‘100 ಲಕ್ಷ ಟನ್ ಮೀರಿದ ಆಹಾರ ಉತ್ಪಾದನೆ’13-12-2017

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ರಾಜ್ಯದ ಆಹಾರ ಉತ್ಪಾದನೆಯ ಪ್ರಮಾಣ 100 ಲಕ್ಷ ಟನ್‍ಗಳನ್ನು ಮೀರಲಿದ್ದು ಒಟ್ಟಾರೆಯಾಗಿ 110 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯಾಗಲಿದೆ ಎಂದು ಕೃಷಿ ಸಚಿವ ಭೈರೇಗೌಡ ಹೇಳಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2013-14 ರಲ್ಲಿ ಆಹಾರ ಉತ್ಪಾದನೆಯ ಪ್ರಮಾಣ 130 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯಾಗಿತ್ತು. ಅದಾದ ನಂತರ ಯಾವ ವರ್ಷಗಳಲ್ಲೂ ನೂರು ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯಾಗಿರಲಿಲ್ಲ ಎಂದರು. ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮು ಉತ್ತಮವಾಗಿದ್ದ ಪರಿಣಾಮವಾಗಿ ಆಹಾರ ಧಾನ್ಯ ಉತ್ಪಾದನೆಯ ಪ್ರಮಾಣ 110 ಲಕ್ಷ ಟನ್‍ಗಳಿಗೇರಲಿದೆ ಎಂದರು. ಅಂದ ಹಾಗೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸಮರ್ಪಕ ಪ್ರಮಾಣದ ಮಳೆ ಬರಲಿಲ್ಲ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ 100 ಲಕ್ಷ ಟನ್ ಆಹಾರ ಉತ್ಪಾದನೆಯ ನಿರೀಕ್ಷೆ ಇದ್ದರೂ 75 ಲಕ್ಷ ಟನ್ ಉತ್ಪಾದನೆಗೆ ಸೀಮಿತವಾಯಿತು ಎಂದರು.

ಹಿಂಗಾರು ಹಂಗಾಮಿನಲ್ಲಿ ಮೂವತ್ಮೂರು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯುತ್ತದೆ ಎಂದು ಅಂದಾಜು ಮಾಡಲಾಗಿದ್ದು, ಈಗಾಗಲೇ ಮೂವತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಈ ತಿಂಗಳ ಅಂತ್ಯದೊಳಗೆ ಉದ್ದೇಶಿತ ಪ್ರಮಾಣದ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ ಎಂದರು. ಹೀಗಾಗಿ ಸಧ್ಯಕ್ಕೆ ಇಪ್ಪತ್ತಾರರಿಂದ ಇಪ್ಪತ್ತೇಳು ಲಕ್ಷ ಟನ್ ಆಹಾರ ಧಾನ್ಯ ಹಿಂಗಾರು ಹಂಗಾಮಿನಲ್ಲಿ ಬರಬಹುದು ಎಂದು ಅಂದಾಜು ಮಾಡಲಾಗಿದ್ದರೂ ಆ ಪ್ರಮಾಣ ಹೆಚ್ಚಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾವೇರಿ ಹಾಗೂ ತುಂಗಭದ್ರಾ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇರುವುದರಿಂದ ರೈತರ ಬೆಳೆಗೆ ನೀರು ಒದಗಿಸುವುದಾಗಿ ಈಗಾಗಲೇ ಘೋಷಿಸಲಾಗಿದೆ. ಹೀಗಾಗಿ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳಿದರು.

ಈ ಮಧ್ಯೆ ರಾಜ್ಯದಲ್ಲಿ 2300 ರೂ ಬೆಂಬಲ ಬೆಲೆ ನೀಡಿ ರಾಗಿಯನ್ನು ಖರೀದಿ ಮಾಡಲು ನಿರ್ಧರಿಸಲಾಗಿದ್ದು ಸಂಪುಟ ಉಪಸಮಿತಿಯಲ್ಲಿ ಅಂತಿಮ ನಿರ್ಧಾರ ಕೈಗೊಂಡು ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ವಿವರ ನೀಡಿದರು. ರಾಗಿಗೆ ಕೇಂದ್ರ ಸರ್ಕಾರ 1900 ರೂಗಳನ್ನು ಬೆಂಬಲ ಬೆಲೆಯಾಗಿ ನೀಡುತ್ತದೆ. ರಾಜ್ಯ ಸರ್ಕಾರ 400 ರೂಗಳನ್ನು ಬೋನಸ್ ಆಗಿ ನೀಡುತ್ತದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದರು. ಇದೇ ರೀತಿ ಶೇಂಗಾ ಅನ್ನು 4450 ರೂ ಬೆಂಬಲ ಬೆಲೆ ನೀಡಿ ಖರೀದಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಹದಿನೈದು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಮೆಕ್ಕೆ ಜೋಳ ಖರೀದಿಗೆ ಕೇಂದ್ರ ಸರ್ಕಾರ ಇನ್ನೂ ಒಲವು ತೋರಿಸಿಲ್ಲ. ಪಡಿತರ ಪದ್ಧತಿಯಡಿ ವಿತರಿಸುವ ಆಹಾರ ಧಾನ್ಯಗಳನ್ನು ಮಾತ್ರ ಬೆಂಬಲ ಬೆಲೆ ನೀಡಿ ಖರೀದಿಸುವುದಾಗಿ ಅದು ಹೇಳುವುದು ಸರಿಯಲ್ಲ. ಮೆಕ್ಕೆ ಜೋಳದ ಬೆಲೆ ಕುಸಿದಾಗ ಹಿಂದಿನಿಂದಲೂ ಕೇಂದ್ರ ಸರ್ಕಾರವೇ ಅದನ್ನು ಖರೀದಿ ಮಾಡುತ್ತಿದೆ.

ಹೀಗಾಗಿ ಮೆಕ್ಕೆ ಜೋಳವನ್ನೂ ಖರೀದಿ ಮಾಡಬೇಕು ಎಂದ ಅವರು, ಆದಷ್ಟು ಬೇಗ ಮೆಕ್ಕೆ ಜೋಳ ಹಾಗೂ ತೊಗರಿಬೇಳೆಯನ್ನೂ ಬೆಂಬಲ ಬೆಲೆ ನೀಡಿ ಖರೀದಿ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಬೆಂಬಲ ಬೆಲೆ ನೀಡಿ ವಿವಿಧ ಬೆಳೆಗಳನ್ನು ಖರೀದಿಸಲು 1431 ಕೋಟಿ ರೂ ವೆಚ್ಚ ಮಾಡಲಾಗಿತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ 4919 ಕೋಟಿ ರೂ.ಗಳನ್ನು ಇದೇ ಕಾರಣಕ್ಕಾಗಿ ವೆಚ್ಚ ಮಾಡಿದ್ದೇವೆ. ಇದು 6500 ಯಿಂದ 7000 ಕೋಟಿ ರೂ.ಗಳಿಗೆ ತಲುಪಬಹುದು ಎಂದೂ ಅವರು ಸ್ಪಷ್ಟ ಪಡಿಸಿದರು. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದ ಅವರು, 2016-17 ರಲ್ಲಿ 4241.54 ಕೋಟಿ ರೂಗಳನ್ನು ನಿಗದಿ ಮಾಡಲಾಗಿದ್ದರೂ 4713.22 ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ. ಅಂದರೆ ಶೇಕಡಾ 111.1 ರಷ್ಟು ಗುರಿ ಸಾಧಿಸಲಾಗಿದೆ ಎಂದು ಹೇಳಿದರು.

ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆ ನೀಡಲು ಈಗಾಗಲೇ 325 ಕೇಂದ್ರಗಳನ್ನು ಆರಂಭಿಸಲಾಗಿದ್ದು, ಇನ್ನೂ ಹೆಚ್ಚುವರಿಯಾಗಿ 140 ಕೇಂದ್ರಗಳನ್ನು ಪ್ರಾರಂಭಿಸಲು ಸಜ್ಜು ಮಾಡಿಕೊಳ್ಳಲಾಗಿದೆ. ಪ್ರತಿ ಹೋಬಳಿಗೆ ಒಂದರಂತೆ ಬಾಡಿಗೆಗೆ ಯಂತ್ರೋಪಕರಣ ನೀಡುವ ಕೇಂದ್ರ ಮಾಡುವ ಉದ್ದೇಶ ಸರ್ಕಾರಕ್ಕಿದ್ದರೂ ಖಾಸಗಿಯವರೂ ಮುಂದೆ ಬರಬೇಕಾದ ಅಗತ್ಯವಿದೆ. ಆದರೆ ತುಂಬ ಕಡೆ ಬಾಡಿಗೆಗೆ ಯಂತ್ರೋಪಕರಣಗಳನ್ನು ನೀಡುವ ಕೇಂದ್ರಗಳ ಸ್ಥಾಪನೆಗೆ ಖಾಸಗಿಯವರು ಮುಂದೆ ಬರುತ್ತಿಲ್ಲ ಎಂದು ಹೇಳಿದರು.

ರೈತರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಈಗಾಗಲೇ ರಾಜ್ಯದಲ್ಲಿ 1.82 ಲಕ್ಷ ಕೃಷಿ ಹೊಂಡಗಳನ್ನು ಸ್ಥಾಪಿಸಲಾಗಿದೆ. ಈ ತಿಂಗಳ ಅಂತ್ಯದೊಳಗಾಗಿ ಇದರ ಪ್ರಮಾಣ 2.11 ಲಕ್ಷಗಳಿಗೇರಲಿದೆ ಎಂದು ನುಡಿದರು. ಕೃಷಿ ಹೊಂಡಗಳಲ್ಲಿ ಯಾರಾದರೂ ಬೀಳುವುದು ಮತ್ತೇನಾದರೂ ಅವಘಡಗಳು ಸಂಭವಿಸುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭೈರೇಗೌಡ ಅವರು, ಇದೇ ಕಾರಣಕ್ಕಾಗಿ ಹೊಂಡಳಿಗೆ ನೆಟ್ ಹಾಕಿಕೊಳ್ಳಲು ರೈತರಿಗೆ ಸೂಚನೆ ನೀಡಲಾಗಿದೆ. ಮತ್ತು ಇದಕ್ಕಾಗಿ ನೆರವು ನೀಡುವುದಾಗಿ ಹೇಳಲಾಗಿದೆ ಎಂದರು.

ರಾಜ್ಯದಲ್ಲಿ 78 ಲಕ್ಷ ರೈತರಿಗೆ ಈಗಾಗಲೇ ಮಣ್ಣು ಚೀಟಿಗಳನ್ನು ನೀಡಲಾಗಿದ್ದು ಮಣ್ಣು ಪರೀಕ್ಷೆಯ ಮೊದಲ ಹಂತ ಮುಗಿದಿದೆ. ಈಗ ಎರಡನೇ ಹಂತದ ಮಣ್ಣು ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು. ಎಲ್ಲ ಭಾಗಗಳಲ್ಲಿ ಮಣ್ಣಿನ ಗುಣವನ್ನು ಪರೀಕ್ಷಿಸಿ ಅಲ್ಲಿ ಬೆಳೆಯಬಹುದಾದ ಆರು ಬೆಳೆಗಳನ್ನು ಗುರುತಿಸಿ ಈ ಪೈಕಿ ಯಾವ ಬೆಳೆ ಬೆಳೆಯಬೇಕು?ಯಾವ ಗೊಬ್ಬರವನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು?ಎಂದು ರೈತರಿಗೆ ಹೇಳಲಾಗುತ್ತದೆ ಎಂದು ಹೇಳಿದರು.

ಒಂದು ಮಣ್ಣು ಚೀಟಿ ನೀಡಲು 400 ರೂ ವೆಚ್ಚವಾಗುತ್ತದೆ. ಈ ಪೈಕಿ ಕೇಂದ್ರ ಸರ್ಕಾರ 198 ರೂ ನೀಡಿದರೆ,ರಾಜ್ಯ ಸರ್ಕಾರ 202 ರೂ ನೀಡುತ್ತದೆ. ಈ ಚೀಟಿ ಹೊಂದಿದ ರೈತರ ಭೂಮಿಯ ಹನ್ನೆರಡು ಅಂಶಗಳನ್ನು ಪರೀಕ್ಷಿಸಲಾಗುವುದು ಎಂದು ಹೇಳಿದರು. ಅನುಸೂಚಿತ ಜಾತಿ, ಪಂಗಡಗಳ ಕಾಯ್ದೆಯಡಿ ಕೃಷಿ ಕ್ಷೇತ್ರಕ್ಕೆ ಒದಗಿಸಲಾದ ಹಣವನ್ನು ಸಮರ್ಪಕವಾಗಿ ಬಳಸಿಲ್ಲ. ಹೀಗಾಗಿ ಇಲಾಖೆಗೆ ನೋಟೀಸ್ ನೀಡುವುದಾಗಿ ಸಚಿವ ಆಂಜನೇಯ ಅವರು ಹೇಳಿರುವ ಕುರಿತು ಉತ್ತರಿಸಿದ ಅವರು,ಸದರಿ ಯೋಜನೆಯಡಿ ಅವರು ನೀಡಿದ ಎಲ್ಲ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದರು.

ಯೋಜನೆಯಡಿ ಕೃಷಿ ಕ್ಷೇತ್ರದ ಅಧ್ಯಯನಕ್ಕಾಗಿ ಪರಿಶಿಷ್ಟ ಜಾತಿ, ಪಂಗಡದ ಕೃಷಿ ಕೂಲಿ ಕಾರ್ಮಿಕರನ್ನು ವಿದೇಶಗಳಿಗೆ ಕಳಿಸಬೇಕು ಎಂದು ಹೇಳಲಾಗಿತ್ತು. ಆದರೆ ಚುನಾವಣೆ ಹತ್ತಿರವಿರುವುದರಿಂದ ಇದನ್ನು ಬೇಡ ಎಂದು ಸಿಎಂಗೆ ಮನವಿ ಮಾಡಿಕೊಳ್ಳಲಾಗಿದೆ. ಅವರೂ ಒಪ್ಪಿದ್ದಾರೆ. ಹೀಗಾಗಿ ಆ ಸಮುದಾಯಕ್ಕೇ ಬೇರೆ ಯೋಜನೆಗಳಡಿ ಸದರಿ ಹಣವನ್ನು ಒದಗಿಸಲಾಗಿದೆ ಎಂದು ಹೇಳಿದರು. ಗಂಗಾ ಕಲ್ಯಾಣ ಯೋಜನೆಯಡಿ ಆ ಸಮುದಾಯದವರಿಗೆ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡಬೇಕು ಎಂದು ಹೇಳಿದ್ದರು. ಅದೊಂದು ಉತ್ತಮ ಸಲಹೆ. ಹೀಗಾಗಿ ಅದನ್ನು ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.

ಇದೇ ರೀತಿ ಟ್ರಾಕ್ಟರ್‍ಗಳ ಖರೀದಿಗೆ ನೀಡಲಾಗುತ್ತಿದ್ದ ಸಹಾಯಧನದ ಪ್ರಮಾಣವನ್ನು ಎರಡು ಲಕ್ಷ ರೂಗಳಿಂದ ಮೂರು ಲಕ್ಷ ರೂಗಳಿಗೆ ಏರಿಸಬೇಕು ಎಂದು ಹೇಳಿದ್ದರು. ಆದರೆ ಒದಗಿಸಲಾಗಿರುವ ಹಣಕ್ಕೂ,ಬಂದಿರುವ ಅರ್ಜಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಉದ್ದೇಶವನ್ನು ಈಡೇರಿಸುವುದು ಕಷ್ಟ ಎಂಬ ಕಾರಣಕ್ಕಾಗಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವುದಕ್ಕೆ ಸದರಿ ಹಣವನ್ನು ಬಳಸಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

krishna byre gowda Agriculture ಉತ್ಪಾದನೆ ಹೆಕ್ಟೇರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ