ಸೋನಿಯಾ ಗಾಂಧಿ ನಿವೃತ್ತಿ...?

Sonia Gandhi may retire from politics

15-12-2017

ಕಾಂಗ್ರೆಸ್ ಪಕ್ಷದ ಅಧಿನಾಯಕಿ ಎಂದೇ ಕರೆಸಿಕೊಳ್ಳುವ ಸೋನಿಯಾ ಗಾಂಧಿ, ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಸೋನಿಯಾ ಪುತ್ರ ರಾಹುಲ್ ಗಾಂಧಿ ಈಗಾಗಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸದ್ಯದಲ್ಲೇ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸೋನಿಯಾ ಗಾಂಧಿ, ’ಇದೀಗ ನಿವೃತ್ತಿ ಪಡೆಯುವುದೇ ನನ್ನ ಕೆಲಸ’ ಎಂದಿದ್ದಾರೆ.

ತಮ್ಮ ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಬಳಿಕ ಸಾಕಷ್ಟು ಕಾಲ ರಾಜಕಾರಣದಿಂದ ದೂರವೇ ಉಳಿದಿದ್ದ ಸೋನಿಯಾ ಗಾಂಧಿ, 1998ರಲ್ಲಿ ಸೀತಾರಾಮ್ ಕೇಸರಿ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಅತ್ಯಂತ ದೀರ್ಘಕಾಲದವರೆಗೆ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸೋನಿಯಾ ಗಾಂಧಿ, 2004ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಕಾಣಿಕೆ ನೀಡಿದ್ದರು. 2014ರ ವರೆಗೂ ಎರಡು ಅವಧಿಗಳಲ್ಲಿ, ಯುಪಿಎ ಮೈತ್ರಿ ಕೂಟದ ಸಾರಥಿಯಾಗಿ ಕೆಲಸ ಮಾಡಿದ್ದರು. ರಾಷ್ಟ್ರೀಯ ಸಲಹಾ ಮಂಡಳಿ ಮುಖ್ಯಸ್ಥೆಯೂ ಆಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಸೋನಿಯಾ ಗಾಂಧಿಯವರ ಆರೋಗ್ಯ ಅಷ್ಟೇನೂ ಉತ್ತಮವಾಗಿಲ್ಲದಿರುವುದೂ ಕೂಡ, ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿಯಲು ನಿರ್ಧರಿಸಿರುವುದಕ್ಕೆ ಕಾರಣವಾಗಿರಬಹುದು. ಒಟ್ಟಿನಲ್ಲಿ, ರಾಜೀವ್ ಗಾಂಧಿ ನಿಧನದ ನಂತರದ ವರ್ಷಗಳಲ್ಲಿ, ನೆಹರೂ-ಗಾಂಧಿ ಕುಟುಂಬಸ್ಥರ ಪಾತ್ರವಿಲ್ಲದೆ ದಿಕ್ಕೆಟ್ಟಂತಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ಕೊಟ್ಟು ಅಧಿಕಾರಕ್ಕೆ ತಂದ ಶ್ರೇಯ ಸೋನಿಯಾ ಗಾಂಧಿಯವರಿಗೆ ಸಲ್ಲಬೇಕು.

ಸೋನಿಯಾ ನಿವೃತ್ತಿ ಸಂಬಂಧ ಮಾಧ್ಯಮದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಸ್ಪಷ್ಟೀಕರಣ ಕೊಟ್ಟಿರುವ ಕಾಂಗ್ರೆಸ್ ಪಕ್ಷದ ವಕ್ತಾರ ರಣ್‌ದೀಪ್ ಸುರ್ಜೆವಾಲ, ‘ಸೋನಿಯಾ ಗಾಂಧಿಯವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸ್ಥಾನದಿಂದ ನಿವೃತ್ತರಾಗಿದ್ದಾರಷ್ಟೇ ಹೊರತು, ರಾಜಕಾರಣದಿಂದ ಅಲ್ಲ’ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sonia Gandhi AICC ರಾಜಕಾರಣ ರಾಜೀವ್ ಗಾಂಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ