ಫೋನ್‌ಗಳ ಮೇಲೆ ಕಲ್ಲಿನ ದಾಳಿ…!

Army Smashes Soldiers’ Phones to ‘Enforces’ Discipline

18-12-2017 475

ಶಿಸ್ತು ಮತ್ತು ವೃತ್ತಿಪರತೆ, ಭಾರತೀಯ ಸೇನೆಯ ಹೆಗ್ಗಳಿಕೆ. ಹೀಗಿರುವಾಗ, ಹೊಸದಾಗಿ ಸೇನೆಗೆ ಸೇರಿದವರು ಅಶಿಸ್ತು ತೋರಿಸಿದರೆ ಹೇಗೆ ತಾನೆ ಸಹಿಸಲು ಸಾಧ್ಯ. ಹೌದು, ತರಬೇತಿಯಲ್ಲಿರುವ ಸೈನಿಕರು, ತಮ್ಮ ಸ್ಮಾರ್ಟ್‌ ಫೋನ್ ಬಳಕೆ ಮಾಡುವುದು ನಿಷಿದ್ಧ, ಆ ಬಗ್ಗೆ ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಸ್ಮಾರ್ಟ್ ಫೋನ್ ಬಳಸಿಕೊಂಡು, ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಇತ್ಯಾದಿಗಳಲ್ಲಿ ವಿಹರಿಸುತ್ತಿದ್ದರು. ಇಂಥವರನ್ನು ಗುರುತಿಸಿ ಕೆಲವು ದಿನಗಳವರೆಗೆ ಅವರ ಫೋನ್ ಕಸಿದುಕೊಂಡು ಲಾಕರ್ ಗಳಲ್ಲಿಡಲಾಗುತ್ತಿತ್ತು. ಆನಂತರ  ಅವರು, ನಾವು ಮತ್ತೆ ತಪ್ಪು ಮಾಡುವುದಿಲ್ಲ, ಮನೆಯವರ ಜೊತೆ ಸಂಪರ್ಕ ಮಾಡಲು ಮಾತ್ರ ಬಳಸುತ್ತೇವೆ ಎಂದು ಕೇಳಿಕೊಂಡಾಗ ಫೋನ್ ಹಿಂದಿರುಗಿಸಲಾಗುತ್ತಿತ್ತು.

ಹೀಗಿದ್ದರೂ ಕೂಡ, ಕೆಲವರು ಸೇನೆಯ ನಿಯಮಗಳನ್ನು  ಉಲ್ಲಂಘಿಸಿ ಮತ್ತೆ ಫೇಸ್ ಬುಕ್ ಇತ್ಯಾದಿಗಳಲ್ಲಿ ಮುಳುಗುತ್ತಿದ್ದರು. ಇಂಥ ಹೊಸಬರಿಗೆ, ಸೇನೆಯ ಹಿರಿಯ ಅಧಿಕಾರಿಗಳು ಪಾಠ ಕಲಿಸಿದ್ದಾದರೂ ಹೇಗೆ ಗೊತ್ತೇ? ಪದೇ ಪದೇ ತಪ್ಪು ಮಾಡುತ್ತಿದ್ದ, ಸುಮಾರು ಐವತ್ತಕ್ಕೂ ಹೆಚ್ಚು ಸೈನಿಕರ ಫೋನ್ ಗಳನ್ನು ಕಸಿದುಕೊಳ್ಳಲಾಯಿತು ಮತ್ತು ಅವರನ್ನೆಲ್ಲ ಬಯಲಿನಲ್ಲಿ ಸೇರುವಂತೆ ಹೇಳಲಾಯಿತು. ಅಲ್ಲಿ, ಅವರ ಫೋನ್‌ ಗಳನ್ನು ಒಂದು ಕಲ್ಲಿನ ಮೇಲಿಟ್ಟು, ಗಾಯಕ್ಕೆ ಕಟ್ಟಲು ಸೊಪ್ಪನ್ನು ಚಚ್ಚಿ ಕುಟ್ಟುವ ಹಾಗೆ ಚಚ್ಚಿ ಚಚ್ಚಿ ಪುಡಿ ಮಾಡಿಸಲಾಯಿತು. ಹೀಗೆ ಮಾಡುವಾಗ, ಅವರೆಲ್ಲರೂ ಅಲ್ಲೇ ಎದುರಿಗೆ ನಿಂತು ನೋಡಲು ಹೇಳಲಾಯಿತು.

‘ಸೇನೆ ತನ್ನ ಸೈನಿಕರನ್ನು ಯುದ್ಧಕ್ಕಾಗಿ ತರಬೇತಿಗೊಳಿಸುತ್ತದೆ. ಯುದ್ಧವಿಲ್ಲದ ಅಥವ ಶಾಂತಿಯ ಸಮಯದಲ್ಲಿ, ಸೈನಿಕರ ಅಶಿಸ್ತಿನ ನಡವಳಿಕೆಗೆ ಅವಕಾಶ ಕೊಟ್ಟರೆ, ಯುದ್ಧದ ಸಮಯದಲ್ಲೂ ಅವರು ಅದನ್ನೇ ಮಾಡಬಹುದು’ ಎಂದು ಸೇನೆಯ ಒಬ್ಬರು ಹಿರಿಯ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ, ವಿವಿಧ ಸ್ಥಳಗಳಲ್ಲಿರುವ ಸೇನಾ ತರಬೇತಿ ಕೇಂದ್ರಗಳು ಮತ್ತು ಕ್ಯಾಂಪ್‌ ಗಳಲ್ಲಿ ಎಸ್‌ಟಿಡಿ ಬೂತ್‌ ಗಳನ್ನು ಸ್ಥಾಪಿಸಲಾಗಿರುತ್ತದೆ. ಸೈನಿಕರು ಅಲ್ಲಿಂದ ತಮ್ಮ ಕುಟುಂಬದ ಸದಸ್ಯರ ಜೊತೆಗೆ ಮಾತನಾಡಲು ಯಾವುದೇ ನಿರ್ಬಂಧ ಇರುವುದಿಲ್ಲ. ಒಟ್ಟಿನಲ್ಲಿ, ಶಿಸ್ತು ಅಂದರೆ ಸೈನಿಕ, ಸೈನಿಕ ಅಂದರೆ ಶಿಸ್ತು ಅನ್ನುವುದನ್ನು ಮನದಟ್ಟು ಮಾಡಿಕೊಡಲು, ಸೇನೆಯ ಅಧಿಕಾರಿಗಳು ಹಲವಾರು ಮಾರ್ಗಗಳನ್ನು ಬಳಸಿಕೊಳ್ಳುತ್ತಾರೆ ಅನ್ನುವುದು ಇದರಿಂದ ಗೊತ್ತಾಗುತ್ತದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ