ಸೆಲ್ಫಿ ಪ್ರಾಬ್ಲಮ್ ಇದ್ಯಾ? ಚೆಕ್‌ ಮಾಡ್ಕೊಳ್ಳಿ!

Love Clicking Too Many Selfies? Beware..!

18-12-2017

ಓಹ್…ನೀವು ಮನೆಯಲ್ಲಿ, ಆಫೀಸ್‌ನಲ್ಲಿ, ಸಿನೆಮಾ ಹಾಲ್‌ ನಲ್ಲಿ, ಐಸ್ ಕ್ರೀಮ್ ಪಾರ್ಲರ್‌ನಲ್ಲಿ ಅಥವ ಹೊರಗೆ ಎಲ್ಲಾದರೂ ಇರಲಿ, ಸ್ಮಾರ್ಟ್‌ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳೋದು, ಫೇಸ್ ಬುಕ್ ನಲ್ಲಿ ಹಾಕುವುದು, ವಾಟ್ಸ್‌ ಅಪ್ ನಲ್ಲಿ ಸ್ಟೇಟಸ್ ಆಗಿ ಅಪ್‌ಲೋಡ್ ಮಾಡುವುದು ನಿಮಗೆ ತುಂಬಾ ಇಷ್ಟಾನ?  ಹಾಗಿದ್ರೆ, ನೀವು ದಿನಕ್ಕೆ ಎಷ್ಟು ಬಾರಿ ಸೆಲ್ಫಿ ತಗೋತೀರಿ? ಎಷ್ಟು ಬಾರಿ ಸ್ಟೇಟಸ್ ಅಪ್‌ಡೇಟ್ ಮಾಡ್ತೀರಿ? ಹಲವಾರು ಬಾರಿ ಮಾಡ್ತೀವಿ ಅಂದ್ರಾ? ಹಾಗಿದ್ರೆ ಒಂದು ನಿಮಿಷ ಇಲ್ಲಿ ಕೇಳಿ…

ನೀವು, ‘ಸೆಲ್ಫೈಟಿಸ್’ ಅಂದರೆ ಸ್ಮಾರ್ಟ್‌ ಫೋನ್‌ನಲ್ಲಿ ಸೆಲ್ಫಿ ಅಥವ ಸ್ವಂತ ಫೋಟೊ ತೆಗೆದುಕೊಳ್ಳುವ ಮತ್ತು ಅದನ್ನು ಪ್ರದರ್ಶಿಸುವ ಗಿಳ್ಳಿನಿಂದ ಬಳಲುತ್ತಿರಬಹುದು. ಈ  ಸೆಲ್ಫಿ ಗಿಳ್ಳು ಅಥವ ಚಟ, ವೈದ್ಯರ ಚಿಕಿತ್ಸೆ ಅಗತ್ಯವಿರೋ ಒಂದು ಸಮಸ್ಯೆಯಾಗಿ ಬೆಳೆಯುತ್ತಿದೆ ಎಂದು ತಿಳಿದುಬಂದಿದೆ.

ಇಂಗ್ಲೆಂಡ್ ದೇಶದ ನಾಟಿಂಗ್‌ಹ್ಯಾಮ್ ನ ಟ್ರೆಂಟ್ ವಿವಿ ಮತ್ತು ತಮಿಳುನಾಡಿನ ತ್ಯಾಗರಾಜರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ನವರು ಈ ಬಗ್ಗೆ ಅಧ್ಯಯನ ನಡೆಸಿ, ವರದಿ ಪ್ರಕಟಿಸಿದ್ದಾರೆ. ಭಾರತದ ಜನರಲ್ಲಿ ಸೆಲ್ಫಿ ಚಟ ಇರುವುದನ್ನು ಪತ್ತೆ ಹಚ್ಚಿ, ಖಾತ್ರಿ ಪಡಿಸಿರುವ ಸಂಶೋಧಕರು, ಸೆಲ್ಫಿ ಗಿಳ್ಳಿನ ಮಟ್ಟದ ತೀವ್ರತೆ ಗುರುತಿಸಲು, ‘ಸೆಲ್ಫೈಟಿಸ್ ಬಿಹೇವಿಯರ್ ಸ್ಕೇಲ್’ ತಯಾರಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಫೇಸ್ ಬುಕ್ ಬಳಕೆದಾರರಿರುವುದರಿಂದ  ಮತ್ತು ಅಪಾಯಕಾರಿ ಸ್ಥಳಗಳು ಹಾಗೂ ಸನ್ನಿವೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ, ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಭಾರತದಲ್ಲೇ ಅತಿ ಹೆಚ್ಚಿಗೆ ಇರುವುದರಿಂದ ಈ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಈ ವರದಿಯನ್ನು ಮಾನಸಿಕ ಆರೋಗ್ಯ ಮತ್ತು ವ್ಯಸನಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಸೆಲ್ಫಿ ವ್ಯಸನ, ಸೆಲ್ಫಿ ಗಿಳ್ಳು ಅಥವ ಸೆಲ್ಫಿ ಚಟ ಅನ್ನುವುದನ್ನು, ಮೂರು  ಮಟ್ಟಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯದು, ಸಾಮಾನ್ಯ ಮಟ್ಟದ ಸೆಲ್ಫಿ ಚಟ. ಈ ರೀತಿ ಚಟಕ್ಕೆ ಒಳಗಾಗಿರುವವರು ದಿನಕ್ಕೆ ಕನಿಷ್ಟ 3 ಬಾರಿ ತಮ್ಮ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾರೆ, ಆದರೆ ಆ ಫೋಟೊಗಳನ್ನು ಫೇಸ್ ಬುಕ್ ಅಥವ ಇತರೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಿಲ್ಲ, ಸುಮ್ಮನೆ ಇರುತ್ತಾರೆ.

ಎರಡನೆಯದು ‘Acute selfitis’ ಅಥವ ತೀವ್ರ ಥರವಾದ ಸೆಲ್ಫಿ ಚಟ.  ಈ ಮಟ್ಟದ ಸಮಸ್ಯೆ ಅನುಭವಿಸುವವರು, ಪ್ರತಿದಿನ ಕನಿಷ್ಟ ಮೂರು ಬಾರಿ ಸೆಲ್ಫಿ ತೆಗೆದುಕೊಳ್ಳುತ್ತಾರೆ ಮತ್ತು ಪ್ರತಿಬಾರಿಯೂ ಅದನ್ನು ಫೇಸ್ ಬುಕ್ ಇತ್ಯಾದಿಗಳಲ್ಲಿ ಹಾಕುತ್ತಾರೆ. ಮೂರನೆಯದು Chronic selfitis ಅಥವ ಆಳವಾಗಿ ಬೇರೂರಿರುವ ಸೆಲ್ಫಿ ಗಿಳ್ಳು ಅಥವ ಚಟ. ಇದರಿಂದ ಬಳಲುತ್ತಿರುವವರಲ್ಲಿ, ಇಡೀ ದಿನ ಒಂದೇಸಮನೆ ಸೆಲ್ಫಿ ತೆಗೆದುಕೊಳ್ಳುವ ತವಕ, ಬಯಕೆ ಹತ್ತಿಕ್ಕಲಾರದಮಟ್ಟದಲ್ಲಿರುತ್ತದೆ. ಇಂಥ ತೀವ್ರತರವಾದ ಸೆಲ್ಪಿ ಚಟ ಹೊಂದಿರುವವರು, ದಿನಕ್ಕೆ ಕನಿಷ್ಟ 6 ಬಾರಿಯಾದರೂ ಸೆಲ್ಫಿಗಳನ್ನು ತೆಗೆದುಕೊಂಡು, ಫೇಸ್ ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಇತ್ಯಾದಿಗಳಲ್ಲಿ ಒಂದೇ ಸಮನೆ ಆ ಫೋಟೊಗಳನ್ನು ಹಾಕುತ್ತಲೇ ಇರುತ್ತಾರೆ.

ಈ ಸೆಲ್ಫಿ ಚಟ ಏಕೆ? ಅನ್ನುವುದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗುತ್ತದೆ. ಮೊದಲನೆಯದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಾಕುವ ಮೂಲಕ, ಇವರು ಎಲ್ಲರ ಗಮನ ತಮ್ಮ ಕಡೆ ಸೆಳೆಯಲು ಬಯಸುತ್ತಾರೆ. ಎರಡನೆಯದು, ಕಳೆದುಹೋಗಿರುವ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಿಯೂ ಹೀಗೆ ಮಾಡುತ್ತಾರೆ. ತಮ್ಮ ಮೂಡ್ ಅಥವ ಮನಸ್ಥಿತಿ ಬದಲಾಯಿಸಿಕೊಳ್ಳಲು, ತಮ್ಮ ಸುತ್ತಲಿನ ಸಾಮಾಜಿಕ ಗುಂಪಿನೊಂದಿಗೆ ಗುರುತಿಸಿಕೊಳ್ಳಲು ಹಾಗೂ ನಾವೂ ಕೂಡ ಸೋಷಿಯಲಿ ಕಾಂಪೆಟಿಟಿವ್ ಆಗಿದ್ದೇವೆ, ಅಂದರೆ ಸಾಮಾಜಿಕವಾಗಿ ಸ್ಪರ್ಧಾತ್ಮಕವಾಗಿದ್ದೇವೆ, ಎಲ್ಲರೂ ಓಡುತ್ತಿರುವ ದಾರಿಯಲ್ಲೇ ಓಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಸಲುವಾಗಿ ಈ ಸೆಲ್ಫಿಗಳನ್ನು ಹಾಕುತ್ತಾರೆ.

ಸಾಮಾನ್ಯವಾಗಿ ಈ ರೀತಿಯ ಸೆಲ್ಫಿ ಗಿಳ್ಳು ಹೊಂದಿರುವವರು, ಆತ್ಮ ವಿಶ್ವಾಸದ ಕೊರತೆಯಿಂದ ಬಳಲುತ್ತಿರುತ್ತಾರೆ. ಇಂಥವರು, ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ, ತಮ್ಮ ಸುತ್ತಲೂ ಇರುವವರ ಜೊತೆಗೆ ಸರಿಹೊಂದಲು, ನಾವೂ ನಿಮ್ಮಂತೆಯೇ ಚೆನ್ನಾಗಿದ್ದೇವೆ, ನಮ್ಮ ಬದುಕು ತುಂಬಾ ಚೆನ್ನಾಗಿದೆ, ನಾವು ಸಂತೋಷವಾಗಿದ್ದೇವೆ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ಎಂದು ಈ ಅಧ್ಯಯನ ವರದಿ ಹೇಳುತ್ತದೆ. ಯಾವುದೇ ಆದರೂ, ಒಂದು ಮಟ್ಟಕ್ಕೆ ಎಲ್ಲವೂ ಚೆನ್ನಾಗಿರುತ್ತದೆ, ಆದರೆ,‘ಅತಿಯಾದರೆ ಅಮೃತವೂ ವಿಷವಾಗುತ್ತದೆ’ ಅನ್ನುವ ಮಾತು ‘ಸೆಲ್ಫಿ’ ಮತ್ತು ಸಾಮಾಜಿಕ ಜಾಲ ತಾಣಗಳ ವಿಚಾರದಲ್ಲೂ ಅನ್ವಯವಾಗುತ್ತದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ