರೂ ಬೆಲೆ ಕೊಡುವ ಸೌಜನ್ಯ ಇಲ್ಲ, ನಾನು ಹಳ್ಳಿಯಿಂದ ಬಂದವನು, ನನಗೂ ಕೆಟ್ಟ ಭಾಷೆ ಬರುತ್ತದೆ, ಚೆನ್ನಾಗಿ ಬಯ್ಯೊಕೆ ಬರುತ್ತದೆ ಆದರೆ ನನಗೆ ಸಂಸ್ಕೃತಿ ಇದೆ, ಸಂಸದೀಯ ಭಾಷೆಯಿಂದ ಟೀಕೆ ಮಾಡುತ್ತೇನೆ ಎಂದರು. ಅನಂತಕುಮಾರ್ ಹೆಗಡೆ ಅಂತ ಒಬ್ಬರಿದ್ದಾರೆ, ಅವರನ್ನು ಸಚಿವ ಬೇರೆ ಮಾಡಿದ್ದಾರೆ, ಆ ಮನುಷ್ಯ ರಾಜಕೀಯದಲ್ಲಿ ಇರಲು ನಾಲಾಯಕ್, ಬೆಂಕಿ ಇಟ್ಟು ಗಲಾಟೆ ಮಾಡುವುದು, ಸುಳ್ಳು ಹೇಳುವುದು ಇಷ್ಟೇ ಇವರ ಕೆಲಸ, ಇದರಿಂದ ಬಿಜೆಪಿಯನ್ನು ಬೆಂಕಿ ಪಾರ್ಟಿ ಅಂತ ಕರೀಬಹುದಾ? ಎಂದಿದ್ದಾರೆ ಸಿಎಂ. 

ನಮ್ಮದು ನುಡಿದಂತೆ ನಡೆದ ಸರ್ಕಾರ, ಅವರು ಹೇಳಲಿ ನೋಡೋಣ ಅಚ್ಛೆ ದಿನ ಆಯೇಗಾ? ಎಲ್ಲಿ ಬಂತು ಅಚ್ಛೇ ದಿನ? ಮತ್ತೇನು ಕಿಸಿದಿದ್ದು ನೀವು ಹೇಳಿ, ದಿನಬಳಕೆ ಸಾಮಾಗ್ರಿ ಬೆಲೆ ಗಗನಕ್ಕೆ ಮುಟ್ಟಿದೆ, ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ, ಬಿಜೆಪಿ ಗಿರಾಕಿಗಳು ಪ್ರಧಾನಿ ಮುಂದೆ ಬಾಯಿಬಿಡಲಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ಹರಿಹಾಯ್ದರು.

ಮಾತೆತ್ತಿದರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮೋದಿ ಮಾತಿಗೆ, ಯಾರು 125 ಕೋಟಿ ಜನರನ್ನು ಒಟ್ಟಿಗೆ ತಗೆದುಕೊಂಡು ಹೋಗುತ್ತಾರೋ, ಅಂತಹವರು ಮಾತ್ರ ಸಬ್ ಸಾಥ್  ಸಬ್ ಕಾ ವಿಕಾಸ್ ಎಂದು ಹೇಳಬೇಕು ಎಂದರು. ಸ್ವಿಸ್ ಬ್ಯಾಂಕ್ ಹಣ ತಂದು ಎಲ್ಲರ ಅಕೌಂಟ್ ಗಳಿಗೆ 15 ಲಕ್ಷ ದುಡ್ಡು ಹಾಕ್ತೇನೆ ಎಂದ ಮೋದಿ‌ ಮಾತಿಗೆ ವ್ಯಂಗ್ಯಭರಿತ ಪ್ರಶ್ನೆಮಾಡಿದ ಸಿಎಂ ನರೇಂದ್ರ ಮೋದಿಜಿ ಕಿತನೇ ಜೂಟ್ ಬೋಲ್ತೆಹೋ ಆಪ್ ಎಂದರು.

ಬಂಡವಾಳ ಹೂಡಿಕೆಯಲ್ಲಿ ನಮ್ಮ ಸ್ಥಾನ ನಂಬರ್ ಒನ್, ಗುಜರಾತ್ ನಲ್ಲಿ ನಮ್ಮ ರಾಜ್ಯದ ಅರ್ಧ ಬಂಡವಾಳ ಹೂಡಿಕೆ ಇಲ್ಲ, ನರೇಂದ್ರ ಮೋದಿಯವರ ಸರ್ಕಾರ ಯು ಟರ್ನ್ ಗೌರ್ಮೆಂಟ್ ಎಂದು ಹೇಳಿದರು. ನಿರ್ಮಲ ಭಾರತವನ್ನು ಸ್ವಚ್ಛ ಭಾರತ ಎಂದು ಮಾಡಿದ್ರು, ಬಿಜೆಪಿಯವರದ್ದು ಬಾಯಿ ಬಡಾಯಿ, ಸಾಧನೆ ಶೂನ್ಯ. ನಾವು 165 ಭರವಸೆಯಲ್ಲಿ 155 ಭರವಸೆ ಇಡೇರಿಸಿದ್ದೇವೆ,  ನಾವು ನುಡಿದಂತೆ ನಡೆಸಿದ್ದೇವೆ. ಮತ್ತೊಮ್ಮೆ ನಮಗೆ ಅವಕಾಶ ಕೊಡಿ ಎಂದು ಕೇಳಿಕೊಳ್ಳಲು ಬಂದಿದ್ದೇವೆ ಎಂದರು.

ಅನ್ನ ಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಮನಸ್ವಿನಿ, ಶಾದಿ ಭಾಗ್ಯ, ಮಾತೃಪೂರ್ಣ, ಶೂ ಭಾಗ್ಯ, ಭಾಗ್ಯ ಜ್ಯೋತಿ, ಕೃಷಿ ಹೊಂಡ, ಅನೇಕ ಜನಪರ ಯೋಜನೆಗಳನ್ನ ತಂದಿದ್ದೇವೆ. ರೈತರ, ನೇಕಾರರ ಸಲಮನ್ನಾ ಮಾಡಿ ಅವರನ್ನ ಋಣ ಮುಕ್ತರನ್ನಾಗಿ ಮಾಡಿದ್ದೇವೆ. ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಒಂದು ಸಾವಿರ ರೂಪಾಯಿ ಪರಿಹಾರ ನೀಡಿದ್ದೇವೆ ಎಂದ ಅವರು, ಮಾತಿಗೆ ಮುಂಚೆ ಸೀರೆ ಕೊಟ್ಟಿಲ್ವಾ, ಸೈಕಲ್ ಕೊಟ್ಟಿಲ್ವಾ ಎನ್ನುವ ಬಿ.ಎಸ್.ವೈ ಹರಕಲು ಸೀರೆ, ಮುರಕಲು ಸೈಕಲ್ ಎಂದು ವ್ಯಂಗ್ಯವಾಡಿದರು.

ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು ಇದು ನಮ್ಮ ಘೋಷಣೆ, ದಲಿತರ ಮನೆಗೆ ಹೋಗಿ  ಕೇಸರಿಬಾತ್, ಪೂರಿ ಅಂತ ಹೋಟಲ್ ತಿಂಡಿ ತಂದು ನಾವು ದಲಿತರ ಪರವಾಗಿದ್ದೇವೆ ಎಂದು ಹೇಳ್ತಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ, ರೈತರ ಜಮೀನುಗಳಿಗೆ ಯೋಗ್ಯ ಪರಿಹಾರ ಕೊಟ್ಟು, ಎಲ್ಲ ಕಾರ್ಯಕ್ರಮಗಳನ್ನು ಮುಗಿಸುತ್ತೇವೆ ಎಂದು ಸಿಎಂ ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ