ರಾಜ್ಯ ಬಿಜೆಪಿ ನಾಯಕರಿಗೆ ‘ಷಾ’ ಸಲಹೆ

Amith sha suggestions to state BJP leaders

15-12-2017

ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಮರಳಿ ಕಮಲ ಅರಳಲಿದೆ ಎಂದು ಪೂರ್ವಭಾವಿ ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿ ನಡೆಸುತ್ತಿರುವ ಪರಿವರ್ತನಾ ರ‍್ಯಾಲಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಪಕ್ಷದ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ನವ ಕರ್ನಾಟಕ ಪರಿವರ್ತನಾ ರ‍್ಯಾಲಿಯನ್ನು ಯಶಸ್ವಿಯಾಗಿ ಜನರಿಗೆ ತಲುಪುವಂತೆ ನಡೆಸಬೇಕು. ರಾಜ್ಯ ಘಟಕದ ಎಲ್ಲಾ ನಾಯಕರು ಹಾಗೂ ಕೇಂದ್ರವನ್ನು ಪ್ರತಿನಿಧಿಸುವ ಸಂಸದರು, ಸಚಿವರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪಕ್ಷವನ್ನು ಬಲಗೊಳಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿರ್ದೇಶನ ಕೊಟ್ಟಿದ್ದಾರೆ.

ಗುಜರಾತ್‍ನಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ 6ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಾದರೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಏಕೆ ಸಾಧ್ಯವಿಲ್ಲ ಎಂದು ರಾಜ್ಯ ಘಟಕದ ನಾಯಕರನ್ನು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಬೇಕು. ತಳಮಟ್ಟದಿಂದ ಕಾರ್ಯಕರ್ತರನ್ನು ಈಗಿನಿಂದಲೇ ಚುನಾವಣೆಗೆ ಹುರಿದುಂಬಿಸಿದರೆ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಸಲಹೆ ಮಾಡಿದ್ದಾರೆ.

ಕೇವಲ ನರೇಂದ್ರ ಮೋದಿಯಿಂದ ಮಾತ್ರ ಮತಗಳಿಸಲು ಸಾಧ್ಯವಿಲ್ಲ. ಸತತ ಹೋರಾಟ, ಸಂಘಟನೆ, ಸ್ಥಳೀಯ ಸರ್ಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ನೀವು ಜನರಿಗೆ ಎಷ್ಟು ಹತ್ತಿರವಾಗುತ್ತೀರೋ ಅಷ್ಟು ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮೂಲಗ ಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಲೇಬೇಕೆಂದು ಪಣ ತೊಟ್ಟಿರುವ ಅಮಿತ್ ಷಾ ಈ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಬಾರಿ ಮೂರು ದಿನಗಳ ಪ್ರವಾಸ ಬಂದಿದ್ದ ಅಮಿತ್ ಷಾ, ಸಂಘಟನೆ, ಪದಾಧಿಕಾರಿಗಳ ನೇಮಕಾತಿ, ಸರ್ಕಾರ ವಿರುದ್ಧ ಹೋರಾಟ ಸೇರಿದಂತೆ ಸ್ಥಳೀಯ ನಾಯಕರಿಗೆ ಹಲವು ವಿಷಯಗಳಲ್ಲಿ ನೀತಿ ಪಾಠ ಮಾಡಿದರು. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಫಲಿತಾಂಶದ ನಂತರ ಸರ್ಕಾರ ರಚನೆಯಾದ ಬಳಿಕ ಬೆಂಗಳೂರಿಗೆ ಆಗಮಿಸಲಿರುವ ಅವರು ಪಕ್ಷದ ಚಟುವಟಿಕೆಗಳ ಬಗ್ಗೆ ನಿಗಾವಹಿಸಲಿದ್ದಾರೆ.

ಜನವರಿ 25ರವರೆಗೆ ನವಕರ್ನಾಟಕ ಪರಿವರ್ತನಾ ಯಾತ್ರೆ ನಡೆಯಲಿದ್ದು, ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗ , ಚಿತ್ರದುರ್ಗ, ಹೈದರಾಬಾದ್ ಕರ್ನಾಟಕದ ಬಳ್ಳಾರಿ, ರಾಯಚೂರು, ಕೊಪ್ಪಳ, ಮುಂಬೈ ಕರ್ನಾಟಕದ ಹಾವೇರಿ, ಗದಗ, ಹುಬ್ಬಳ್ಳಿ , ಧಾರವಾಡ ಹಾಗೂ ದಕ್ಷಿಣ ಕರ್ನಾಟಕದಲ್ಲೂ ಸಂಚರಿಸಲಿದೆ. ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆದರೆ ನಂತರ ಮೈಸೂರಿನಲ್ಲೂ ಭಾರೀ ಸಾರ್ವಜನಿಕ ಸಮಾರಂಭ ನಡೆಯಲಿದೆ. ಜನವರಿ 25ರಂದು ಬೆಂಗಳೂರಿನಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಕಾರ್ಯಕರ್ತರನ್ನು ಹುರಿದುಂಬಿಸುವ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Amit shah BJP PRESIDENT ಚುನಾವಣೆಗೆ ರಣಕಹಳೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ