ರಾಜ್ಯವನ್ನಾವರಿಸಲಿದೆ ಕತ್ತಲು...?

power crisis for state...?

14-12-2017

ಬೆಂಗಳೂರು: ಕಲ್ಲಿದ್ದಲಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕಕ್ಕೆ ಆಘಾತ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದ್ದು ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ನಂತರ ರಾಜ್ಯ ಪವರ್ ಕಟ್ ಸಮಸ್ಯೆಯನ್ನು ಎದುರಿಸುವುದು ಅನಿವಾರ್ಯವಾಗಲಿದೆ.

ಸಧ್ಯಕ್ಕೆ ರಾಜ್ಯಕ್ಕೆ ಅಗತ್ಯವಿರುವ 9617 ಮೆಗಾವ್ಯಾಟ್(207) ಯೂನಿಟ್ ವಿದ್ಯುತ್ ಸರಬರಾಜಾಗುತ್ತಿದ್ದರೂ ಇದರಲ್ಲಿ ಕೇಂದ್ರ ಸರ್ಕಾರದ ನೆರವು ಹೆಚ್ಚಿನ ಪ್ರಮಾಣದಲ್ಲಿದ್ದು ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅದು ಕೈ ಕೊಡುವ ಆತಂಕ ಕಾಣತೊಡಗಿದೆ. ರಾಜ್ಯದಲ್ಲಿ ಪೂರೈಕೆಯಾಗುತ್ತಿರುವ 207 ಮಿಲಿಯನ್ ವಿದ್ಯುತ್ ಬೇಡಿಕೆಯ ಪೈಕಿ 70 ಮಿಲಿಯನ್ ಯೂನಿಟ್ ವಿದ್ಯುತ್ ಕೇಂದ್ರದ ವಿದ್ಯುತ್ ಸ್ಥಾವರಗಳಿಂದ ಲಭ್ಯವಾಗುತ್ತಿದ್ದು, ಇದು ರಾಜ್ಯಕ್ಕೆ ಹಂಚಿಕೆಯಾಗಿರುವ ವಿದ್ಯುತ್ ಗೆ ಹೋಲಿಸಿದರೆ ಅತ್ಯಂತ ಹೆಚ್ಚು.

ಕೇಂದ್ರದ ವಿದ್ಯುತ್ ಗ್ರಿಡ್ ಗಳಿಂದ ರಾಜ್ಯಕ್ಕೆ 1750 ಮೆಗಾವ್ಯಾಟ್ ವಿದ್ಯುತ್ ಹಂಚಿಕೆಯಾಗಿದ್ದರೂ, ಇದೀಗ ಕರ್ನಾಟಕ 3500 ರಿಂದ 3900 ಮೆಗಾವ್ಯಾಟ್ ವಿದ್ಯುತ್ ಅನ್ನು ಕೇಂದ್ರದ ವಿದ್ಯುತ್ ಗ್ರಿಡ್ ಗಳಿಂದ ಪಡೆಯುತ್ತಿದೆ. ಈ ಮಧ್ಯೆ ಜಲವಿದ್ಯುತ್ ನಿಂದ ಪ್ರತಿ ದಿನ 23 ಮಿಲಿಯನ್ ಯೂನಿಟ್ ವಿದ್ಯುತ್ ಪಡೆದರೆ ಜೂನ್ ಅಂತ್ಯದವರೆಗೆ ಜಲಾಶಯಗಳಲ್ಲಿರುವ ನೀರು ಸಾಕಾಗುತ್ತದೆ. ಆದರೆ ವಿದ್ಯುತ್ ಬೇಡಿಕೆಯನ್ನು ಪೂರೈಸುವ ಸಲುವಾಗಿ 30 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತಿದೆ.

ಹೀಗೆ ಜಲವಿದ್ಯುತ್ ಉತ್ಪಾದನೆಯ ಮೂಲಕ ಶೇಕಡಾ 20 ರಷ್ಟು ಹೆಚ್ಚುವರಿ ವಿದ್ಯುತ್ ಪಡೆಯುತ್ತಿರುವುದರಿಂದ ಜೂನ್ ತಿಂಗಳವರೆಗೆ ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ನೀರು ಉಳಿಯುವುದಿಲ್ಲ ಎಂದು ಮೂಲಗಳು ಆತಂಕ ವ್ಯಕ್ತಪಡಿಸಿವೆ. ಈ ಮಧ್ಯೆ ಉಷ್ಣ ವಿದ್ಯುತ್ ಸ್ಥಾವರಗಳಿಂದ 37 ಮಿಲಿಯನ್ ಯೂನಿಟ್ ಗಳಷ್ಟು ವಿದ್ಯುತ್ ಲಭ್ಯವಾಗುತ್ತಿದ್ದರೂ ಬೇರೆ ರಾಜ್ಯಗಳಿಗೆ ಕೇಂದ್ರ ಮಂಜೂರು ಮಾಡಿರುವ ಕಲ್ಲಿದ್ದಲು ಬ್ಲಾಕ್ ನಿಂದ ಖಾಸಗಿ ಗುತ್ತಿಗೆದಾರರು ಹೆಚ್ಚುವರಿ ಕಲ್ಲಿದ್ದಲನ್ನು ಪಡೆದು ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದಾರೆ.

ಹೀಗಾಗಿ ಈ ವಿಷಯದಲ್ಲಿ ಯಾವಾಗ ಧಕ್ಕೆಯಾಗುತ್ತದೆ ಎಂದು ಹೇಳುವುದು ಕಷ್ಟ. ಮಾರ್ಚ್ ತಿಂಗಳ ನಂತರ ಈ ರೀತಿ ರಾಜ್ಯಕ್ಕೆ ಬರುತ್ತಿರುವ ಕಲ್ಲಿದ್ದಲನ್ನು ಕಟ್ ಮಾಡಿ, ತನ್ನ ವಿದ್ಯುತ್ ಗ್ರಿಡ್ ಗಳಿಂದ ಒದಗಿಸುತ್ತಿರುವ ವಿದ್ಯುತ್ ಅನ್ನು ಕೇಂದ್ರ ಸರ್ಕಾರ ನಿಗದಿತ ಪ್ರಮಾಣಕ್ಕೆ ಇಳಿಸಿದರೆ ಕರ್ನಾಟಕ ಗಂಭೀರ ಸ್ವರೂಪದ ವಿದ್ಯುತ್ ಕೊರತೆ ಎದುರಿಸುವುದು ಅನಿವಾರ್ಯವಾಗುತ್ತದೆ. ಇನ್ನು ಪವನ ವಿದ್ಯುತ್ ನಿಂದ ಮೂರು ಮಿಲಿಯನ್ ಯೂನಿಟ್ ಲಭ್ಯವಾಗುತ್ತಿದ್ದರೆ, ಭಾರೀ ನಿರೀಕ್ಷೆ ಇರಿಸಿಕೊಂಡಿದ್ದ ಸೋಲಾರ್ ವಿದ್ಯುತ್ ಘಟಕಗಳಿಂದ ಐದು ಮಿಲಿಯನ್ ಯೂನಿಟ್ ವಿದ್ಯುತ್ ಮಾತ್ರ ಲಭ್ಯವಾಗುತ್ತಿದೆ. ಹೀಗಾಗಿ ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ರಾಜ್ಯಕ್ಕೆ ಖಾಸಗಿ ಗುತ್ತಿಗೆದಾರರ ಮೂಲಕ ಸರಬರಾಜಾಗುತ್ತಿರುವ ಕಲ್ಲಿದ್ದಲನ್ನು ಬಂದ್ ಮಾಡಿ, ಕೇಂದ್ರದ ವಿದ್ಯುತ್ ಗ್ರಿಡ್ ಗಳಿಂದ ರವಾನೆಯಾಗುತ್ತಿರುವ ವಿದ್ಯುತ್ ಅನ್ನು ಅರ್ಧಕ್ಕರ್ಧ ಇಳಿಸಿದರೆ ಸಮಸ್ಯೆ ಶುರುವಾಗುತ್ತದೆ. ಅದೇ ರೀತಿ ಈಗಾಗಲೇ ಶೇಕಡಾ 20 ರಷ್ಟು ಹೆಚ್ಚು ಪ್ರಮಾಣದಲ್ಲಿ ಜಲವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ಆ ಮೂಲದಿಂದ ಗರಿಷ್ಟ ವಿದ್ಯುತ್ ಉತ್ಪಾದಿಸುವುದು ಅನಿವಾರ್ಯವಾಗುವುದರಿಂದ ಜಲಮೂಲಗಳು ಬತ್ತಿ ಹೋಗುತ್ತವೆ.

ಹೀಗಾಗಿ ರಾಜ್ಯ ಮಾರ್ಚ್ ತಿಂಗಳ ನಂತರ ಪವರ್ ಕಟ್ ಎದುರಿಸಲು ಸಜ್ಜಾಗಲೇಬೇಕಿದ್ದು ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗವನ್ನು ತಕ್ಷಣ ಕಂಡುಕೊಳ್ಳದಿದ್ದರೆ ದಿನವೊಂದಕ್ಕೆ ಎಂಟು ಗಂಟೆ ಕಾಲ ಪವರ್ ಕಟ್ ಮಾಡುವ ಆತಂಕ ಎದುರಾಗಬಹುದು ಎಂದು ಇಂಧನ ಇಲಾಖೆಯ ಅಧಿಕಾರಿಗಳು ಸರ್ಕಾರದೆದುರು ಆತಂಕ ತೋಡಿಕೊಂಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ