ಮದ್ರಾಸದಲ್ಲಿ ಗಾಯತ್ರಿ ಮಂತ್ರ!

Chacha Nehru Madrasa, Kids Chant Gayatri Mantra And Quran

19-12-2017

ಇದು ಉತ್ತರ ಪ್ರದೇಶದ ಅಲಿಗಢದಲ್ಲಿರುವ ಒಂದು ಮದ್ರಸಾ. ಅಂದರೆ ಮುಸ್ಲಿಮ್ ಮಕ್ಕಳಿಗೆ ಧಾರ್ಮಿಕ ಪಾಠ ಹೇಳಿಕೊಡುವ ಶಾಲೆ. ಆದರೆ, ಇದರ ಹೆಸರು ಚಾಚಾ ನೆಹರು ಮದ್ರಸಾ. ನೀವೇನಾದರೂ ಈ ಮದ್ರಸಾಕ್ಕೆ ಭೇಟಿ ಕೊಟ್ಟರೆ, ನಿಮಗೆ ಆಶ್ಚರ್ಯವಾಗುವುದು ಖಂಡಿತ. ಈ ಮದ್ರಸಾದಲ್ಲಿ ಬೆಳಿಗ್ಗೆಯೇ ಗಾಯತ್ರಿ ಮಂತ್ರ ಕೇಳಿ ಬರುತ್ತದೆ, ನಂತರ ಖುರಾನ್ ಪಠಣ, ಬಳಿಕ ರಾಷ್ಟ್ರಗೀತೆ ಹಾಡಲಾಗುತ್ತದೆ.

ದೇಶದ ಅಲ್ಲಲ್ಲಿ ಧಾರ್ಮಿಕ ಅಸಹಿಷ್ಣುತೆ ಕಂಡುಬರುತ್ತಿರುವ ಈ ಸಮಯದಲ್ಲಿ ಇಂಥ ಒಂದು ಮದ್ರಸಾದಲ್ಲಿ ಮಕ್ಕಳಿಗೆ ಸರ್ವಧರ್ಮ ಸಮಭಾವದ ಪಾಠ ಹೇಳಿಕೊಡಲಾಗುತ್ತಿದೆ. ಇಲ್ಲಿ, ಒಂದೇ  ಸೂರಿನ ಕೆಳಗೆ ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಹಿರಿಮೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುತ್ತಾರೆ.

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಸಲ್ಮಾ ಅನ್ಸಾರಿ ಮುಖ್ಯಸ್ಥರಾಗಿರುವ ಸಂಸ್ಥೆ ಈ ಮದ್ರಸಾವನ್ನು ನಡೆಸುತ್ತಿದೆ. ‘ಮಕ್ಕಳು ದೇಶದ ಭವಿಷ್ಯ, ಕಾಮನ ಬಿಲ್ಲಿನಲ್ಲಿರುವ 7 ಬಣ್ಣಗಳಂತೆ ಎಲ್ಲ ಧರ್ಮಗಳ ಬಗ್ಗೆಯೂ ಅವರು ತಿಳಿದಿರಬೇಕು. ಧರ್ಮ ಅನ್ನುವುದು, ಪ್ರೇಮವನ್ನು ಹಬ್ಬಲು ಬಳಸಿಕೊಳ್ಳಬೇಕಾದಂಥದ್ದು’ ಎನ್ನುವುದು ಸಲ್ಮಾ ಅವರ ಅಭಿಪ್ರಾಯ.

ಪ್ರತಿ ತಿಂಗಳೂ ಈ ಮದ್ರಸಾದಲ್ಲಿ ಹೋಮ ಹವನ ನಡೆಸಲಾಗುತ್ತದೆ. ಗೀತಾ ಪಠಣ, ಹನುಮಾನ್ ಚಾಲೀಸ ಮತ್ತು ಖುರಾನ್ ಪಠಣವೂ ನಡೆಯುತ್ತದೆ. ಈ ಮದ್ರಸಾದಲ್ಲಿ ಒಟ್ಟು ನಾಲ್ಕು ಸಾವಿರ ವಿದ್ಯಾರ್ಥಿಗಳಿದ್ದು ಅವರಲ್ಲಿ 600 ಹಿಂದೂ ಮಕ್ಕಳು, ಕೆಲವು ಕ್ರೈಸ್ತ ಮಕ್ಕಳೂ ಇದ್ದಾರೆ. ಹೀಗಾಗಿ, ಈ ಬಾರಿ ಇಲ್ಲಿ ಕ್ರಿಸ್‌ಮಸ್ ಕೂಡ ಆಚರಿಸಲಾಗುವುದಂತೆ. ಇಲ್ಲಿ ಓದುವ ಮಕ್ಕಳಿಗೆ ಎಲ್ಲ ಧರ್ಮಗಳ ಮೂಲ ತತ್ವದ ಜೊತೆಗೆ ಆಧುನಿಕ ಶಿಕ್ಷಣವೂ ದೊರೆಯುತ್ತಿದೆ. ಅನ್ಯ ಧರ್ಮದ ಬಗ್ಗೆಯೂ ಮಕ್ಕಳು ಸಹನಶೀಲರಾಗಿ ಬೆಳೆಯುವಂತೆ ಮಾಡುವ ಇಂಥ ಮದ್ರಸಾಗಳು, ದೇಶದಲ್ಲಿ ಶಾಂತಿ ಮತ್ತು ಸಹಬಾಳ್ವೆಯ ವಾತಾವರಣ ನಿರ್ಮಿಸಲು ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿವೆ.


ಸಂಬಂಧಿತ ಟ್ಯಾಗ್ಗಳು

Aligarh Madrasa ಹಮೀದ್ ಅನ್ಸಾರಿ ಸಂಸ್ಕೃತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ