ಕುಖ್ಯಾತ ಕಳ್ಳರ ಬಂಧನ...!

notorious thief arrested ...!

13-12-2017

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳ ಸೇರಿ ಇಬ್ಬರು ಕಳ್ಳರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 25ಕ್ಕೂ ಹೆಚ್ಚು ಮನೆಗಳ ಕಳ್ಳತನ ಪ್ರಕರಣಗಳನ್ನು ಬೇಧಿಸಿ 17 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೊಮ್ಮನಹಳ್ಳಿಯ ಹೊಂಗಸಂದ್ರದ ಮಂಜುನಾಥ್ ಅಲಿಯಾಸ್ ಮಂಜು (35), ತಮಿಳುನಾಡಿನ ಹೊಸೂರಿನ ಮುನಿಕೃಷ್ಣ ಅಲಿಯಾಸ್ ನರಸಿಂಹ (35) ಬಂಧಿತ ಆರೋಪಿಗಳಾಗಿದ್ದಾರೆ. ಆನೇಕಲ್‍ನ ಮುತ್ತಕಟ್ಟಿ ದಿಣ್ಣೆ ಮೂಲದ ಆರೋಪಿ ಮಂಜು, ಗಾರ್ಮೆಂಟ್ಸ್‍ ಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರನ್ನು ಗುರುತಿಸಿ, ಅವರ ಮನೆಗಳಿಗೆ ಹಗಲಿನ ವೇಳೆ ಬೀಗ ಮುರಿದು ಒಳ ನುಗ್ಗಿ ಕಳ್ಳತನ ಮಾಡುತ್ತಿದ್ದನು.

ಈತನಿಂದ ಬೊಮ್ಮನಹಳ್ಳಿಯ 15, ಮಡಿವಾಳ, ಪರಪ್ಪನ ಅಗ್ರಹಾರದ ತಲಾ 2 ಸೇರಿ 19 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಬಂಧಿತನಿಂದ 12 ಲಕ್ಷ ಬೆಲೆಯ ಚಿನ್ನ, ಬೆಳ್ಳಿ ಆಭರಣಗಳು, ಬೀಗ ಮುರಿಯಲು ಉಪಯೋಗಿಸುತ್ತಿದ್ದ ಕಟರ್ ಮಿಷನ್, 15 ಬೀಗದ ಕೈಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಮುನಿಕೃಷ್ಣನಿಂದ 5 ಲಕ್ಷ ಬೆಲೆಯ ಚಿನ್ನಾಭರಣ, 7 ಲ್ಯಾಪ್‍ಟಾಪ್‍ಗಳು, 2 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಚಿಕ್ಕ ವಯಸ್ಸಿನಲ್ಲೇ ಮನೆಬಿಟ್ಟು ದುಶ್ಚಟಗಳಿಗೆ ದಾಸನಾಗಿ ಮನೆ ಕಳ್ಳತನಕ್ಕಿಳಿದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಯಶವಂತಪುರ, ಮಡಿವಾಳ ಹಾಗೂ ಹೊಸೂರು ಠಾಣೆಗಳ ವ್ಯಾಪ್ತಿಯಲ್ಲಿ 6 ಕನ್ನಗಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಈತ, ಜೈಲಿಗೆ ಹೋಗಿ ಬಂದು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಹಳೆ ಆರೋಪಿಯಾಗಿದ್ದಾನೆ. ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Thief Arrested ಕುಖ್ಯಾತ ಪೊಲೀಸರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ