ಶಾಲಾ ಮುಖ್ಯ ಶಿಕ್ಷಕಿ ಮೇಲೆ ಹಲ್ಲೆ

Attack on school principal in bengaluru

19-12-2017

ಬೆಂಗಳೂರು: ರಾಜಾನುಕುಂಟೆಯ ಸಿಂಗನಾಯಕನಹಳ್ಳಿಯಲ್ಲಿ ಹಣಕಾಸಿನ ವಿಚಾರದಲ್ಲಿ ಜಗಳ ತೆಗೆದು ಲೇವಾದೇವಿಗಾರನೊಬ್ಬ ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಮುಖ್ಯ ಶಿಕ್ಷಕಿ ಆಶಾರಾವ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಂಗನಾಯಕನಹಳ್ಳಿಯ ಆರ್ಯನ್ ಸ್ಕೂಲ್ ಮುಖ್ಯ ಶಿಕ್ಷಕಿಯಾಗಿದ್ದ ಆಶಾರಾವ್ ಅವರು, ಲೇವಾದೇವಿಗಾರ ರಾಮಕೃಷ್ಣಪ್ಪ ಎಂಬುವರಿಂದ 70 ಸಾವಿರ ಸಾಲ ಪಡೆದಿದ್ದರು. ಸಾಲ ಮರುಪಾವತಿ ವಿಳಂಬ ಮಾಡಿ ಬಡ್ಡಿಯನ್ನು ನೀಡದಿದ್ದರಿಂದ ಆಕ್ರೋಶಗೊಂಡ ರಾಮಕೃಷ್ಣಪ್ಪ, ನಿನ್ನೆ ಸಂಜೆ ಶಾಲೆಗೆ ನುಗ್ಗಿ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಆಶಾರಾವ್ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದು, ಕುಸಿದು ಬಿದ್ದ ಅವರನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಮಕೃಷ್ಣಪ್ಪ ಹಲ್ಲೆ ನಡೆಸಿರುವುದು ಶಾಲೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ರಾಜಾನುಕುಂಟೆ ಪೊಲೀಸರು ಪರಾರಿಯಾಗಿರುವ ರಾಮಕೃಷ್ಣಪ್ಪನಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ರಾಮಕೃಷ್ಣಪ್ಪ ಅವರ ಪುತ್ರ ಜನಾರ್ಧನ್, ಯಲಹಂಕ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿದ್ದಾನೆ. ರಾಮಕೃಷ್ಣಪ್ಪ ಶಾಸಕ ವಿಶ್ವನಾಥ್ ಅವರ ಬೆಂಬಲಿಗನಾಗಿದ್ದು ಸಿಂಗನಾಯಕನಹಳ್ಳಿ ಸುತ್ತಮುತ್ತ ಪರವಾನಗಿ ಇಲ್ಲದೆ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ